ಸಲ್ಮಾನ್ ಖಾನ್‌ಗೆ ಹಿನ್ನಡೆ: ‘ಕಾಲಾ ಹಿರಣ್’ ಚಿತ್ರದ ತುರ್ತು ನಿಷೇಧಕ್ಕೆ ದೆಹಲಿ ಹೈಕೋರ್ಟ್ ನಿರಾಕರಣೆ

ಸಲ್ಮಾನ್ ಖಾನ್ ಅವರು ‘ಕಾಲಾ ಹಿರಣ್’ ಚಿತ್ರತಂಡದ ವಿರುದ್ಧ ಕಾನೂನು ಸಮರಕ್ಕೆ ಇಳಿದಿದ್ದಾರೆ. ವಾದ ಆಲಿಸಿದ ನ್ಯಾಯಾಲಯವು ಸದ್ಯಕ್ಕೆ ಈ ಸಿನಿಮಾಗೆ ತಡೆ ನೀಡಲು ನಿರಾಕರಿಸಿದೆ. ಮೊದಲು ಚಿತ್ರತಂಡಕ್ಕೆ ಎಲ್ಲಾ ದಾಖಲೆಗಳನ್ನು ನೀಡಿ, ಅವರು ತಮ್ಮ ಪರ ವಾದ ಸಿದ್ಧಪಡಿಸಿಕೊಳ್ಳಲು ಅವಕಾಶ ಕೊಡಿ ಎಂದು ಸಲ್ಮಾನ್ ತಂಡಕ್ಕೆ ಕೋರ್ಟ್ ಸೂಚಿಸಿದೆ.

ಸಲ್ಮಾನ್ ಖಾನ್‌ಗೆ ಹಿನ್ನಡೆ: ‘ಕಾಲಾ ಹಿರಣ್’ ಚಿತ್ರದ ತುರ್ತು ನಿಷೇಧಕ್ಕೆ ದೆಹಲಿ ಹೈಕೋರ್ಟ್ ನಿರಾಕರಣೆ
Kala Hiran Movie Poster

Updated on: Jun 19, 2026 | 7:33 PM

ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ದೆಹಲಿ ಹೈಕೋರ್ಟ್‌ನಲ್ಲಿ ಸದ್ಯಕ್ಕೆ ಹಿನ್ನಡೆ ಆಗಿದೆ. ಅವರ ಜೀವನಾಧಾರಿತ ಎನ್ನಲಾದ ‘ಕಾಲಾ ಹಿರಣ್: ದಿ ಬ್ಯಾಟಲ್ ಫಾರ್ ಲೆಗಸಿ’ (Kala Hiran) ಚಿತ್ರದ ಬಿಡುಗಡೆಗೆ ತಡೆಯಾಜ್ಞೆ ನೀಡಬೇಕೆಂಬ ಮನವಿಯ ವಿಚಾರಣೆಯನ್ನು ನ್ಯಾಯಾಲಯವು ಮುಂದೂಡಿದೆ. ಇದರಿಂದಾಗಿ ಸಲ್ಮಾನ್ ಖಾನ್ ಅವರು ಕೋರ್ಟ್ ತೀರ್ಪಿಗಾಗಿ ಜುಲೈ 1ರವರೆಗೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ‘ಲೈವ್ ಲಾ’ ಇಂಡಿಯಾ ವರದಿಯ ಪ್ರಕಾರ, ಜಸ್ಟಿಸ್ ಮಧು ಜೈನ್ ಅವರ ನೇತೃತ್ವದ ಪೀಠವು, ಸಲ್ಮಾನ್ ಖಾನ್ (Salman Khan) ಅವರ ಕಾನೂನು ತಂಡಕ್ಕೆ ಮೊಕದ್ದಮೆಯ ಸಂಪೂರ್ಣ ದಾಖಲೆಗಳನ್ನು ಚಿತ್ರನಿರ್ಮಾಪಕರಿಗೆ ಸಲ್ಲಿಸುವಂತೆ ಆದೇಶಿಸಿದೆ. ತದನಂತರ ವಿವರವಾದ ವಾದ-ಪ್ರತಿವಾದ ಆಲಿಸಲು ಪ್ರಕರಣವನ್ನು ಜುಲೈ 1ಕ್ಕೆ ಮುಂದೂಡಿದೆ.

1998ರ ಕೃಷ್ಣಮೃಗ ಬೇಟೆ ಪ್ರಕರಣ ಮತ್ತು ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಜೊತೆಗಿನ ವಿವಾದಗಳನ್ನು ಆಧರಿಸಿ ‘ಕಾಲಾ ಹಿರಣ್’ ಸಿನಿಮಾ ಮಾಡಲಾಗುತ್ತಿದೆ ಎಂದು ಆರೋಪಿಸಿ ಸಲ್ಮಾನ್ ಖಾನ್ ಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ ಇದು ಸಲ್ಮಾನ್ ಖಾನ್ ಅವರ ಕಹಾನಿ ಅಲ್ಲ ಎಂದು ಚಿತ್ರದ ನಿರ್ಮಾಪಕರು ವಾದಿಸುತ್ತಿದ್ದಾರೆ. ಹಾಗಿದ್ದರೂ ಟೀಸರ್​ನಲ್ಲಿ ಸಲ್ಮಾನ್ ಖಾನ್ ಅವರಿಗೆ ಸಾಮ್ಯತೆ ಕಾಣಿಸಿದೆ.

ಸಲ್ಮಾನ್ ಖಾನ್ ಪರ ವಾದ ಮಂಡಿಸಿದ ಹಿರಿಯ ವಕೀಲ ಸಂದೀಪ್ ಸೇಥಿ, ‘ನನ್ನ ಕಕ್ಷಿದಾರರ ಜೀವನದ ಆಧಾರದ ಮೇಲೆ ಸಿನಿಮಾ ಮಾಡುತ್ತಿದ್ದಾರೆ. ಇದಕ್ಕೆ ಅವರಿಗೆ ಯಾವುದೇ ಹಕ್ಕಿಲ್ಲ, ನಾವು ಯಾವುದೇ ಅನುಮತಿ ನೀಡಿಲ್ಲ’ ಎಂದು ಸ್ಪಷ್ಟಪಡಿಸಿದರು. ಸಿನಿಮಾದಲ್ಲಿ ಸಲ್ಮಾನ್ ಖಾನ್ ಹೆಸರನ್ನು ನೇರವಾಗಿ ಬಳಸದಿದ್ದರೂ, ಕಥೆ ಮತ್ತು ಪಾತ್ರಗಳು ಅವರ ನಿಜ ಜೀವನಕ್ಕೆ ತೀರಾ ಹತ್ತಿರವಾಗಿವೆ ಎಂದು ದೂರಲಾಗಿದೆ.

ಚಿತ್ರದ ಟೀಸರ್‌ನಲ್ಲಿ ನಾಯಕ ನಟನು ಸಲ್ಮಾನ್ ಖಾನ್ ಅವರಂತೆ ಕಾಣುವುದಲ್ಲದೆ, ಅವರ ಸಿಗ್ನೇಚರ್ ಆದ ಬ್ಲೂ ಬ್ರೇಸ್ಲೆಟ್ ಧರಿಸಿರುವುದು ಇದಕ್ಕೆ ಸಾಕ್ಷಿ ಎಂದು ವಕೀಲರು ವಾದಿಸಿದರು. ಅಲ್ಲದೆ, ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ಖುಲಾಸೆಯಾಗಿದ್ದರೂ, ಟೀಸರ್‌ನಲ್ಲಿ ನಾಯಕ ಗನ್ ಹಿಡಿದಿರುವುದನ್ನು ತೋರಿಸಿ ತಪ್ಪು ಮಾಹಿತಿ ನೀಡಲಾಗುತ್ತಿದೆ ಎಂದು ಅವರು ದೂರಿದ್ದಾರೆ.

ಇದನ್ನೂ ಓದಿ: ಬಿಗ್ ಬಜೆಟ್ ಐತಿಹಾಸಿಕ ಸಿನಿಮಾಗಾಗಿ ಸಲ್ಮಾನ್ ಖಾನ್ ಜತೆ ಕೈ ಜೋಡಿಸಿದ ಫರ್ಹಾನ್ ಅಖ್ತರ್?

ಚಿತ್ರದ ಬಿಡುಗಡೆಗೆ ತಕ್ಷಣವೇ ತಡೆ ನೀಡಬಾರದು ಎಂದು ಚಿತ್ರನಿರ್ಮಾಪಕರ ವಕೀಲರು ಕೋರಿದರು. ಸಲ್ಮಾನ್ ಖಾನ್ ತಂಡದಿಂದ ತಮಗೆ ಕೇವಲ ಅರ್ಧದಷ್ಟು ಕಾನೂನು ದಾಖಲೆಗಳು ಮಾತ್ರ ಸಿಕ್ಕಿವೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು. ಇದರೊಂದಿಗೆ, ಈ ಸಿನಿಮಾದ ವಿವಾದದಿಂದ ಚಿತ್ರತಂಡಕ್ಕೆ ಜೀವ ಬೆದರಿಕೆ ಕರೆಗಳು ಬರುತ್ತಿದ್ದು, ಈಗಾಗಲೇ ಈ ಬಗ್ಗೆ ಪೊಲೀಸರಿಗೆ ದೂರು ನೀಡಿರುವುದಾಗಿ ವಕೀಲರು ಕೋರ್ಟ್ ಗಮನಕ್ಕೆ ತಂದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us