ನಟ ರಣವೀರ್ ಸಿಂಗ್ (Ranveer Singh) ಅವರು ಸದಾ ಸುದ್ದಿಯಲ್ಲಿ ಇರುತ್ತಾರೆ. ಜುಲೈನಿಂದ ಈಚೆಗೆ ಅವರು ಹೆಚ್ಚು ಹೈಲೈಟ್ ಆಗಿರುವುದು ನಗ್ನ ಫೋಟೋಶೂಟ್ ಕಾರಣದಿಂದ. ‘ಪೇಪರ್’ ಮ್ಯಾಗಜಿನ್ ಸಲುವಾಗಿ ಅವರು ಮಾಡಿಸಿದ ಫೋಟೋಶೂಟ್ನಿಂದಾಗಿ ದೊಡ್ಡ ವಿವಾದ (Controversy) ಹುಟ್ಟಿಕೊಂಡಿತು. ರಣವೀರ್ ಸಿಂಗ್ ವಿರುದ್ಧ ಕೇಸ್ ಕೂಡ ಹಾಕಲಾಯಿತು. ಈಗ ಆ ಪ್ರಕರಣದಲ್ಲಿ ಒಂದು ಟ್ವಿಸ್ಟ್ ಸಿಕ್ಕಿದೆ. ವೈರಲ್ ಆದ ಅನೇಕ ಫೋಟೋಗಳ (Viral Photos) ಪೈಕಿ ಒಂದು ಫೋಟೋ ತಮ್ಮದಲ್ಲ ಎಂದು ರಣವೀರ್ ಸಿಂಗ್ ಹೇಳಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸ್ ವಿಚಾರಣೆ ವೇಳೆ ಅವರು ಈ ವಿಚಾರ ತಿಳಿಸಿದ್ದಾರೆ. ಸದ್ಯ ಒಂದು ಸುತ್ತಿನ ವಿಚಾರಣೆ ಮಾಡಲಾಗಿದ್ದು, ಅಗತ್ಯವಿದ್ದರೆ ಅವರನ್ನು ಮತ್ತೊಮ್ಮೆ ಪೊಲೀಸ್ ಠಾಣೆಗೆ ಕರೆಸಿಕೊಳ್ಳುವ ಸಾಧ್ಯತೆ ಇದೆ.
ರಣವೀರ್ ಸಿಂಗ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಜುಲೈ 22ರಂದು ಒಂದಷ್ಟು ನಗ್ನ ಫೋಟೋಗಳನ್ನು ಹಂಚಿಕೊಂಡರು. ಅವು ಕ್ಷಣಾರ್ಧದಲ್ಲಿ ವೈರಲ್ ಆದವು. ಸೋಶಿಯಲ್ ಮೀಡಿಯಾದಲ್ಲಿ ಅವರ ಬೆತ್ತಲೆ ಫೋಟೋಶೂಟ್ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ಆರಂಭ ಆಯಿತು. ಮಹಿಳೆಯರ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ರಣವೀರ್ ಸಿಂಗ್ ನಡೆದುಕೊಂಡಿದ್ದಾರೆ ಹಾಗೂ ಅಶ್ಲೀಲತೆಯನ್ನು ಹರಡುತ್ತಿದ್ದಾರೆ ಎಂಬ ಕಾರಣಕ್ಕೆ ಅವರ ಮೇಲೆ ದೂರ ದಾಖಲಾಯಿತು.
‘ಆಗಸ್ಟ್ 30ರೊಳಗೆ ಮುಂಬೈನ ಚೆಂಬೂರ್ ಪೊಲೀಸ್ ಠಾಣೆಗೆ ಬಂದು ಹೇಳಿಕೆ ದಾಖಲಿಸುವಂತೆ ರಣವೀರ್ ಸಿಂಗ್ ಅವರಿಗೆ ನೋಟಿಸ್ ನೀಡಲಾಗಿತ್ತು. ಒಂದು ದಿನ ಮುನ್ನವೇ, ಅಂದರೆ ಆಗಸ್ಟ್ 29ರ ಬೆಳಗ್ಗೆ 7.30ಕ್ಕೆ ಅವರು ಪೊಲೀಸ್ ಠಾಣೆಯಲ್ಲಿ ಹಾಜರಾಗಿದ್ದರು. ಬೆಳಗ್ಗೆ 9.30ರ ತನಕ ಠಾಣೆಯಲ್ಲೇ ಇದ್ದರು. 2 ಗಂಟೆಗಳ ಕಾಲ ಅವರ ವಿಚಾರಣೆ ಮಾಡಲಾಗಿದೆ’ ಎಂದು ಪೊಲೀಸರು ತಿಳಿಸಿರುವುದಾಗಿ ವರದಿ ಆಗಿದೆ.
ವೈರಲ್ ಆಗಿರುವ ಎಲ್ಲ ಫೋಟೋಗಳನ್ನು ರಣವೀರ್ ಸಿಂಗ್ ಅವರಿಗೆ ಪೊಲೀಸರು ತೋರಿಸಿದ್ದಾರೆ. ಆದರೆ ಆ ಪೈಕಿ ಒಂದು ಫೋಟೋ ಮಾತ್ರ ತಮ್ಮದಲ್ಲ ಎಂದು ರಣವೀರ್ ಸಿಂಗ್ ಹೇಳಿದ್ದಾರೆ. ಗುಪ್ತಾಂಗ ಕಾಣುವ ರೀತಿಯಲ್ಲಿ ಇರುವ ಬೇರೆ ಯಾರದ್ದೋ ಫೋಟೋಗೆ ತಮ್ಮ ಮುಖವನ್ನು ಜೋಡಿಸಲಾಗಿದೆ ಅಂತ ಅವರು ಹೇಳಿದ್ದಾರೆ. ಸದ್ಯ ಈ ವಿಚಾರಣೆ ಮುಂದುವರಿದಿದೆ.
ಸಿನಿಮಾ ವಿಚಾರಕ್ಕೆ ಬರುವುದಾದರೆ ಪ್ರಸ್ತುತ ‘ಸರ್ಕಸ್’ ಹಾಗೂ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾಗಳಲ್ಲಿ ರಣವೀರ್ ಸಿಂಗ್ ನಟಿಸುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ಅವರು ಬೆಂಗಳೂರಿನಲ್ಲಿ ನಡೆದ ಸೈಮಾ ಅವಾರ್ಡ್ಸ್ ಕಾರ್ಯಕ್ರಮಕ್ಕೆ ಬಂದಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.