
ಎಷ್ಟೇ ಸಿನಿಮಾ ಸೋತರೂ ಶಾರುಖ್ ಖಾನ್ (Shah Rukh Khan) ಅವರಿಗೆ ಇರುವ ಡಿಮ್ಯಾಂಡ್ ಕಡಿಮೆ ಆಗಿಲ್ಲ. ಅವರನ್ನು ಪ್ರೀತಿಸುವ ಜನರ ಸಂಖ್ಯೆಯೂ ತಗ್ಗಿಲ್ಲ. ಕಿಂಗ್ ಖಾನ್ ಜೊತೆ ಚಿತ್ರ ಮಾಡಲು ಹಲವು ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ಈಗಲೂ ಸಾಲುಗಟ್ಟಿ ನಿಂತಿವೆ. ಅದೇ ಭರವಸೆಯೊಂದಿಗೆ ಶಾರುಖ್ ಅವರು ಮೈಕೊಡವಿ ನಿಲ್ಲಲು ಸಜ್ಜಾಗಿದ್ದಾರೆ. ಇಂದು (ನ.2) ಅವರಿಗೆ ಜನ್ಮದಿನದ (Shah Rukh Khan Birthday) ಸಂಭ್ರಮ. ಆ ಪ್ರಯುಕ್ತ ಅಭಿಮಾನಿಗಳು, ಸೆಲೆಬ್ರಿಟಿಗಳು ಹಾಗೂ ಆಪ್ತರು ಶುಭಾಶಯ ತಿಳಿಸುತ್ತಿದ್ದಾರೆ. ಅನೇಕ ಪ್ರಾಜೆಕ್ಟ್ಗಳಲ್ಲಿ ಶಾರುಖ್ (SRK) ಬ್ಯುಸಿ ಆಗಿದ್ದಾರೆ. ಆ ಚಿತ್ರತಂಡಗಳಿಂದ ಇಂದು ವಿಶೇಷ ಟೀಸರ್ ಹಾಗೂ ಪೋಸ್ಟರ್ಗಳು ಬಿಡುಗಡೆ ಆಗುವ ನಿರೀಕ್ಷೆ ಇದೆ.
ಒಂದು ಕಾಲದಲ್ಲಿ ಬ್ಯಾಕ್ ಟು ಬ್ಯಾಕ್ ಯಶಸ್ಸು ಕಂಡಿದ್ದ ಶಾರುಖ್ ಖಾನ್ ಅವರಿಗೆ ಇತ್ತೀಚಿನ ವರ್ಷಗಳಲ್ಲಿ ಗೆಲುವು ಎಂಬುದು ಮರೀಚಿಕೆ ಆಯಿತು. ಮಾಡಿದ ಎಲ್ಲ ಸಿನಿಮಾಗಳು ಸೋತವು. ಅದರಿಂದ ಸಹಜವಾಗಿಯೇ ಶಾರುಖ್ ಅಭಿಮಾನಿಗಳಿಗೆ ಬೇಸರ ಆಯಿತು. 2018ರಲ್ಲಿ ಬಂದ ‘ಜೀರೋ’ ಸಿನಿಮಾ ಬಳಿಕ ಅವರು ದೀರ್ಘ ಬ್ರೇಕ್ ಪಡೆದುಕೊಂಡರು. ಆದರೆ ಈಗ ಮತ್ತೆ ಅವರು ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ದೊಡ್ಡ ಗ್ಯಾಪ್ ಬಳಿಕ ಸತತವಾಗಿ ಅಬ್ಬರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಶಾರುಖ್ ಖಾನ್ ಅವರ ಬತ್ತಳಿಕೆಯಲ್ಲಿ ಈಗ ಬಹುನಿರೀಕ್ಷಿತ ಸಿನಿಮಾಗಳಿವೆ. ಯಶಸ್ವಿ ನಿರ್ದೇಶಕರ ಜೊತೆ ಅವರು ಕೈ ಜೋಡಿಸಿರುವುದೇ ಈ ನಿರೀಕ್ಷೆಗೆ ಕಾರಣ. ರಾಜ್ಕುಮಾರ್ ಹಿರಾನಿ ಜೊತೆ ‘ಡಂಕಿ’, ಅಟ್ಲಿ ಜೊತೆ ‘ಜವಾನ್’ ಹಾಗೂ ಸಿದ್ದಾರ್ಥ್ ಆನಂದ್ ಜೊತೆ ‘ಪಠಾಣ್’ ಸಿನಿಮಾಗಳನ್ನು ಶಾರುಖ್ ಖಾನ್ ಮಾಡುತ್ತಿದ್ದಾರೆ. ಈ ಎಲ್ಲ ಚಿತ್ರಗಳು ಒಂದಿಲ್ಲೊಂದು ಕಾರಣಕ್ಕೆ ಹೈಪ್ ಸೃಷ್ಟಿ ಮಾಡಿವೆ.
ಸತತ ನಾಲ್ಕು ವರ್ಷಗಳ ಗ್ಯಾಪ್ ಬಳಿಕ 2023ರಲ್ಲಿ ಶಾರುಖ್ ಅವರು ದೊಡ್ಡ ಪರದೆ ಮೇಲೆ ಅಭಿಮಾನಿಗಳಿಗೆ ದರ್ಶನ ನೀಡಲಿದ್ದಾರೆ. ‘ಪಠಾಣ್’ ಸಿನಿಮಾ 2023ರ ಜನವರಿ 25ಕ್ಕೆ ರಿಲೀಸ್ ಆಗಲಿದೆ. ಅದೇ ವರ್ಷ ಜೂನ್ ವೇಳೆಗೆ ‘ಜವಾನ್’ ಕೂಡ ಬಿಡುಗಡೆ ಆಗುವ ನಿರೀಕ್ಷೆ ಇದೆ. ವರ್ಷಾಂತ್ಯಕ್ಕೆ ‘ಡಂಕಿ’ ತೆರೆ ಕಾಣಲಿದೆ. ಹಾಗಾಗಿ 2023ರ ವರ್ಷ ಪೂರ್ತಿ ಅಭಿಮಾನಿಗಳ ಪಾಲಿಗೆ ಶಾರುಖ್ ಸಿನಿಮೋತ್ಸವ ಆಗಿರಲಿದೆ.
ಶಾರುಖ್ ಬರ್ತ್ಡೇ ಪ್ರಯುಕ್ತ ಅವರ ಮುಂಬೈ ನಿವಾಸ ‘ಮನ್ನತ್’ ಎದುರು ಅಪಾರ ಸಂಖ್ಯೆಯ ಅಭಿಮಾನಿಗಳು ಜಮಾಯಿಸಲಿದ್ದಾರೆ. ಮನೆಯ ಬಾಲ್ಕನಿಗೆ ಬಂದು ಎಲ್ಲರತ್ತ ಶಾರುಖ್ ಕೈ ಬೀಸಲಿದ್ದಾರೆ. ಹಲವು ವರ್ಷಗಳಿಂದ ಇದು ನಡೆದುಕೊಂಡು ಬರುತ್ತಿದೆ. ಇಂದು ಹುಟ್ಟುಹಬ್ಬದ ಪ್ರಯುಕ್ತ ಯಾವುದಾದರೂ ಹೊಸ ಸಿನಿಮಾ ಅನೌನ್ಸ್ ಆಗಬಹುದೇ ಎಂಬ ಪ್ರಶ್ನೆ ಕೂಡ ಫ್ಯಾನ್ಸ್ ಮನದಲ್ಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.