
ನಟ ರಣವೀರ್ ಸಿಂಗ್ ಅವರು ನಗ್ನ ಫೋಟೋದಿಂದಾಗಿ (Ranveer Singh Nude Photo) ಕಾನೂನಿನ ಸಂಕಷ್ಟ ಎದುರಿಸುವಂತಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಬೆತ್ತಲೆ ಫೋಟೋ ಪೋಸ್ಟ್ ಮಾಡಿದ್ದಕ್ಕಾಗಿ ಅವರ ವಿರುದ್ಧ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಪೊಲೀಸರಿಗೆ ದೂರು ಕೂಡ ನೀಡಲಾಗಿದ್ದು, ನಟನ ಕೊರಳಿಗೆ ವಿವಾದ ಸುತ್ತಿಕೊಂಡಿದೆ. ಎನ್ಜಿಒ ನೀಡಿದ ದೂರಿನ ಅನ್ವಯ ಮುಂಬೈ ಪೊಲೀಸರು (Mumbai Police) ರಣವೀರ್ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಹಲವು ಕಾಯ್ದೆಗಳ ಅಡಿಯಲ್ಲಿ ಕೇಸ್ ಹಾಕಲಾಗಿದೆ. ಪ್ರಕರಣದ ಕುರಿತು ರಣವೀರ್ ಸಿಂಗ್ (Ranveer Singh) ಇನ್ನಷ್ಟೇ ಪ್ರತಿಕ್ರಿಯೆ ನೀಡಬೇಕಿದೆ.
ಸೆಲೆಬ್ರಿಟಿಗಳನ್ನು ಜನರು ಫಾಲೋ ಮಾಡುತ್ತಾರೆ. ಹಾಗಾಗಿ ಅವರು ಹೆಚ್ಚು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ರಣವೀರ್ ಸಿಂಗ್ ಅವರು ಬೆತ್ತಲೆ ಫೋಟೋ ಹಂಚಿಕೊಂಡಿದ್ದು ಸರಿಯಲ್ಲ ಎಂಬ ಟೀಕೆ ವ್ಯಕ್ತವಾಗಿದೆ. ಐಪಿಸಿ ಸೆಕ್ಷನ್ 292, 293 ಹಾಗೂ 509ರ ಅಡಿಯಲ್ಲಿ ‘ಗಲ್ಲಿ ಬಾಯ್’ ನಟನ ವಿರುದ್ಧ ಕೇಸ್ ದಾಖಲಾಗಿದೆ.
ರಣವೀರ್ ಸಿಂಗ್ ಅವರ ಬೆತ್ತಲೆ ಫೋಟೋ ಪ್ರಕರಣದ ಬಗ್ಗೆ ಮುಂಬೈ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ. ‘ಹೆಚ್ಚು ಹಣ ಗಳಿಸುವ ಉದ್ದೇಶದಿಂದ ರಣವೀರ್ ಸಿಂಗ್ ಅವರು ಪೇಪರ್ ಮ್ಯಾಗಜಿನ್ಗೆ ಬೆತ್ತಲೆಯಾಗಿ ಪೋಸ್ ನೀಡಿ, ಆ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆ ಮೂಲಕ ಮಕ್ಕಳ ಮೇಲೆ ಹಾಗೂ ಸಮಾಜದ ಮೇಲೆ ಅವರು ಕೆಟ್ಟ ಪರಿಣಾಮ ಬೀರಿದ್ದಾರೆ. ಇದರಿಂದಾಗಿ ಮಹಿಳೆಯರ ಸಭ್ಯತೆಗೆ ಧಕ್ಕೆ ಆಗಿದೆ’ ಎಂದು ಹೇಳಲಾಗಿದೆ.
ಈ ರೀತಿ ಬೆತ್ತಲೆಯಾಗಿ ಪೋಸ್ ನೀಡುವ ಮೂಲಕ ಅನೇಕ ಸೆಲೆಬ್ರಿಟಿಗಳು ಈ ಹಿಂದೆ ಕಾಂಟ್ರವರ್ಸಿ ಮಾಡಿಕೊಂಡಿದ್ದುಂಟು. ‘ನಟಿಸುವಾಗ ಬೆತ್ತಲಾಗುವುದು ನನಗೆ ತುಂಬ ಸುಲಭ. ಸಾವಿರಾರು ಜನರ ಎದುರಿನಲ್ಲಿ ನಾನು ನಗ್ನವಾಗಬಲ್ಲೆ. ಆದರೆ ಅವರಿಗೆ ಮುಜುಗರ ಆಗುತ್ತದೆ ಅಷ್ಟೇ’ ಎಂದು ರಣವೀರ್ ಸಿಂಗ್ ಅವರು ‘ಪೇಪರ್ ಮ್ಯಾಗಜಿನ್’ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.
ಸಿನಿಮಾ ವಿಚಾರಕ್ಕೆ ಬರುವುದಾರೆ ರಣವೀರ್ ಸಿಂಗ್ ಅವರು ಸದ್ಯ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಹಾಗೂ ‘ಸರ್ಕಸ್’ ಸಿನಿಮಾದಲ್ಲಿ ನಟಿಸುದ್ದಾರೆ. ನಗ್ನ ಪೋಟೋದ ಕಾರಣದಿಂದ ಅವರು ಈಗ ಅನಗತ್ಯವಾಗಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.
Published On - 1:41 pm, Tue, 26 July 22