Rhea Chakraborty: ಸುಶಾಂತ್ ಸಿಂಗ್ ರಜಪೂತ್ ಕೇಸ್; ರಿಯಾ ಚಕ್ರವರ್ತಿ, ಶೋವಿಕ್ ಚಕ್ರವರ್ತಿಗೆ ಹೆಚ್ಚಿತು ಸಂಕಷ್ಟ
Showik Chakraborty: ಸುಶಾಂತ್ ಸಿಂಗ್ ರಜಪೂತ್ ಅವರಿಗೆ ಮಾದಕ ವಸ್ತು ನೀಡಿದ್ದರಲ್ಲಿ ರಿಯಾ ಚಕ್ರವರ್ತಿ, ಶೋವಿಕ್ ಚಕ್ರವರ್ತಿ ಸೇರಿದಂತೆ ಅನೇಕರ ಕೈವಾಡ ಇದೆ ಎಂಬ ಬಗ್ಗೆ ತನಿಖೆ ಆಗಿದೆ. ಆ ಕುರಿತು ಎನ್ಸಿಬಿ ಚಾರ್ಜ್ಶೀಟ್ ಸಿದ್ಧಪಡಿಸಿದೆ.
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಅವರ ಸಾವಿಗೆ ಕಾರಣ ಏನು ಎಂಬುದು ಇನ್ನೂ ತಿಳಿದು ಬಂದಿಲ್ಲ. ಕೆಲವರು ಇದನ್ನು ಆತ್ಮಹತ್ಯೆ ಎಂದರೆ, ಮತ್ತೆ ಕೆಲವರು ಕೊಲೆ ಎಂದು ಆರೋಪ ಮಾಡುತ್ತಿದ್ದಾರೆ. ಒಬ್ಬೊಬ್ಬರ ವಾದ ಒಂದೊಂದು ರೀತಿ ಇದೆ. ಈ ಕೇಸ್ನ ತನಿಖೆ ಜಾರಿಯಲ್ಲಿದೆ. ಮುಖ್ಯ ಆರೋಪಿ ಆಗಿರುವ ನಟಿ ರಿಯಾ ಚಕ್ರವರ್ತಿ (Rhea Chakraborty) ಅವರು ಸದ್ಯಕ್ಕೆ ಜಾಮೀನು ಪಡೆದು ಹೊರಗೆ ಸುತ್ತಾಡುತ್ತಿದ್ದಾರೆ. ಆದರೆ ಅವರಿಗೆ ಈಗ ಸಂಕಷ್ಟ ಹೆಚ್ಚುವ ಸಾಧ್ಯತೆ ದಟ್ಟವಾಗಿದೆ. ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯಕ್ಕೆ ಎನ್ಸಿಬಿ (NCB) ಚಾರ್ಜ್ ಶೀಟ್ ಸಲ್ಲಿಸಿದೆ. ಈ ಕುರಿತು ಶೀಘ್ರವೇ ತೀರ್ಪು ಹೊರಬರಲಿದೆ. ಅದಕ್ಕಾಗಿ ಸುಶಾಂತ್ ಸಿಂಗ್ ರಜಪೂತ್ ಅಭಿಮಾನಿಗಳು ಕಾಯುತ್ತಿದ್ದಾರೆ. ಸುಶಾಂತ್ ಸಾವಿಗೆ ನ್ಯಾಯ ಸಿಗಲಿ ಎಂದು ಇಂದಿಗೂ ಅಭಿಮಾನಿಗಳ ಹೋರಾಟ ನಡೆಯುತ್ತಲೇ ಇದೆ. ಆದಷ್ಟು ಬೇಗ ತನಿಖೆ ಪೂರ್ಣಗೊಂಡು, ಸುಶಾಂತ್ ಸಾವಿಗೆ ಕಾರಣ ಆದವರಿಗೆ ಶಿಕ್ಷೆ ಆಗಬೇಕು ಎಂದು ಎಲ್ಲರೂ ಒತ್ತಾಯಿಸುತ್ತಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ಅವರು ಬಾಲಿವುಡ್ನಲ್ಲಿ ಸ್ಟಾರ್ ಕಲಾವಿದನಾಗಿ ಮಿಂಚುತ್ತಿದ್ದರು. ಪ್ರೇಕ್ಷಕರ ನೆಚ್ಚಿನ ಹೀರೋ ಆಗಿ ಅವರು ಗುರುತಿಸಿಕೊಂಡಿದ್ದರು. ಆದರೆ ಅವರು ಏಕಾಏಕಿ ಹೀಗೆ ಇಹಲೋಕ ತ್ಯಜಿಸುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. 2020ರ ಜೂನ್ 14ರಂದು ಅವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಆದಾಗ ಎಲ್ಲರಿಗೂ ಶಾಕ್ ಆಯಿತು. ಆ ಸಂದರ್ಭದಲ್ಲಿ ಸುಶಾಂತ್ ಪ್ರೇಯಸಿ ಆಗಿದ್ದ ರಿಯಾ ಚಕ್ರವರ್ತಿ ಮೇಲೆ ಆರೋಪ ಹೊರಿಸಲಾಯಿತು.
ಇದನ್ನೂ ಓದಿ: ಸುಶಾಂತ್ ಸಿಂಗ್ ರಜಪೂತ್ ಮನೆ ಕೆಲಸದವರಿಗೆ ಗೊತ್ತಿದೆಯಾ ಡ್ರಗ್ಸ್ ಸತ್ಯ? ಎನ್ಸಿಬಿಯಿಂದ ವಿಚಾರಣೆ
ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ತನಿಖೆ ಆರಂಭಿಸಿದ ಸಿಬಿಐ ಅಧಿಕಾರಿಗಳಿಗೆ ಡ್ರಗ್ಸ್ ಜಾಲ ಮತ್ತು ಅಕ್ರಮ ಹಣ ವರ್ಗಾವಣೆ ಬಗ್ಗೆ ಹೊಸ ಹೊಸ ಟ್ವಿಸ್ಟ್ ಸಿಗಲು ಶುರುವಾಯಿತು. ಸುಶಾಂತ್ಗೆ ಡ್ರಗ್ಸ್ ನೀಡಲಾಗಿತ್ತು ಎಂಬ ವಿಚಾರ ಬಯಲಾಯಿತು. ಅವರಿಗೆ ಮಾದಕ ವಸ್ತುಗಳನ್ನು ನೀಡಿದ್ದರಲ್ಲಿ ರಿಯಾ ಚಕ್ರವರ್ತಿ, ಶೋವಿಕ್ ಚಕ್ರವರ್ತಿ ಸೇರಿದಂತೆ ಅನೇಕರ ಕೈವಾಡ ಇದೆ ಎಂಬ ಬಗ್ಗೆ ತನಿಖೆ ಆಗಿದೆ. ಆ ಕುರಿತು ಎನ್ಸಿಬಿ ಚಾರ್ಜ್ಶೀಟ್ ಸಿದ್ಧಪಡಿಸಿದೆ.
ಸುಶಾಂತ್ ಸಿಂಗ್ ರಜಪೂತ್ ಸಾವಿನ ಕೇಸ್ನಲ್ಲಿ ಮೊದಲ ಬಾರಿ ಆರೋಪ ಕೇಳಿಬಂದಾಗ ರಿಯಾ ಚಕ್ರವರ್ತಿ ಅವರನ್ನು ಜೈಲಿಗೆ ಕಳಿಸಲಾಗಿತ್ತು. ತಿಂಗಳ ಬಳಿಕ ಅವರು ಜಾಮೀನು ಪಡೆದು ಹೊರಬಂದರು. ಈಗ ಡ್ರಗ್ಸ್ ಸೇವನೆ ಮತ್ತು ಅಕ್ರಮ ಹಣ ವರ್ಗಾವಣೆ ವಿಚಾರದಲ್ಲಿ ಆರೋಪ ಸಾಬೀತಾದರೆ ಅವರು ಮತ್ತೆ ಜೈಲು ವಾಸ ಅನುಭವಿಸಬೇಕಾಗುತ್ತದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.