ಉದ್ಯಮಿಗಳಿಗೆ 200 ಕೋಟಿ ರೂಪಾಯಿ ವಂಚಿಸಿದ ಆರೋಪದಲ್ಲಿ ಸುಕೇಶ್ ಚಂದ್ರಶೇಖರ್ (Sukesh Chandrasekhar) ಅವರ ವಿರುದ್ಧ ತನಿಖೆ ನಡೆಯುತ್ತಿದೆ. ಅವರ ಜೊತೆ ಸಂಪರ್ಕದಲ್ಲಿ ಇದ್ದರು ಎಂಬ ಕಾರಣಕ್ಕೆ ಬಾಲಿವುಡ್ ನಟಿಯರಾದ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಮತ್ತು ನೋರಾ ಫತೇಹಿ ಅವರು ಕೂಡ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಜಾರಿ ನಿರ್ದೇಶನಾಲಯದ (Enforcement Directorate) ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಅಕ್ರಮ ಹಣ ವರ್ಗಾವಣೆ ಕೇಸ್ಗೆ ಸಂಬಂಧಿಸಿದಂತೆ ನಟಿಯರನ್ನು ಆಗಾಗ ವಿಚಾರಣೆಗೆ ಒಳಪಡಿಸಲಾಗಗುತ್ತಿದೆ. ಪ್ರತಿ ವಿಚಾರಣೆಯಲ್ಲೂ ಶಾಕಿಂಗ್ ಸತ್ಯಗಳ ಬಯಲಾಗುತ್ತಿದೆ. ಅಚ್ಚರಿ ಏನೆಂದರೆ, ಸುಕೇಶ್ ಚಂದ್ರಶೇಖರ್ ಜೊತೆ ಜಾಕ್ವೆಲಿನ್ ಫರ್ನಾಂಡಿಸ್ ಅವರು ಮದುವೆ ಆಗಲು ನಿರ್ಧರಿಸಿದ್ದರು ಎಂಬ ವಿಚಾರ ಈಗ ತಿಳಿದುಬಂದಿದೆ.
ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಸುಕೇಶ್ ಚಂದ್ರಶೇಖರ್ ಅನೇಕ ದುಬಾರಿ ಗಿಫ್ಟ್ಗಳನ್ನು ನೀಡಿದ್ದರು. ಹಾಗಾಗಿ ಇಬ್ಬರ ನಡುವೆ ಆಪ್ತತೆ ಬೆಳೆದಿತ್ತು. ಇಬ್ಬರೂ ತುಂಬ ಕ್ಲೋಸ್ ಆಗಿ ಕ್ಲಿಕ್ಕಿಸಿಕೊಂಡಿರುವ ಫೋಟೋಗಳು ವೈರಲ್ ಆದವು. ‘ಸುಕೇಶ್ ಚಂದ್ರಶೇಖರ್ ತನ್ನ ಕನಸಿನ ಹುಡುಗ ಎಂದು ಜಾಕ್ವೆಲಿನ್ ಅಂದುಕೊಂಡಿದ್ದರು. ಹಾಗಾಗಿ ಅವರನ್ನೇ ಮದುವೆ ಮಾಡಿಕೊಳ್ಳುವುದಾಗಿಯೂ ಅವರು ನಿರ್ಧರಿಸಿದ್ದರು’ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಎಎನ್ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ ಎಂದು ಪಿಂಕ್ವಿಲ್ಲಾ ವರದಿ ಮಾಡಿದೆ.
ಒಂದಷ್ಟು ದಿನಗಳು ಕಳೆದಂತೆ ಸುಕೇಶ್ ಚಂದ್ರಶೇಖರ್ನ ನಿಜವಾದ ಬಣ್ಣ ಜಾಕ್ವೆಲಿನ್ ಮತ್ತು ನೋರಾ ಫತೇಹಿ ಅವರಿಗೆ ತಿಳಿಯುತ್ತ ಬಂದಿತ್ತು. ಸುಕೇಶ್ ನಡೆಸುತ್ತಿರುವ ವ್ಯವಹಾರ ಯಾಕೋ ಸರಿ ಇಲ್ಲ ಎಂಬುದು ಗೊತ್ತಾಗುತ್ತಿದ್ದಂತೆಯೇ ನೋರಾ ಫತೇಹಿ ಅವರು ಅಂತರ ಕಾಯ್ದುಕೊಳ್ಳಲು ಆರಂಭಿಸಿದರು. ಆದರೆ ಜಾಕ್ವೆಲಿನ್ ಫರ್ನಾಂಡಿಸ್ ಅವರು ಸುಕೇಶ್ ಜೊತೆ ಒಡನಾಟ ಮುಂದುವರಿಸಿದ್ದರು. ಅದೇ ಈಗ ಅವರಿಗೆ ಕಂಟಕವಾಗಿ ಪರಿಣಮಿಸಿದೆ.
ಬುಧವಾರ (ಸೆ.14) ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ಸತತ 9 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಅನೇಕ ವಿಷಯಗಳ ಹೊರಬಂದಿವೆ. ಜಾಕ್ವೆಲಿನ್ ಮ್ಯಾನೇಜರ್ಗೆ ಸುಕೇಶ್ ನೀಡಿದ್ದ 8 ಲಕ್ಷ ರೂಪಾಯಿ ಬೆಲೆಯ ಬೈಕ್ ವಶಪಡಿಸಿಕೊಳ್ಳಲಾಗಿದೆ. ನೋರಾ ಫತೇಹಿ ಅವರನ್ನು ಸುಕೇಶ್ ಚಂದ್ರಶೇಖರ್ ಎಂದಿಗೂ ನೇರವಾಗಿ ಭೇಟಿ ಆಗಿಲ್ಲ. ಬದಲಿಗೆ ಎರಡು ಬಾರಿ ವಾಟ್ಸಪ್ ಮೂಲಕ ಸಂಪರ್ಕಿಸಿದ್ದರು. ಚೆನ್ನೈನ ಸ್ಟುಡಿಯೋಗೆ ಗೆಸ್ಟ್ ಆಗಿ ಬರುವಂತೆ ನೋರಾಗೆ ಸುಕೇಶ್ ಆಹ್ವಾನ ನೀಡಿದ್ದರು. ಜೊತೆಗೆ ಬಿಎಂಡಬ್ಲ್ಯು ಕಾರನ್ನು ಗಿಫ್ಟ್ ಕೊಡುವುದಾಗಿಯೂ ಆಸೆ ತೋರಿಸಿದ್ದರು ಎನ್ನಲಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.