3ನೇ ಗೆಲುವಿಗಾಗಿ ಗೆಟಪ್​ ಬದಲಿಸಿಕೊಂಡ ಶಾರುಖ್​ ಖಾನ್​; ‘ಡಂಕಿ’ ಟ್ರೇಲರ್​ ಹೇಗಿದೆ ನೋಡಿ

ಶಾರುಖ್​ ಖಾನ್​ ಮತ್ತು ತಾಪ್ಸಿ ಪನ್ನು ಜೋಡಿಯಾಗಿ ನಟಿಸಿರುವ ‘ಡಂಕಿ’ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿ ವಿಕ್ಕಿ ಕೌಶಲ್ ಕೂಡ ಅಭಿನಯಿಸಿದ್ದಾರೆ. ‘ಪಿಕೆ’ ಖ್ಯಾತಿಯ ರಾಜ್​ಕುಮಾರ್​ ಹಿರಾನಿ ಅವರು ‘ಡಂಕಿ’ ಸಿನಿಮಾಗೆ ನಿರ್ದೇಶನ ಮಾಡಿರುವುದರಿಂದ ನಿರೀಕ್ಷೆ ಹೆಚ್ಚಾಗಿದೆ. ಟ್ರೇಲರ್​ಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.

3ನೇ ಗೆಲುವಿಗಾಗಿ ಗೆಟಪ್​ ಬದಲಿಸಿಕೊಂಡ ಶಾರುಖ್​ ಖಾನ್​; ‘ಡಂಕಿ’ ಟ್ರೇಲರ್​ ಹೇಗಿದೆ ನೋಡಿ
ಶಾರುಖ್​ ಖಾನ್​

Updated on: Dec 05, 2023 | 11:07 AM

ನಟ ಶಾರುಖ್​ ಖಾನ್​ (Shah Rukh Khan) ಅವರಿಗೆ 2023ರಲ್ಲಿ ಈಗಾಗಲೇ 2 ಭರ್ಜರಿ ಗೆಲುವು ಸಿಕ್ಕಿದೆ. ಅವರು ನಟಿಸಿದ ‘ಜವಾನ್​’ ಮತ್ತು ‘ಪಠಾಣ್​’ ಸಿನಿಮಾಗಳು ವಿಶ್ವಾದ್ಯಂತ ಪ್ರದರ್ಶನ ಕಂಡು ಸಾವಿರಾರು ಕೋಟಿ ರೂಪಾಯಿ ಕಮಾಯಿ ಮಾಡಿವೆ. ಈಗ ಅವರು ಈ ವರ್ಷದ ಮೂರನೇ ಗೆಲುವಿಗಾಗಿ ಗೆಟಪ್​ ಬದಲಿಸಿಕೊಂಡು ಬಂದಿದ್ದಾರೆ. ಹೌದು, ‘ಡಂಕಿ’ (Dunki) ಸಿನಿಮಾದಲ್ಲಿ ಶಾರುಖ್​ ಖಾನ್ ಅವರ ಗೆಟಪ್​ ಬದಲಾಗಿದೆ. ಇಂದು (ಡಿಸೆಂಬರ್​ 5) ಈ ಸಿನಿಮಾದ ಟ್ರೇಲರ್​ (Dunki Trailer) ಬಿಡುಗಡೆ ಆಗಿದೆ. ಇದರಲ್ಲಿ ಶಾರುಖ್​ ಖಾನ್ ಅವರು ವಯಸ್ಸಾದ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಜ್​ಕುಮಾರ್​ ಹಿರಾನಿ ನಿರ್ದೇಶನ ಮಾಡಿರುವ ಈ ಸಿನಿಮಾ ಡಿಸೆಂಬರ್​ 21ರಂದು ಬಿಡುಗಡೆ ಆಗಲಿದೆ.

‘ಜವಾನ್​’ ಮತ್ತು ‘ಪಠಾಣ್​’ ಸಿನಿಮಾಗಳು ಫುಲ್​ ಮಾಸ್​ ಆಗಿ ಮೂಡಿಬಂದಿದ್ದವು. ಆದರೆ ‘ಡಂಕಿ’ ಸಿನಿಮಾ ಕ್ಲಾಸ್​ ಆಗಿರಲಿದೆ ಎಂಬುದಕ್ಕೆ ಟ್ರೇಲರ್​ನಲ್ಲಿ ಸಾಕ್ಷಿ ಸಿಕ್ಕಿದೆ. ಈ ಸಿನಿಮಾದಲ್ಲಿ ಶಾರುಖ್​ ಖಾನ್​ ಅವರಿಗೆ ಜೋಡಿಯಾಗಿ ತಾಪ್ಸಿ ಪನ್ನು ನಟಿಸಿದ್ದಾರೆ. ಮತ್ತೊಂದು ಪ್ರಮುಖ ಪಾತ್ರದಲ್ಲಿ ವಿಕ್ಕಿ ಕೌಶಲ್​ ಅಭಿನಯಿಸಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಹಾಡುಗಳು ಗಮನ ಸೆಳೆದಿವೆ. ಪ್ರಚಾರಕ್ಕೆ ಚಿತ್ರತಂಡ ಇನ್ನೂ ಹೆಚ್ಚಿನ ಮಹತ್ವ ನೀಡುವ ಅನಿವಾರ್ಯತೆ ಇದೆ ಎಂಬ ಅಭಿಪ್ರಾಯ ಸೋಶಿಯಲ್​ ಮೀಡಿಯಾದಲ್ಲಿ ಕೇಳಿಬರುತ್ತಿದೆ.

ಬಾಲಿವುಡ್​ನಲ್ಲಿ ನಿರ್ದೇಶಕ ರಾಜ್​ಕುಮಾರ್​ ಹಿರಾನಿ ಅವರು ಸೋಲಿಲ್ಲದ ಸರದಾರನಂತೆ ಆಗಿದ್ದಾರೆ. ‘ಮುನ್ನಾಭಾಯ್​ ಎಂಬಿಬಿಎಸ್​’, ‘3 ಈಡಿಯಟ್ಸ್​’, ‘ಪಿಕೆ’, ‘ಸಂಜು’ ಸಿನಿಮಾಗಳಿಂದ ಅವರು ಸ್ಟಾರ್​ ನಿರ್ದೇಶಕ ಎನಿಸಿಕೊಂಡಿದ್ದಾರೆ. ಅವರ ಸಿನಿಮಾಗಳಲ್ಲಿ ಏನಾದರೂ ಒಂದು ವಿಶೇಷತೆ ಇದ್ದೇ ಇರುತ್ತದೆ ಎಂಬ ನಂಬಿಕೆ ಪ್ರೇಕ್ಷಕರಿಗೆ ಇದೆ. ಆ ಕಾರಣದಿಂದಲೇ ‘ಡಂಕಿ’ ಸಿನಿಮಾದ ಮೇಲೆ ಸಖತ್​ ಭರವಸೆ ಮೂಡಿದೆ. ಈ ಸಿನಿಮಾಗೆ ರಾಜ್​ಕುಮಾರ್​ ಹಿರಾನಿ ಮತ್ತು ಗೌರಿ ಖಾನ್​ ಅವರು ಬಂಡವಾಳ ಹೂಡಿದ್ದಾರೆ.

ಇದನ್ನೂ ಓದಿ: ‘ಡಂಕಿ’ ಕ್ರೇಜ್: ಶಾರುಖ್ ಖಾನ್ ಸಿನಿಮಾ ನೋಡಲು ವಿದೇಶದಿಂದ ಬರುತ್ತಿದ್ದಾರೆ ಅಭಿಮಾನಿಗಳು

‘ಜೀರೋ’ ಸಿನಿಮಾ ಸೋತ ಬಳಿಕ ಶಾರುಖ್​ ಖಾನ್​ ಅವರು ಸೈಲೆಂಟ್​ ಆಗಿದ್ದರು. ಆ ನಂತರ ಅವರು ದೀರ್ಘ ಬ್ರೇಕ್​ ತೆಗೆದುಕೊಂಡರು. ಸ್ಕ್ರಿಪ್ಟ್​ ಆಯ್ಕೆಯಲ್ಲಿ ಭಾರಿ ಜಾಗರೂಕತೆ ತೋರಿಸಿದರು. ಅದರ ಪರಿಣಾಮವಾಗಿ ‘ಜವಾನ್​’, ‘ಪಠಾಣ್​’ ಸಿನಿಮಾಗಳು ಬ್ಲಾಕ್​ ಬಸ್ಟರ್​ ಹಿಟ್​ ಆದವು. ಈಗ ‘ಡಂಕಿ’ ಕೂಡ ಯಶಸ್ಸು ಕಂಡರೆ ಶಾರುಖ್​ ಖಾನ್​ ಅವರಿಗೆ 2023ರಲ್ಲಿ ಹ್ಯಾಟ್ರಿಕ್​ ಗೆಲುವು ಸಿಕ್ಕಂತೆ ಆಗಲಿದೆ. ಇದು ಕ್ಲಾಸ್​ ಸಿನಿಮಾ ಆದ್ದರಿಂದ ನಿಧಾನವಾಗಿ ಕಲೆಕ್ಷನ್​ ಮಾಡಲಿದೆ ಎಂಬ ಅಭಿಪ್ರಾಯ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us