ಬಾಲಿವುಡ್ ನಟ ಅಜಯ್ ದೇವಗನ್ (Ajay Devgn) ಅವರು ಅನೇಕ ಕಾರಣಗಳಿಂದ ಹೈಲೈಟ್ ಆಗುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ಅವರು ರಾಷ್ಟ್ರ ಭಾಷೆ ಕುರಿತು ಕಮೆಂಟ್ ಮಾಡಿ ಸುದ್ದಿ ಆಗಿದ್ದರು. ಅದರಲ್ಲೂ ಕಿಚ್ಚ ಸುದೀಪ್ಗೆ ಟ್ವಿಟರ್ನಲ್ಲಿ ಪಾಠ ಮಾಡಲು ಬಂದು, ನಂತರ ತಾವೇ ಪಾಠ ಕಲಿತು ಸೈಲೆಂಟ್ ಆಗಿದ್ದರು. ಇದರ ಬೆನ್ನಲ್ಲೇ ಅವರು ನಟಿಸಿದ ‘ರನ್ವೇ 34’ ಸಿನಿಮಾ (Runway 34 Movie) ಬಿಡುಗಡೆ ಆಯಿತು. ಏ.29ರಂದು ಬಿಡುಗಡೆಯಾದ ಈ ಚಿತ್ರಕ್ಕೆ ಅಜಯ್ ದೇವಗನ್ ಅವರೇ ನಿರ್ದೇಶನ ಕೂಡ ಮಾಡಿದ್ದಾರೆ. ಉತ್ತಮ ವಿಮರ್ಶೆ ಸಿಕ್ಕರೂ ಕೂಡ ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಸೋಲುಂಡಿದೆ. ಈ ನಡುವೆ ಅವರು ಶಾರುಖ್ ಖಾನ್ (Shah Rukh Khan) ಬಗ್ಗೆ ಮಾತನಾಡಿದ್ದಾರೆ. ಹಿಂದಿ ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ನಟನಾಗಿ ಗುರುತಿಸಿಕೊಂಡಿರುವ ಶಾರುಖ್ ಜೊತೆ ಅಜಯ್ ದೇವಗನ್ ಅವರಿಗೆ ದುಶ್ಮನಿ ಇದೆ ಎಂದು ಬಹಳ ದಿನಗಳಿಂದಲೂ ಹೇಳಲಾಗುತ್ತಿತ್ತು. ಆ ಕುರಿತು ಈಗ ಅವರು ಮಾತನಾಡಿದ್ದಾರೆ. ಶಾರುಖ್ ಖಾನ್ ಮತ್ತು ತಮ್ಮ ನಡುವೆ ಯಾವುದೇ ಮನಸ್ತಾಪ ಇಲ್ಲ ಎಂದು ಅಜಯ್ ದೇವಗನ್ ಹೇಳಿದ್ದಾರೆ.
ಸಿನಿಮಾ ವಿಚಾರದಲ್ಲಿ ಅಜಯ್ ದೇವಗನ್ ಹಾಗೂ ಶಾರುಖ್ ಖಾನ್ ನಡುವೆ ವೈಮನಸ್ಸು ಮೂಡಿತ್ತು. 2012ರಲ್ಲಿ ಅಜಯ್ ದೇವಗನ್ ನಟನೆಯ ‘ಸನ್ ಆಫ್ ಸರ್ದಾರ್’ ಹಾಗೂ ಶಾರುಖ್ ಖಾನ್ ನಟನೆಯ ‘ಜಬ್ ತಕ್ ಹೈ ಜಾನ್’ ಸಿನಿಮಾಗಳು ಏಕಕಾಲಕ್ಕೆ ತೆರೆಕಂಡವು. ಆ ಸಂದರ್ಭದಲ್ಲಿ ಉಂಟಾದ ರಿಲೀಸ್ ಕ್ಲ್ಯಾಶ್ನಿಂದಾಗಿ ಇಬ್ಬರ ನಡುವೆ ಕಿರಿಕ್ ಶುರುವಾಯಿತು ಎಂದು ಸುದ್ದಿ ಆಗಿತ್ತು. ಆದರೆ ಆ ಎಲ್ಲ ವಿಚಾರಗಳನ್ನು ಅಜಯ್ ದೇವಗನ್ ತಳ್ಳಿ ಹಾಕಿದ್ದಾರೆ.
ವಿಮಲ್ ಪಾನ್ ಮಸಾಲಾ ಜಾಹೀರಾತಿನಲ್ಲಿ ಅಜಯ್ ದೇವಗನ್ ಹಾಗೂ ಶಾರುಖ್ ಖಾನ್ ಜೊತೆಯಾಗಿ ನಟಿಸಿದ್ದಾರೆ. ಆ ಮೂಲಕ ತಮ್ಮ ನಡುವೆ ಯಾವುದೇ ಮನಸ್ತಾಪ ಇಲ್ಲ ಎಂಬುದನ್ನು ಅವರು ಈಗಾಗಲೇ ಹೇಳಿದ್ದಾರೆ. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಶಾರುಖ್ ಖಾನ್ ಜೊತೆಗಿನ ತಮ್ಮ ಸ್ನೇಹದ ಬಗ್ಗೆ ವಿವರಿಸಿದ್ದಾರೆ.
‘90ರ ದಶಕದಲ್ಲಿ ನಾನು ಮತ್ತು ಶಾರುಖ್ ಖಾನ್ ಒಟ್ಟಾಗಿ ವೃತ್ತಿಜೀವನ ಆರಂಭಿಸಿದವರು. ನಮ್ಮಿಬ್ಬರ ನಡುವೆ ಉತ್ತಮ ಬಾಂಧವ್ಯ ಇದೆ. ಮಾಧ್ಯಮದವರು ಬರೆಯುವ ರೀತಿಯಲ್ಲಿ ನಮ್ಮ ಮಧ್ಯೆ ಯಾವುದೇ ಜಗಳ ಆಗಿಲ್ಲ. ನಾವು ಈಗಲೂ ಫೋನ್ನಲ್ಲಿ ಮಾತನಾಡುತ್ತೇವೆ. ನಾವು ಚೆನ್ನಾಗಿಯೇ ಇದ್ದೇವೆ. ನಮ್ಮಿಬ್ಬರಲ್ಲಿ ಒಬ್ಬರಿಗೆ ಏನೇ ಸಮಸ್ಯೆ ಎದುರಾದರೂ ಇನ್ನೊಬ್ಬರು ಸಹಾಯಕ್ಕೆ ಧಾವಿಸುತ್ತೇವೆ. ಇಬ್ಬರಿಗೂ ಪರಸ್ಪರ ನಂಬಿಕೆ ಇದೆ. ನಮ್ಮ ನಡುವೆ ಯಾವತ್ತೂ ಮನಸ್ತಾಪ ಇರಲೇ ಇಲ್ಲ’ ಎಂದಿದ್ದಾರೆ ಅಜಯ್ ದೇವಗನ್.
ಹಾಗಾದರೆ, ಈ ಇಬ್ಬರು ಸ್ಟಾರ್ ನಟರ ನಡುವೆ ಮನಸ್ತಾಪ ಇದೆ ಎಂದು ಸುದ್ದಿ ಹಬ್ಬಲು ಕಾರಣ ಏನಿರಬಹುದು. ಈ ವಿಚಾರದಲ್ಲಿ ಅಜಯ್ ದೇವಗನ್ ಅವರು ಫ್ಯಾನ್ಸ್ ಮೇಲೆ ಆರೋಪ ಹೊರಿಸಿದ್ದಾರೆ. ‘ಅಭಿಮಾನಿ ಸಂಘಗಳ ನಡುವೆ ಜಗಳ ಆಗುತ್ತದೆ. ಆಗ ಇಬ್ಬರು ಸ್ಟಾರ್ ನಟರ ನಡುವೆಯೇ ಜಗಳ ಆಗಿದೆ ಎಂಬ ರೀತಿಯಲ್ಲಿ ಬಿಂಬಿತ ಆಗುತ್ತದೆ’ ಎಂದು ಅಜಯ್ ದೇವಗನ್ ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.