ನಟ ರಣಬೀರ್ ಕಪೂರ್ (Ranbir Kapoor) ಅವರಿಗೆ ಕೋಟ್ಯಂತರ ಅಭಿಮಾನಿಗಳು ಇದ್ದಾರೆ. ಅವರು ಹೋದಲ್ಲಿ ಬಂದಲ್ಲಿ ಜನರು ಮುತ್ತಿಕೊಳ್ಳುತ್ತಾರೆ. ನೆಚ್ಚಿನ ನಟನ ಜೊತೆ ಒಂದೇ ಒಂದು ಸೆಲ್ಫಿ ತೆಗೆದುಕೊಳ್ಳಬೇಕು ಎಂಬುದು ಫ್ಯಾನ್ಸ್ (Ranbir Kapoor Fans) ಬಯಕೆ. ಆದರೆ ಎಲ್ಲರ ಕೈಗೂ ರಣಬೀರ್ ಕಪೂರ್ ಸಿಗುವುದಿಲ್ಲ. ಅಪರೂಪಕ್ಕೆ ಸಿಕ್ಕರೆ ಆ ಚಾನ್ಸ್ ಯಾರೂ ಬಿಡಲ್ಲ. ಆದರೆ ಈ ರೀತಿ ಸೆಲ್ಫಿ ತೆಗೆದುಕೊಳ್ಳಲು ಬಂದ ಅಭಿಮಾನಿಯೊಬ್ಬರ ಜೊತೆ ರಣಬೀರ್ ಕಪೂರ್ ಅವರು ಕೆಟ್ಟದಾಗಿ ವರ್ತಿಸಿದ್ದಾರೆ. ಅಭಿಮಾನಿಯ ಮೊಬೈಲ್ ಫೋನ್ ಕಿತ್ತುಕೊಂಡು ಎಸೆದಿದ್ದಾರೆ. ಈ ವಿಡಿಯೋ (Ranbir Kapoor Viral Video) ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ವಿಡಿಯೋದಲ್ಲಿನ ಘಟನೆ ನಿಜವೋ ಅಥವಾ ಸುಳ್ಳೋ ಎಂಬ ಬಗ್ಗೆಯೂ ಚರ್ಚೆ ನಡೆಯುತ್ತಿದೆ.
ರಣಬೀರ್ ಕಪೂರ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಯೊಬ್ಬರು ಬರುತ್ತಾರೆ. ಸುತ್ತಲೂ ಜನ ಜಂಗುಳಿ ಇರುತ್ತದೆ. ಆ ಗಡಿಬಿಡಿಯಲ್ಲಿಯೂ ಅಭಿಮಾನಿಗೆ ರಣಬೀರ್ ಕಪೂರ್ ಸೆಲ್ಫಿ ನೀಡುತ್ತಾರೆ. ಆದರೆ ಫೋಟೋ ಇನ್ನೂ ಚೆನ್ನಾಗಿ ಬರಲಿ ಎಂಬ ಕಾರಣಕ್ಕೆ ಆ ಅಭಿಮಾನಿ ಮತ್ತೆ ಸೆಲ್ಫಿ ತೆಗೆದುಕೊಳ್ಳಲು ಬರುತ್ತಾರೆ. ಆಗ ರಣಬೀರ್ ಕಪೂರ್ಗೆ ಕೋಪ ಬರುತ್ತದೆ. ಅಭಿಮಾನಿಯ ಮೊಬೈಲ್ ಫೋನ್ ಕಿತ್ತುಕೊಂಡು ದೂರಕ್ಕೆ ಎಸೆಯುತ್ತಾರೆ.
ಇದನ್ನೂ ಓದಿ: Ranbir Kapoor: ‘ಬ್ರಹ್ಮಾಸ್ತ್ರ ನೋಡಿ ಅಂತ ನಾನು ಎಲ್ಲರ ಮನೆಗೆ ಹೋಗಿ ಬೇಡಿಕೊಳ್ಳಬೇಕಾ?’: ಸಿಟ್ಟಾದ ರಣಬೀರ್ ಕಪೂರ್
ಈ ವಿಡಿಯೋ ವೈರಲ್ ಆದ ಬಳಿಕ ನೆಟ್ಟಿಗರು ಅನೇಕ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಅಹಂಕಾರದಿಂದ ರಣಬೀರ್ ಕಪೂರ್ ಈ ರೀತಿ ಮಾಡಿದ್ದಾರೆ ಎಂದು ಹಲವರು ಟೀಕಿಸಿದ್ದಾರೆ. ಕಳೆದ ವರ್ಷ ರಿಲೀಸ್ ಆದ ‘ಬ್ರಹ್ಮಾಸ್ತ್ರ’ ಸಿನಿಮಾದಿಂದ ರಣಬೀರ್ ಕಪೂರ್ ಅವರಿಗೆ ಯಶಸ್ಸು ಸಿಕ್ಕಿತು. ಆ ಗೆಲುವಿನ ಬಳಿಕ ಅವರ ಈ ರೀತಿ ವರ್ತಿಸಲು ಆರಂಭಿಸಿದ್ದಾರೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ಇನ್ನೂ ಕೆಲವರಿಗೆ ಈ ವಿಡಿಯೋದ ಅಸಲಿಯತ್ತಿನ ಮೇಲೆ ಅನುಮಾನ ಮೂಡಿದೆ. ಇದು ಪ್ರಚಾರದ ಗಿಮಿಕ್ ಎಂದು ಹಲವರು ಹೇಳುತ್ತಿದ್ದಾರೆ. ಯಾವುದೋ ಮೊಬೈಲ್ ಫೋನ್ ಕಂಪನಿಯ ಜಾಹೀರಾತಿನ ಶೂಟಿಂಗ್ ಇರಬಹುದು ಎಂದು ಒಂದಷ್ಟು ಮಂದಿ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ರಣಬೀರ್ ಕಪೂರ್ ಕಡೆಯಿಂದಲೇ ಸ್ಪಷ್ಟನೆ ಸಿಗಬೇಕಿದೆ.
Shocking ? Ranbir Kapoor THROWS Fan’s Phone for annoying him for a Selfie.#RanbirKapoor pic.twitter.com/dPEymejxRv
— $@M (@SAMTHEBESTEST_) January 27, 2023
ಸೆಲೆಬ್ರಿಟಿಗಳು ತಾವು ಒಪ್ಪಂದ ಮಾಡಿಕೊಂಡಿರುವ ಬ್ರ್ಯಾಂಡ್ಗಳ ಪ್ರಚಾರಕ್ಕಾಗಿ ಹಲವು ತಂತ್ರಗಳನ್ನು ಬಳಸುತ್ತಾರೆ. ಇತ್ತೀಚೆಗೆ ಇಂಥ ಪ್ರಯತ್ನಗಳು ಹೆಚ್ಚಾಗುತ್ತಿದೆ. ರಣಬೀರ್ ಕಪೂರ್ ಅವರ ಈ ವೈರಲ್ ವಿಡಿಯೋದ ಹಿಂದೆಯೂ ಯಾವುದೋ ಗಿಮಿಕ್ ಇದೆ ಎಂದು ಹೇಳಲಾಗುತ್ತಿದೆ. ಆ ಬಗ್ಗೆ ಇನ್ನಷ್ಟೇ ಪಕ್ಕಾ ಮಾಹಿತಿ ಹೊರಬೀಳಬೇಕಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:45 pm, Fri, 27 January 23