
ನಟ ಶಾರುಖ್ ಖಾನ್ (Shah Rukh Khan) ಅವರು ಒಂದಿಲ್ಲೊಂದು ಕಾರಣಕ್ಕೆ ಪ್ರತಿ ದಿನ ಸುದ್ದಿ ಆಗುತ್ತಾರೆ. ಸಿನಿಮಾಗಳ ಜೊತೆಯಲ್ಲಿ ಅವರ ವೈಯಕ್ತಿಕ ವಿಚಾರಗಳು ಕೂಡ ಸದ್ದು ಮಾಡುತ್ತವೆ. ಎಲ್ಲರಿಗೂ ತಿಳಿದಿರುವಂತೆ ಶಾರುಖ್ ಖಾನ್ ಅವರ ಸ್ನೇಹಿತರ ಬಳಗ ತುಂಬ ದೊಡ್ಡದು. ಚಿತ್ರರಂಗದಲ್ಲಿ ಅವರಿಗೆ ಅನೇಕ ಸ್ನೇಹಿತರಿದ್ದಾರೆ. ಆ ಪೈಕಿ ನಟಿ ಜೂಹಿ ಚಾವ್ಲಾ (Juhi Chawla) ಜೊತೆಯೂ ಅವರಿಗೆ ಉತ್ತಮ ಒಡನಾಟ ಇದೆ. ಈ ಹಿಂದೆ ಶಾರುಖ್ ಪುತ್ರ ಆರ್ಯನ್ ಖಾನ್ ಜೈಲು ಸೇರಿದ್ದಾಗ ಜೂಹಿ ಚಾವ್ಲಾ ಅವರು ಸಹಾಯಕ್ಕೆ ಬಂದಿದ್ದರು. ಈಗ ಜೂಹಿ ಚಾವ್ಲಾ ಪುತ್ರಿ ಬಗ್ಗೆ ಶಾರುಖ್ ಖಾನ್ ಅವರು ಹೆಮ್ಮೆಯಿಂದ ಟ್ವೀಟ್ ಮಾಡಿದ್ದಾರೆ. ಅವರು ಹಂಚಿಕೊಂಡಿರುವ ಫೋಟೋ ವೈರಲ್ ಆಗಿದೆ. ಅಷ್ಟಕ್ಕೂ ಜೂಹಿ ಚಾವ್ಲಾ ಪುತ್ರಿ (Juhi Chawla Daughter) ಬಗ್ಗೆ ಅವರು ಈಗ ಟ್ವೀಟ್ ಮಾಡಲು ಕಾರಣ ಏನು? ಇಲ್ಲಿದೆ ಉತ್ತರ..
ಸೆಲೆಬ್ರಿಟಿಗಳ ಮಕ್ಕಳಿಗೆ ಚಿತ್ರರಂಗದಲ್ಲಿ ಸುಲಭವಾಗಿ ಅವಕಾಶ ಸಿಗುತ್ತದೆ ಎಂಬುದು ನಿಜ. ಹಾಗಂತ ಅವರು ಶಿಕ್ಷಣದ ಬಗ್ಗೆ ನಿರ್ಲಕ್ಷ್ಯ ಮಾಡುವುದಿಲ್ಲ. ವಿದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪಡೆದು ಬರುತ್ತಾರೆ. ಈ ವಿಚಾರದಲ್ಲಿ ಜೂಹಿ ಚಾವ್ಲಾ ಮಗಳು ಜಾನ್ವಿ ಮೆಹ್ತಾ ಕೂಡ ಹಿಂದೆ ಬಿದ್ದಿಲ್ಲ.
ಜಾನ್ವಿ ಮೆಹ್ತಾ ಅವರು ಕೊಲಂಬಿಯಾ ಯೂನಿವರ್ಸಿಟಿಯಲ್ಲಿ ಪದವಿ ಶಿಕ್ಷಣ ಪೂರೈಸಿದ್ದಾರೆ. ಆ ಸಂಭ್ರಮದ ಫೋಟೋವನ್ನು ಜೂಹಿ ಚಾವ್ಲಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಖುಷಿಪಟ್ಟಿದ್ದಾರೆ. ಇದನ್ನು ಶಾರುಖ್ ಖಾನ್ ರಿಟ್ವೀಟ್ ಮಾಡಿಕೊಂಡಿದ್ದು, ‘ಇದು ಅಮೋಘ. ಸೆಲೆಬ್ರೇಟ್ ಮಾಡಲು ಆಕೆ ವಾಪಸ್ ಬರುವುದನ್ನೇ ಕಾಯುತ್ತಿದ್ದೇನೆ. ತುಂಬ ಹೆಮ್ಮೆ ಎನಿಸುತ್ತಿದೆ. ಲವ್ ಯೂ ಜಾನ್ಸ್’ ಎಂದು ಬರೆದುಕೊಂಡಿದ್ದಾರೆ.
ಡ್ರಗ್ಸ್ ಪಾರ್ಟಿ ಮಾಡಿದ ಆರೋಪದಲ್ಲಿ ಆರ್ಯನ್ ಖಾನ್ ಅರೆಸ್ಟ್ ಆದಾಗ ಶಾರುಖ್ ಖಾನ್ ಕುಟುಂಬಕ್ಕೆ ಮುಜುಗರ ಆಗಿತ್ತು. ಹಲವು ದಿನಗಳ ಕಾಲ ಆರ್ಯನ್ ಖಾನ್ ಅವರು ಜೈಲಿನಲ್ಲಿ ಇರಬೇಕಾಗಿತ್ತು. ಜಾಮೀನು ಪಡೆಯುವ ಸಂದರ್ಭದಲ್ಲಿ ಜೂಹಿ ಚಾವ್ಲಾ ಅವರು ಒಂದು ಲಕ್ಷ ರೂಪಾಯಿ ಬಾಂಡ್ಗೆ ಸಹಿ ಹಾಕಿದ್ದರು. ಈ ಎರಡೂ ಕುಟುಂಬದ ನಡುವಿನ ಸ್ನೇಹ ಯಾವ ರೀತಿ ಇದೆ ಎಂಬುದಕ್ಕೆ ಆ ಘಟನೆ ಸಾಕ್ಷಿ ಆಗಿತ್ತು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.