ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಸಾವಿನ ತನಿಖೆಯಲ್ಲಿ ಹಲವು ಘಟನೆಗಳು ಬಯಲಾಗಿವೆ. ಅಕ್ರಮ ಹಣ ವರ್ಗಾವಣೆ ಮತ್ತು ಮಾದಕ ದ್ರವ್ಯದ ಜಾಲ ಕೂಡ ಸುಶಾಂತ್ ಸಾವಿನ ಜೊತೆ ತಳುಕು ಹಾಕಿಕೊಂಡಿರುವುದು ತನಿಖೆ ಸಂದರ್ಭದಲ್ಲಿ ಗೊತ್ತಾಯಿತು. ಪ್ರಕರಣವನ್ನು ಕೈಗೆತ್ತಿಕೊಂಡಿದ್ದ ಎನ್ಸಿಬಿ (Narcotics Control Bureau) ಈಗ ಚಾರ್ಜ್ಶೀಟ್ ಸಲ್ಲಿಕೆ ಮಾಡಿದೆ. ಅದರ ಅನ್ವಯ, ನಟಿ ರಿಯಾ ಚಕ್ರವರ್ತಿ (Rhea Chakraborty) ಅವರ ಮೇಲೆ ಹಲವು ಆರೋಪಗಳನ್ನು ಮಾಡಲಾಗಿದೆ. ಸುಶಾಂತ್ ಸಿಂಗ್ ರಜಪೂತ್ಗೆ ಗಾಂಜಾ ಮುಂತಾದ ಮಾದಕ ವಸ್ತುಗಳನ್ನು ಪೂರೈಸಿದ್ದೇ ರಿಯಾ ಚಕ್ರವರ್ತಿ ಎಂದು ಉಲ್ಲೇಖ ಮಾಡಲಾಗಿದೆ. ಇದರಿಂದ ಅವರಿಗೆ ಸಂಕಷ್ಟ ಎದುರಾಗಿದೆ. ಒಂದು ವೇಳೆ ಆರೋಪ ಸಾಬೀತಾದರೆ ರಿಯಾ ಚಕ್ರವರ್ತಿಗೆ 10 ವರ್ಷ ಜೈಲು ಶಿಕ್ಷೆ ಆಗುವ ಸಾಧ್ಯತೆ ಇದೆ.
2020ರ ಜೂನ್ 14ರಂದು ಸುಶಾಂತ್ ಸಿಂಗ್ ರಜಪೂತ್ ಅವರ ಶವ ಪತ್ತೆ ಆಗಿತ್ತು. ಅವರ ಸಾವು ಅನುಮಾನಾಸ್ಪದವಾಗಿದೆ ಎಂದು ಅನೇಕರು ಅಭಿಪ್ರಾಯ ಪಟ್ಟಿದ್ದರು. ಆಗ ಸುಶಾಂತ್ ಪ್ರೇಯಸಿ ಆಗಿದ್ದ ರಿಯಾ ಚಕ್ರವರ್ತಿ ವಿರುದ್ಧ ಹಲವು ಆರೋಪಗಳು ಕೇಳಿಬಂದಿದ್ದವು. ನಂತರ ತನಿಖೆ ಆರಂಭಿಸಿದ ಸಿಬಿಐ ಅಧಿಕಾರಿಗಳಿಗೆ ಡ್ರಗ್ಸ್ ಜಾಲದ ಸುಳಿವು ಸಿಕ್ಕಿತ್ತು. ಬಳಿಕ ಎನ್ಸಿಬಿ ಮತ್ತು ಜಾರಿ ನಿರ್ದೇಶನಾಲಯ ಕೂಡ ತನಿಖೆ ನಡೆಸಿತು.
ಸುಶಾಂತ್ ಸಿಂಗ್ ರಜಪೂತ್ ಅವರು ಮಾದಕ ವಸ್ತುಗಳನ್ನು ಸೇವಿಸುತ್ತಿದ್ದರು ಎಂಬ ಆರೋಪ ಇದೆ. ಅವರಿಗೆ ಗಾಂಜಾ ಮುಂತಾದ್ದನ್ನು ಪೂರೈಸಿದ್ದರಲ್ಲಿ ರಿಯಾ ಚಕ್ರವರ್ತಿಯ ಪಾತ್ರ ಇದೆ. ಮಾದಕ ವಸ್ತು ಖರೀದಿಸಿ, ಅದರ ಸೇವೆನೆಗೆ ಕುಮ್ಮಕ್ಕು ನೀಡಿದ್ದೇ ರಿಯಾ ಚಕ್ರವರ್ತಿ ಎಂದು ಎನ್ಸಿಬಿ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ರಿಯಾಗೆ ಢವಢವ ಶುರುವಾಗಿದೆ.
ಈ ಹೈ-ಪ್ರೊಫೈಲ್ ಕೇಸ್ನಲ್ಲಿ ರಿಯಾ ಚಕ್ರವರ್ತಿ ಮಾತ್ರವಲ್ಲದೇ ಇನ್ನೂ 34 ಜನರ ವಿರುದ್ಧ ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದೆ. ರಿಯಾ ಚಕ್ರವರ್ತಿ ಸಹೋದರ ಶೋವಿಕ್ ಚಕ್ರವರ್ತಿ ಕೂಡ ಆರೋಪಿ ಆಗಿದ್ದಾರೆ. ಸುಶಾಂತ್ಗೆ ಡ್ರಗ್ಸ್ ನೀಡಿದ್ದರಲ್ಲಿ ಶೋವಿಕ್ ಕೈವಾಡ ಸಹ ಇದೆ ಎಂದು ಉಲ್ಲೇಖಿಸಲಾಗಿದೆ.
ಹಲವು ಬಾರಿ ಗಾಂಜಾ ತರಿಸಿದ್ದ ರಿಯಾ ಚಕ್ರವರ್ತಿ!
ವಿಶೇಷ ನ್ಯಾಯಾಲಯದಲ್ಲಿ ಎನ್ಸಿಬಿ ಚಾರ್ಜ್ಶೀಟ್ ಸಲ್ಲಿಕೆ ಮಾಡಿದೆ. ಅದರ ಪ್ರಕಾರ, ರಿಯಾ ಚಕ್ರವರ್ತಿ ಅವರು ಒಂದಲ್ಲ ಎರಡಲ್ಲ, ಅನೇಕ ಬಾರಿ ಗಾಂಜಾ ತರಿಸಿಕೊಂಡಿದ್ದರು ಎಂಬುದು ತಿಳಿದುಬಂದಿದೆ. ಎನ್ಡಿಪಿಎಸ್ ಕಾಯ್ದೆಯ ಹಲವು ಸೆಕ್ಷನ್ ಅಡಿಯಲ್ಲಿ ಆರೋಪಪಟ್ಟಿ ಸಲ್ಲಿಕೆ ಮಾಡಲಾಗಿದೆ. ಈ ಪ್ರಕರಣದಲ್ಲಿ ರಿಯಾ ಚಕ್ರವರ್ತಿ 10ನೇ ಆರೋಪಿ ಆಗಿದ್ದಾರೆ.
Published On - 11:49 am, Wed, 13 July 22