
ನಟ ಶಾರುಖ್ ಖಾನ್ (Shah Rukh Khan) ಅವರು ಭರ್ಜರಿಯಾಗಿ ಕಮ್ಬ್ಯಾಕ್ ಮಾಡುವುದು ಖಚಿತವಾಗಿದೆ. ಸತತ ಸೋಲಿನಿಂದ ಕಂಗೆಟ್ಟಿದ್ದ ಅವರು ಒಂದಷ್ಟು ವರ್ಷಗಳ ಬ್ರೇಕ್ ಪಡೆದುಕೊಂಡಿದ್ದರು. ಈಗ ‘ಪಠಾಣ್’ ಸಿನಿಮಾ (Pathaan Movie) ಮೂಲಕ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುವ ಸೂಚನೆ ನೀಡಿದ್ದಾರೆ. ಈ ಚಿತ್ರದ ಬಗ್ಗೆ ಅವರ ಅಭಿಮಾನಿಗಳಿಗೆ ಸಖತ್ ನಿರೀಕ್ಷೆ ಇದೆ. ಆ ನಿರೀಕ್ಷೆಯನ್ನು ಹೆಚ್ಚು ಮಾಡುವ ರೀತಿಯಲ್ಲಿ ‘ಬೇಷರಂ ರಂಗ್..’ ಹಾಡು ರಿಲೀಸ್ ಆಗಿದೆ. ಯೂಟ್ಯೂಬ್ನಲ್ಲಿ ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ 10 ಲಕ್ಷಕ್ಕಿಂತಲೂ ಅಧಿಕ ವೀವ್ಸ್ ಪಡೆದುಕೊಂಡಿರುವುದು ಈ ಹಾಡಿನ ಹೆಚ್ಚುಗಾರಿಕೆ. ನಟಿ ದೀಪಿಕಾ ಪಡುಕೋಣೆ (Deepika Padukone) ಮತ್ತು ಶಾರುಖ್ ಖಾನ್ ಅವರ ಕೆಮಿಸ್ಟ್ರಿ ಕಂಡು ಫ್ಯಾನ್ಸ್ ಫಿದಾ ಆಗಿದ್ದಾರೆ.
‘ಪಠಾಣ್’ ಚಿತ್ರಕ್ಕೆ ಸಿದ್ದಾರ್ಥ್ ಆನಂದ್ ನಿರ್ದೇಶನ ಮಾಡುತ್ತಿದ್ದಾರೆ. 2023ರ ಜನವರಿ 25ಕ್ಕೆ ಈ ಚಿತ್ರ ರಿಲೀಸ್ ಆಗಲಿದೆ. ಈ ಮೊದಲು ಅನಾವರಣ ಆಗಿರುವ ಟೀಸರ್ ನೋಡಿ ಎಲ್ಲರೂ ಮೆಚ್ಚಿಕೊಂಡಿದ್ದರು. ಈಗ ಹಾಡಿನ ಮೂಲಕ ‘ಪಠಾಣ್’ ತಂಡ ಸದ್ದು ಮಾಡುತ್ತಿದೆ. ವಿಶಾಲ್-ಶೇಖರ್ ಸಂಗೀತ ನಿರ್ದೇಶನ ಮಾಡಿರುವ ‘ಬೇಷರಂ ರಂಗ್..’ ಗೀತೆಯನ್ನು ತುಂಬ ಗ್ಲಾಮರಸ್ ಆಗಿ ಚಿತ್ರೀಕರಿಸಲಾಗಿದೆ.
ಇದನ್ನೂ ಓದಿ: Aryan Khan: ಚಿತ್ರರಂಗಕ್ಕೆ ಶಾರುಖ್ ಖಾನ್ ಮಗ ಆರ್ಯನ್ ಖಾನ್ ಎಂಟ್ರಿ; ಬ್ರೇಕಿಂಗ್ ನ್ಯೂಸ್ ನೀಡಿದ ಸ್ಟಾರ್ ಕಿಡ್
ಹಿಂದಿ, ತೆಲುಗು ಹಾಗೂ ತಮಿಳಿನಲ್ಲಿ ‘ಪಠಾಣ್’ ಚಿತ್ರ ಬಿಡುಗಡೆ ಆಗಲಿದೆ. ಈ ಸಿನಿಮಾ ಮೂಲಕ ದೊಡ್ಡ ಗೆಲುವು ಪಡೆಯಲೇಬೇಕಾದ ಅನಿವಾರ್ಯತೆ ಶಾರುಖ್ ಖಾನ್ ಅವರಿಗೆ ಇದೆ. ಹಾಗಾಗಿ ಈ ಚಿತ್ರಕ್ಕಾಗಿ ಅವರು ತುಂಬ ಶ್ರಮಪಟ್ಟಿದ್ದಾರೆ. ದೇಹ ಹುರಿಗೊಳಿಸಿಕೊಂಡು 6 ಪ್ಯಾಕ್ ಬಾಡಿ ಮೂಲಕ ಅಭಿಮಾನಿಗಳನ್ನು ಸೆಳೆಯಲು ಪ್ರಯತ್ನಿಸಿದ್ದಾರೆ. ‘ಬೇಷರಂ ರಂಗ್..’ ಹಾಡಿನಲ್ಲಿ ಅದರ ಝಲಕ್ ನೋಡಿ ಅಭಿಮಾನಿಗಳಿಗೆ ಖುಷಿ ಆಗಿದೆ. ದೊಡ್ಡ ಪರದೆಯಲ್ಲಿ ಶಾರುಖ್ ಅವರನ್ನು ನೋಡಲು ಫ್ಯಾನ್ಸ್ ಕಾಡಿದ್ದಾರೆ.
ಇದನ್ನೂ ಓದಿ: Mannat: ಶಾರುಖ್ ಖಾನ್ ಮನೆಯ ಗೇಟಿಗೆ ವಜ್ರದ ಅಲಂಕಾರ; ಹೇಗಿದೆ ನೋಡಿ ‘ಮನ್ನತ್’ ವೈಭೋಗ
ದೀಪಿಕಾ ಪಡುಕೋಣೆ ಅವರು ‘ಭೇಷರಂ ರಂಗ್..’ ಹಾಡಿನಲ್ಲಿ ಹೆಚ್ಚು ಹೈಲೈಟ್ ಆಗಿದ್ದಾರೆ. ಸಖತ್ ಹಾಟ್ ಅವತಾರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಅವರು ಡ್ಯಾನ್ಸ್ ಮಾಡಿರುವ ಪರಿ ಕಂಡು ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ‘ಓಂ ಶಾಂತಿ ಓಂ’, ‘ಚೆನ್ನೈ ಎಕ್ಸ್ಪ್ರೆಸ್’ ಮತ್ತು ‘ಹ್ಯಾಪಿ ನ್ಯೂ ಇಯರ್’ ಬಳಿಕ ದೀಪಿಕಾ ಪಡುಕೋಣೆ ಮತ್ತು ಶಾರುಖ್ ಖಾನ್ ಅವರು ನಾಲ್ಕನೇ ಬಾರಿಗೆ ಒಂದಾಗಿರುವುದರಿಂದ ‘ಪಠಾಣ್’ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಾಗಿದೆ.
‘ಬೇಷರಂ ರಂಗ್..’ ಹಾಡಿಗೆ ಜನರಿಂದ ಸಿಗುತ್ತಿರುವ ಪ್ರತಿಕ್ರಿಯೆ ಕಂಡು ಚಿತ್ರತಂಡಕ್ಕೆ ಖುಷಿ ಆಗಿದೆ. ಇದೇ ರೀತಿ ಸಿನಿಮಾ ಕೂಡ ಸೂಪರ್ ಹಿಟ್ ಆಗಲಿದೆ ಎಂಬ ಭರವಸೆ ಮೂಡುವಂತಾಗಿದೆ. ಶಾರುಖ್ ಖಾನ್, ದೀಪಿಕಾ ಪಡುಕೋಣೆ ಜೊತೆ ಜಾನ್ ಅಬ್ರಾಹಂ ಕೂಡ ಈ ಚಿತ್ರದಲ್ಲಿ ಮುಖ್ಯ ಪಾತ್ರ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:10 pm, Mon, 12 December 22