ದೈವಕ್ಕೆ ಅವಮಾನ ಮಾಡಿದ ಆರೋಪ; ಬೇಷರತ್ ಕ್ಷಮೆ ಕೇಳಿದ ರಣವೀರ್ ಸಿಂಗ್

ನಟ ರಣವೀರ್ ಸಿಂಗ್, 'ಕಾಂತಾರ' ಚಿತ್ರದ 'ದೈವ'ವನ್ನು 'ದೆವ್ವ' ಎಂದು ಕರೆದಿದ್ದರು. ಅಲ್ಲದೆ, ದೈವ ಅನುಕರಿಸಿದ ಕಾರಣ ವಿವಾದಕ್ಕೆ ಸಿಲುಕಿದ್ದರು. ಈ ನಡೆ ಸಂಸ್ಕೃತಿಗೆ ಅವಮಾನ ಎಂದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿತ್ತು. ನೆಟ್ಟಿಗರ ತೀವ್ರ ಟೀಕೆಗಳ ನಂತರ, ರಣವೀರ್ ಸಿಂಗ್ ಇದೀಗ ತಮ್ಮ ಹೇಳಿಕೆಗಳಿಗೆ ಬೇಷರತ್ ಕ್ಷಮೆಯಾಚಿಸಿದ್ದು, ದೇಶದ ಸಂಸ್ಕೃತಿ, ಸಂಪ್ರದಾಯಗಳಿಗೆ ತೀವ್ರ ಗೌರವವಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ದೈವಕ್ಕೆ ಅವಮಾನ ಮಾಡಿದ ಆರೋಪ; ಬೇಷರತ್ ಕ್ಷಮೆ ಕೇಳಿದ ರಣವೀರ್ ಸಿಂಗ್
ರಣವೀರ್

Updated on: Dec 02, 2025 | 12:00 PM

ನಟ ರಣವೀರ್ ಸಿಂಗ್ ಅವರು ತಮ್ಮ ‘ಧುರಂಧರ್’ ಸಿನಿಮಾ (Dhurandhar) ರಿಲೀಸ್ ಸಂದರ್ಭದಲ್ಲಿ ವಿವಾದ ಒಂದನ್ನು ಮಾಡಿಕೊಂಡಿದ್ದರು. ‘ಕಾಂತಾರ’ ಚಿತ್ರವನ್ನು ಹಾಗೂ ರಿಷಬ್ ಶೆಟ್ಟಿಯನ್ನು ಹೊಗಳೋ ಭರದಲ್ಲಿ ಅವರು ಎಡವಟ್ಟೊಂದನ್ನು ಮಾಡಿಕೊಂಡಿದ್ದರು. ಇಲ್ಲಿನ ಸಂಸ್ಕೃತಿಗೆ ಅವಮಾನ ಆಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಬೆನ್ನಲ್ಲೇ ರಣವೀರ್ ಸಿಂಗ್ ವಿರುದ್ಧ ಅನೇಕರು ಪೋಸ್ಟ್​ಗಳನ್ನು ಮಾಡಿದ್ದರು. ಈ ವಿಷಯದಲ್ಲಿ ರಣವೀರ್ ಸಿಂಗ್ ಬೇಷರತ್ ಕ್ಷಮೆ ಕೇಳಿದ್ದಾರೆ. ಈ ಮೂಲಕ ವಿವಾದಕ್ಕೆ ಕೊನೆ ಹಾಡುವ ಪ್ರಯತ್ನ ಮಾಡಿದ್ದಾರೆ.

ರಣವೀರ್ ಸಿಂಗ್ ಹಾಗೂ ರಿಷಬ್ ಶೆಟ್ಟಿ ಗೋವಾ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಭಾಗಿ ಆಗಿದ್ದರು. ಈ ವೇಳೆ ರಣವೀರ್ ಸಿಂಗ್ ಅವರು ರಿಷಬ್​ ನಟನೆಯ ಕಾಂತಾರ ಚಿತ್ರವನ್ನು ಹೊಗಳಿದರು. ‘ದೈವ’ ಎನ್ನುವ ಬದಲು ‘ದೆವ್ವ’ ಎಂದರು. ಇಷ್ಟೇ ಅಲ್ಲ, ರಿಷಬ್ ಅವರು ದೈವವನ್ನು ಅನುಕರಿಸಿದಂತೆ ತಾವೂ ಅನುಕರಿಸಲು ಹೋದರು. ಇದು ಹಾಸ್ಯಾಸ್ಪದ ಎನಿಸಿತು. ರಣವೀರ್ ಓರ್ವ ಜೋಕರ್ ರೀತಿ ಕಾಣಿಸಿದರು.

ಇದನ್ನೂ ಓದಿ: ‘ಧುರಂಧರ್’ ಬಗ್ಗೆ ನಿರ್ಮಾಪಕರಿಗೆ ಶುರುವಾಗಿದೆ ಭಯ; ಚಿತ್ರಕ್ಕೆ ಮೈನಸ್ ಆದ ರಣವೀರ್ ಸಿಂಗ್

ರಣವೀರ್ ಅವರು ನಡೆದುಕೊಂಡ ರೀತಿಗೆ ಸಾಕಷ್ಟು ಟೀಕೆಗಳು ಕೇಳಿ ಬಂದವು. ಈಗ ರಣವೀರ್ ಅವರು ಈ ವಿಷಯವಾಗಿ ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದಾರೆ. ಕ್ಷಮೆ ಕೇಳಿ ಅವರು ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
‘ಚಿತ್ರದಲ್ಲಿ ರಿಷಬ್ ಅವರ ಅದ್ಭುತ ಅಭಿನಯವನ್ನು ಎತ್ತಿ ತೋರಿಸುವುದು ನನ್ನ ಮುಖ್ಯ ಉದ್ದೇಶವಾಗಿತ್ತು. ಆ ದೃಶ್ಯವನ್ನು ಮಾಡಲು ಎಷ್ಟು ಶ್ರಮ ಬೇಕು ಎಂಬುದು ನನಗೆ ತಿಳಿದಿದೆ. ಹೀಗಾಗಿ ಅವರ ಬಗ್ಗೆ ನನಗೆ ಮೆಚ್ಚುಗೆ ಇದೆ’ ಎಂದಿದ್ದಾರೆ ರಣವೀರ್ ಸಿಂಗ್.


‘ನಮ್ಮ ದೇಶದ ಪ್ರತಿಯೊಂದು ಸಂಸ್ಕೃತಿ, ಸಂಪ್ರದಾಯ ಮತ್ತು ನಂಬಿಕೆಯನ್ನು ನಾನು ಯಾವಾಗಲೂ ಆಳವಾಗಿ ಗೌರವಿಸುತ್ತೇನೆ. ನಾನು ಯಾರದ್ದಾದರೂ ಭಾವನೆಗಳಿಗೆ ನೋವುಂಟು ಮಾಡಿದ್ದರೆ, ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ’ ಎಂದು ರಣವೀರ್ ಬರೆದುಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:28 am, Tue, 2 December 25