ಒದ್ ಓಡಿಸ್ತೀನಿ ನಿನ್ನ: ರೌಡಿಯಂತೆ ಪೊಲೀಸ್ ಅಧಿಕಾರಿಗೆ ಆವಾಜ್ ಹಾಕಿದ ಬಿಜೆಪಿ ಶಾಸಕ

TV9 Digital Desk

| Edited By: Ghanashyam D M | ಡಿ.ಎಂ.ಘನಶ್ಯಾಮ

Updated on:May 06, 2022 | 12:21 PM

‘ಮೂಡಿಗೆರೆಗೆ ನಾನೇ ಐಜಿ, ನಾನೇ ಎಲ್ಲ’ ಎಂದು ಹೇಳಿಕೊಂಡಿದ್ದಾರೆ. ‘ಯಾರನ್ನು ಕೇಳಿ ಚಾರ್ಜ್‌ ತೆಗೆದುಕೊಂಡೆ, ಹೋಗಲೇ’ ಎಂದೆಲ್ಲಾ ನಿಂದಿಸಿದ್ದಾರೆ.

ಒದ್ ಓಡಿಸ್ತೀನಿ ನಿನ್ನ: ರೌಡಿಯಂತೆ ಪೊಲೀಸ್ ಅಧಿಕಾರಿಗೆ ಆವಾಜ್ ಹಾಕಿದ ಬಿಜೆಪಿ ಶಾಸಕ
ಮೂಡಿಗೆರೆಯ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ

ಚಿಕ್ಕಮಗಳೂರು: ಕರ್ನಾಟಕ ಸರ್ಕಾರದಲ್ಲಿ ಈ ಹಿಂದೆ ಅರಣ್ಯ ಸಚಿವರೂ ಆಗಿದ್ದ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ (BJP MLA M.P.Kumaraswamy) ಪೊಲೀಸ್ ಅಧಿಕಾರಿಯೊಬ್ಬರನ್ನು ಬಾಯಿಗೆ ಬಂದಂತೆ ಬೈದಿರುವ ಆಡಿಯೊ ವೈರಲ್ ಆಗಿದೆ. ಚಿಕ್ಕಮಗಳೂರು ತಾಲ್ಲೂಕಿನ ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಹೊಸದಾಗಿ ಇನ್​ಸ್ಪೆಕ್ಟರ್​ ಆಗಿ ಚಾರ್ಜ್ ತೆಗೆದುಕೊಂಡಿದ್ದ ರವೀಶ್ ಅವರನ್ನು ವಾಚಾಮಗೋಚರ ನಿಂದಿಸಿರುವ ಕುಮಾರಸ್ವಾಮಿ, ‘ಮೂಡಿಗೆರೆಗೆ ನಾನೇ ಐಜಿ, ನಾನೇ ಎಲ್ಲ’ ಎಂದು ಹೇಳಿಕೊಂಡಿದ್ದಾರೆ. ‘ಯಾರನ್ನು ಕೇಳಿ ಚಾರ್ಜ್‌ ತೆಗೆದುಕೊಂಡೆ, ಹೋಗಲೇ’ ಎಂದೆಲ್ಲಾ ನಿಂದಿಸಿದ್ದಾರೆ.

ಚಿಕ್ಕಮಗಳೂರಿನ ಇನ್ನಷ್ಟು ಸುದ್ದಿ ಓದಲು ಲಿಂಕ್ ಕ್ಲಿಕ್ ಮಾಡಿ

‘ಯಾರೋ ನೀನು, ಎಲ್ಲಿದ್ದೀಯಾ? ನಿನ್ನನ್ನು ಬೇಡ ಅಂತ ಹೇಳಿದ್ದೆ ತಾನೆ? ಸ್ಟೇಷನ್​ನಲ್ಲಿ ಇರಬೇಡ. ಮರ್ಯಾದೆಯಿಂದ ಬಂದ ರೀತಿಯಲ್ಲೇ ವಾಪಸ್ ಹೋಗು’ ಎಂದು ಶಾಸಕ ಬೆದರಿಕೆ ಹಾಕಿದ್ದಾರೆ. ‘ಐಜಿ ಸೂಚನೆಯಂತೆ ಚಾರ್ಜ್ ತಗೊಂಡೆ’ ಎನ್ನುವ ‘ಐಜಿಪಿಗೆ ಎಷ್ಟು ಲಂಚ ಕೊಟ್ಟಿದ್ದೀಯಾ? ಯಾವನು ಐಜಿಪಿ’ ಎಂದು ಹಿರಿಯ ಹುದ್ದೆಯ ಅಧಿಕಾರಿಗೂ ಏಕವಚನ ಬಳಸಿದ್ದಾರೆ. ‘ಮೂಡಿಗೆರೆಗೆ ಎಲ್ಲ ನಾನೇ. ನನ್ನನ್ನು ನೋಡಲು ಬಂದ್ರೆ ಒದ್ದು ಓಡಿಸುತ್ತೇನೆ’ ಎಂದು ಇನ್​ಸ್ಪೆಕ್ಟರ್ ರವೀಶ್‌ಗೆ ಧಮ್ಕಿ ಹಾಕಿದ್ದಾರೆ.

ಶಾಸಕ ಮತ್ತು ಪೊಲೀಸ್ ಇನ್​ಸ್ಟೆಕ್ಟರ್ ನಡುವಣ ಮಾತುಕತೆಯ ಆಡಿಯೊ ವೈರಲ್ ಆಗಿದೆ.

ಮಾತುಕತೆ ವಿವರ ಶಾಸಕ: ಹೆಲೊ, ಯಾರಪ್ಪಾ ಇದು ನಂಬರು? ಇನ್​ಸ್ಪೆಕ್ಟರ್: ನಾನು ರವೀಶ್ ಮಾತಾಡೋದು ಸರ್ ಶಾಸಕ: ಈಗ ಎಲ್ಲಿದ್ದೀಯಪ್ಪ ನೀನು? ಇನ್​ಸ್ಪೆಕ್ಟರ್: ಪೊಲೀಸ್ ಸ್ಟೇಷನ್​ನಲ್ಲಿ ಸಾರ್ ಶಾಸಕ: ಇಲ್ಲಿಗೆ ಬರಬೇಡ ಅಂದಿದ್ದೆ ನಾನು ಇನ್​ಸ್ಪೆಕ್ಟರ್: ಐಜಿ ಸಾರ್ ಚಾರ್ಜ್ ತಗೊ ಅಂದ್ರು ಶಾಸಕ: ಏಯ್, ಹೋಗಲೇ, ವಾಪಸ್ ಹೋಗೋ. ನಾಳೆನೇ ಸಸ್ಪೆಂಡ್ ಮಾಡಿಸ್ತೀನಿ ನೋಡು. ಇನ್​ಸ್ಪೆಕ್ಟರ್: ನಾಳೆ ಬಂದು ನಿಮ್ಮನ್ನ ಕಾಣ್ತೀನಿ ಶಾಸಕ: ಬರಬೇಡ, ನೀನು ಯಾರಿಗೆ ಎಷ್ಟು ಕೊಟ್ಟು ಇಲ್ಲಿಗೆ ಬಂದಿದ್ದೀ ಅಂತ ಗೊತ್ತು. ನೀನು ಬಂದ್ರೆ ಒದ್ ಓಡಿಸ್ತೀನಿ. ಇನ್​ಸ್ಪೆಕ್ಟರ್: ಇಲ್ಲ, ಯಾರಿಗೂ ಏನೂ ಕೊಟ್ಟಿಲ್ಲ. ಐಜಿ ಹೇಳಿದ್ರು ಅಷ್ಟೇ ಶಾಸಕ: ಯಾವನೋ ಐಜಿ? ಮೂಡಿಗೆರೆ ನಾನೇ ದೊಡ್ಡೋನು. ಮರ್ಯಾದೆಯಿಂದ ವಾಪಸ್ ಹೋಗು.

ವಿರೋಧಿಗಳ ಕುತಂತ್ರದಿಂದ ಆಡಿಯೊ ವೈರಲ್: ಎಂ.ಪಿ.ಕುಮಾರಸ್ವಾಮಿ

ಮಲ್ಲಂದೂರು ಪಿಎಸ್​ಐ ಜೊತೆಗೆ ನನ್ನ ಮಾತುಕತೆಯ ಆಡಿಯೊ ವೈರಲ್ ಆಗಿರುವುದರಿಂದ ವಿರೋಧಿಗಳ ಕುತಂತ್ರವಿದೆ ಎಂದು ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಹಿಂದೊಮ್ಮೆ ಇದೇ ಪಿಎಸ್​ಐ ನನ್ನ ಬಳಿಗೆ ಬಂದಿದ್ದರು. ಮಲ್ಲಂದೂರು ವ್ಯಾಪ್ತಿಯಲ್ಲಿ ಕೂಲಿ ಕಾರ್ಮಿಕರು ಮತ್ತು ಅತ್ಯಂತ ಹಿಂದುಳಿದ ವರ್ಗದ ಜನಾಂಗದವರು ಹೆಚ್ಚು ವಾಸಿಸುತ್ತಿದ್ದಾರೆ. ನಿಮ್ಮ ಸ್ವಂತ ಊರು ಮಂಡ್ಯಕ್ಕೆ ಹೋಗಿ. ನೀವು ಕೆಲಸಕ್ಕೆ ಹೊಸದಾಗಿ ಸೇರ್ಪಡೆಯಾಗಿರುವುದರಿಂದ ಮತ್ತು ಭಾಷೆಯ ವ್ಯತ್ಯಾಸ ಇರುವುದರಿಂದ ಜನರನ್ನು ಸಂಭಾಳಿಸುವುದು ಕಷ್ಟ ಎಂದು ತಿಳಿಹೇಳಿದ್ದೆ. ಅದನ್ನು ಹೊರತುಪಡಿಸಿ ಯಾವುದೇ ಜಾತಿ ಜನಾಂಗದ ವಿಚಾರ ಅಥವಾ ಬೇರೆ ವಿಚಾರವನ್ನು ನಾನು ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಅದೇ ವ್ಯಕ್ತಿಯು ಇದೀಗ ನಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ನನ್ನ ಗಮನಕ್ಕೆ ಬಾರದಂತೆ ಕೆಲಸಕ್ಕೆ ಹಾಜರಾಗಿದ್ದರು. ಆ ವ್ಯಾಪ್ತಿಯ ನಮ್ಮ ಕಾರ್ಯಕರ್ತರು ಹಾಗೂ ಮತದಾರರು ಒತ್ತಡ ಹಾಕಿದ್ದರಿಂದ ಒಬ್ಬ ಶಾಸಕನಾಗಿ ನಾನೇ ಮಾತನಾಡಿದೆ. ಏಕೆಂದರೆ ಪೊಲೀಸ್ ಠಾಣೆ ವಿಚಾರವಾಗಿ ಪ್ರತಿದಿನ ಹತ್ತಾರು ಕರೆಗಳು ನನಗೆ ಬರುತ್ತವೆ. ನಾನೇ ಖುದ್ದು ಅದನ್ನು ನಿವಾರಣೆ ಮಾಡಬೇಕಾದ್ದರಿಂದ ಅದು ನನ್ನ ಹೊಣೆಗಾರಿಕೆಯೂ ಆಗಿದೆ ಎಂದು ಹೇಳಿದ್ದಾರೆ.

ಇದೀಗ ನನ್ನ ವಿರುದ್ಧ ಒಕ್ಕಲಿಗರ ವಿರೋಧಿ ಎಂಬ ಕುತಂತ್ರದ ಪ್ರಚಾರ ನಡೆಯುತ್ತಿದೆ. ಇದು ಸತ್ಯಕ್ಕೆ ದೂರವಾದ ಮಾತು. ಬಹುತೇಕ ನನ್ನ ಜೊತೆಗಾರರರು ಒಕ್ಕಲಿಗ ನಾಯಕರೇ ಆಗಿದ್ದಾರೆ. ನಮ್ಮ ಕ್ಷೇತ್ರದ ಸಂಪೂರ್ಣ ಅಭಿವೃದ್ಧಿಯಲ್ಲಿ ಒಕ್ಕಲಿಗರ ನಿರ್ದೇಶನದಂತೆ ಬಹುತೇಕ ಕೆಲಸಗಳನ್ನು ಮಾಡಲಾಗುತ್ತಿದೆ. ಹಾಗಾಗಿ ನನ್ನ ವಿರೋಧಿಗಳು ಹೆಣೆದಿರುವ ಈ ಕುತಂತ್ರವನ್ನು ದಯವಿಟ್ಟು ಯಾರೂ ನಂಬಬಾರದು ಎಂದು ಅವರು ಮನವಿ ಮಾಡಿದ್ದಾರೆ.

ಸಾರ್ವಜನಿಕ ವಲಯದಲ್ಲಿ ಆಕ್ರೋಶ ಪೊಲೀಸ್ ಅಧಿಕಾರಿಯನ್ನು ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಬಾಯಿಬಂದಂತೆ ನಿಂದಿಸಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ಈಗಾಗಲೇ ಪಿಎಸ್​ಐ ನೇಮಕಾತಿ ಅವ್ಯವಹಾರ ರಾಜ್ಯದಲ್ಲಿ ಸದ್ದು ಮಾಡಿರುವ ಬೆನ್ನಲ್ಲೇ ನಿಯೋಜನೆಗೂ ಲಂಚ ಕೊಡಬೇಕು ಎಂಬ ಸಂಗತಿ ಬಹಿರಂಗಗೊಂಡಿದೆ. ಪೊಲೀಸ್ ಇಲಾಖೆಯಲ್ಲಿ ರಾಜಕಾರಿಣಿಗಳ ಹಸ್ತಕ್ಷೇಪ ಮೇರೆ ಮೀರಿದ್ದು, ಕಡಿವಾಣ ಹಾಕಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಶಾಸಕರಿಗೆ ಕೊಡಬೇಕಾದಷ್ಟು ಕಾಣಿಕೆ ಕೊಡದಿದ್ದರೆ, ಅವರ ಕಡೆಯವರನ್ನು ಓಲೈಸದಿದ್ದರೆ ಕೆಲಸ ಮಾಡಲು ಬಿಡುವುದೇ ಇಲ್ಲ ಎನ್ನುವಂಥ ಪರಿಸ್ಥಿತಿ ನಿರ್ಮಾಣವಾಗಿರುವುದನ್ನು ಈ ವೈರಲ್ ಆಡಿಯೊ ಎತ್ತಿತೋರಿಸಿದೆ. ಒಬ್ಬ ಪೊಲೀಸ್ ಅಧಿಕಾರಿಗೆ ಅವರ ಕಿಂಚಿತ್ತೂ ಗೌರವ ಕೊಡದೇ ಮನಸೋಯಿಚ್ಛೆ ಬೈಯಲು ನಿಮಗೆ ಅಧಿಕಾರ ಕೊಟ್ಟವರು ಯಾರು? ಒಬ್ಬ ಶಾಸಕನಾಗಿ, ಅದೂ ಆಡಳಿತ ಪಕ್ಷಕ್ಕೆ ಸೇರಿದವನಾಗಿ ಇಷ್ಟು ಹೀನಾಯವಾಗಿ ಒಬ್ಬ ಅಧಿಕಾರಿಯನ್ನು ನಡೆಸಿಕೊಳ್ಳಬಹುದೇ? ನಿಮ್ಮದೇ ಪಕ್ಷದ ಆಡಳಿತ ಇರುವ ಸರ್ಕಾರ ನಿಯೋಜಿಸಿರುವ ಐಜಿಯಂಥ ಹಿರಿಯ ಅಧಿಕಾರಿಯನ್ನು ಯಾವನೋ ಐಜಿ ಎಂದು ನೀವು ಪ್ರಶ್ನೆ ಮಾಡುವುದಾದರೆ ಎಲ್ಲಿಗೆ ಬಂದು ನಿಂತಿದೆ ವ್ಯವಸ್ಥೆ? ನೀವು ಹೇಳಿದ ಅಧಿಕಾರಿಗಳನ್ನೇ ಸರ್ಕಾರ ಠಾಣೆಗಳಿಗೆ ನೇಮಿಸಬೇಕಾ? ನಿಮ್ಮ ಒಪ್ಪಿಗೆ ಇಲ್ಲದೇ ಖಾಕಿ ತೊಟ್ಟು ಬಂದ ಬೇರೆ ಅಧಿಕಾರಿಗಳಿಗೆ ಬೆಲೆಯೇ ಇಲ್ಲವೇ ಎಂದೆಲ್ಲಾ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಎಂ.ಪಿ.ಕುಮಾರಸ್ವಾಮಿ ಎಗ್ಗಿಲ್ಲದೆ ಮಾತನಾಡಿರುವುದು ಇದೇ ಮೊದಲಲ್ಲ. ಈ ಹಿಂದೆ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿಯೂ ಅವರು ಬಾಯಿಗೆ ಬಂದಂತೆ ಮಾತನಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.

ಇದನ್ನೂ ಓದಿ: PSI Recruitment Scam: ಪರೀಕ್ಷಾ ಅಕ್ರಮ -ಇಬ್ಬರು ಪೊಲೀಸ್​​ ಅಧಿಕಾರಿಗಳು ಸಸ್ಪೆಂಡ್, ಮೈಸೂರು ವಿವಿ ಮೌಲ್ಯಮಾಪನ ಕುಲಸಚಿವ ಪ್ರೊ. ನಾಗರಾಜ್‌ ಅಮಾನತು

ಇದನ್ನೂ ಓದಿ: ಸಿದ್ದರಾಮಯ್ಯನವರ ಅವಧಿಯಲ್ಲೂ ಸಾಕಷ್ಟು ಹಗರಣಗಳಾಗಿವೆ; ಛಲವಾದಿ ನಾರಾಯಣಸ್ವಾಮಿ ಟೀಕೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada