ಬಾಲನಟಿ ವಂಶಿಕಾ ಅಂಜನಿ ಕಶ್ಯಪ ಹೆಸರನ್ನು ದುರ್ಬಳಕೆ ಮಾಡಿಕೊಂಡು ಅನೇಕ ಜನರಿಗೆ ಮೋಸ ಮಾಡಿದ ಪ್ರಕರಣ ಇತ್ತೀಚೆಗೆ ಬೆಳಕಿಗೆ ಬಂತು. ಇಂಥ ಕೆಲಸ ಮಾಡಿದ್ದಾರೆ ಎನ್ನಲಾದ ನಿಶಾ ನರಸಪ್ಪ ವಿರುದ್ಧ ಈಗಾಗಲೇ ಅನೇಕ ದೂರುಗಳು ದಾಖಲಾಗಿವೆ. ಇಂಥ ಫ್ರಾಡ್ (Fraud) ನಡೆಯುವುದು ಸ್ಯಾಂಡಲ್ವುಡ್ನಲ್ಲಿ ಮಾತ್ರವಲ್ಲ. ಬಾಲಿವುಡ್ ಮಂದಿಯ ಹೆಸರನ್ನೂ ಹೇಳಿಕೊಂಡು ಕೆಲವರು ಮೋಸ ಮಾಡುತ್ತಿರುವುದು ಗೊತ್ತಾಗಿದೆ. ಖ್ಯಾತ ನಟ ಸಲ್ಮಾನ್ ಖಾನ್ (Salman Khan) ಮತ್ತು ಅವರ ನಿರ್ಮಾಣ ಸಂಸ್ಥೆಯ (Salman Khan Films) ಹೆಸರು ಬಳಸಿಕೊಂಡು ಯಾರೋ ಕಿಡಿಗೇಡಿಗಳು ಜನರಿಂದ ಹಣ ಕೀಳುವ ಪ್ರಯತ್ನ ಮಾಡಿದ್ದಾರೆ. ಈ ಬಗ್ಗೆ ಸ್ವತಃ ಸಲ್ಮಾನ್ ಖಾನ್ ಕಡೆಯಿಂದ ಹೇಳಿಕೆ ಬಿಡುಗಡೆ ಮಾಡಲಾಗಿದೆ.
ಸಲ್ಮಾನ್ ಖಾನ್ ಅವರ ಒಡೆತನದ ‘ಸಲ್ಮಾನ್ ಖಾನ್ ಫಿಲ್ಮ್ಸ್’ ಕಂಪನಿಯ ಮೂಲಕ ಸ್ಪಷ್ಟನೆ ನೀಡಲಾಗಿದೆ. ‘ಸಲ್ಮಾನ್ ಖಾನ್ ಅವರಾಗಲಿ, ಸಲ್ಮಾನ್ ಖಾನ್ ಫಿಲ್ಮ್ಸ್ ಕಂಪನಿ ಕಡೆಯಿಂದಾಗಲಿ ಯಾವುದೇ ಕಲಾವಿದರ ಆಯ್ಕೆ ಸದ್ಯಕ್ಕೆ ನಡೆಯುತ್ತಿಲ್ಲ. ನಮ್ಮ ಸಿನಿಮಾಗಳಿಗೆ ಕಲಾವಿದರನ್ನು ಆಯ್ಕೆ ಮಾಡುವ ಸಲುವಾಗಿ ನಾವು ಯಾವುದೇ ಕಾಸ್ಟಿಂಗ್ ಏಜೆನ್ಸಿಯನ್ನು ನೇಮಿಸಿಕೊಂಡಿಲ್ಲ. ಯಾರಿಂದಲಾದರೂ ಈ ಬಗ್ಗೆ ಮೆಸೇಜ್ ಅಥವಾ ಇ-ಮೇಲ್ ಬಂದರೆ ದಯವಿಟ್ಟು ನಂಬಬೇಡಿ. ಸಲ್ಮಾನ್ ಖಾನ್ ಮತ್ತು ಅವರ ಸಂಸ್ಥೆಯ ಹೆಸರನ್ನು ಅನಧಿಕೃತವಾಗಿ ಬಳಸಿಕೊಂಡಿರುವುದು ಕಂಡುಬಂದರೆ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಸ್ಪಷ್ಟನೆ ನೀಡಲಾಗಿದೆ.
Official Notice! pic.twitter.com/uIvAQgYbwl
— Salman Khan (@BeingSalmanKhan) July 17, 2023
ಬಾಲಿವುಡ್ನಲ್ಲಿ ಸಲ್ಮಾನ್ ಖಾನ್ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ನಟನಾಗಿ, ನಿರ್ಮಾಪಕನಾಗಿ, ಕಿರುತೆರೆ ಕಾರ್ಯಕ್ರಮಗಳ ನಿರೂಪಕನಾಗಿ ಅವರು ಹೆಸರು ಮಾಡಿದ್ದಾರೆ. ಚಿತ್ರರಂಗದಲ್ಲಿ ಎಷ್ಟೋ ಜನರಿಗೆ ಅವರು ಅವಕಾಶ ನೀಡಿದ್ದಾರೆ. ಹಲವು ಕಲಾವಿದರನ್ನು ಮತ್ತು ತಂತ್ರಜ್ಞರನ್ನು ಬಾಲಿವುಡ್ಗೆ ಪರಿಚಯಿಸಿದ ಖ್ಯಾತಿ ಅವರಿಗೆ ಸಲ್ಲುತ್ತದೆ. ಈಗ ಅವರ ಹೆಸರಲ್ಲಿ ಯಾರೋ ಮೋಸ ಮಾಡುತ್ತಿರುವುದು ತಿಳಿದುಬಂದಿದೆ. ಜನರು ಮೋಸ ಹೋಗಬಾರದು ಎಂಬ ಉದ್ದೇಶದಿಂದ ಸಲ್ಲು ಅವರು ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಇದನ್ನೂ ಓದಿ: ‘ಸಲ್ಮಾನ್ ಖಾನ್ನನ್ನು ಖಂಡಿತಾ ಕೊಲ್ಲುತ್ತೇನೆ’: ರಾಷ್ಟ್ರೀಯ ಸುದ್ದಿ ವಾಹಿನಿಯಲ್ಲಿ ಬಹಿರಂಗವಾಗಿ ಕೊಲೆ ಬೆದರಿಕೆ
ಸದ್ಯ ಸಲ್ಮಾನ್ ಖಾನ್ ಅವರು ‘ಬಿಗ್ ಬಾಸ್ ಒಟಿಟಿ 2’ ಕಾರ್ಯಕ್ರಮದ ನಿರೂಪಣೆ ಮಾಡುತ್ತಿದ್ದಾರೆ. ಅಲ್ಲದೇ, ‘ಟೈಗರ್ 3’ ಚಿತ್ರದ ಕೆಲಸಗಳಲ್ಲೂ ಬ್ಯುಸಿ ಆಗಿದ್ದಾರೆ. ಈ ಸಿನಿಮಾ ಮೇಲೆ ಅಭಿಮಾನಿಗಳಿಗೆ ದೊಡ್ಡಮಟ್ಟದ ನಿರೀಕ್ಷೆ ಇದೆ. ಒಂದಿಲ್ಲೊಂದು ಕಾರಣಕ್ಕೆ ಸಲ್ಲು ಆಗಾಗ ಸುದ್ದಿ ಆಗುತ್ತಾರೆ. ಅವರ ಅಭಿಮಾನಿ ಬಳಗ ದಿನದಿಂದ ದಿನಕ್ಕೆ ಹಿರಿದಾಗುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.