
ನಟ ಶಾರುಖ್ ಖಾನ್ (Shah Rukh Khan) ಅವರ ಪಾಲಿಗೆ 2023ರ ವರ್ಷ ಸಖತ್ ಆಶಾದಾಯಕವಾಗಿದೆ. ಈ ವರ್ಷದ ಆರಂಭದಲ್ಲೇ ಅವರು ‘ಪಠಾಣ್’ ಸಿನಿಮಾ (Pathaan Movie) ಮೂಲಕ ದೊಡ್ಡ ಗೆಲುವು ಕಂಡಿದ್ದಾರೆ. ಜನವರಿ 25ರಂದು ಈ ಚಿತ್ರ ಅದ್ದೂರಿಯಾಗಿ ತೆರೆ ಕಂಡಿತು. ಮೊದಲ ದಿನವೇ ಭರ್ಜರಿ ಕಲೆಕ್ಷನ್ ಮಾಡುವ ಮೂಲಕ ಎಲ್ಲರ ಗಮನ ಸೆಳೆಯಿತು. ಈಗ ‘ಪಠಾಣ್’ ಚಿತ್ರ 50 ದಿನಗಳನ್ನು ಪೂರೈಸಿದೆ. ಈ ಖುಷಿಯನ್ನು ಶಾರುಖ್ ಖಾನ್ ಅಭಿಮಾನಿಗಳು (Shah Rukh Khan Fans) ಸಂಭ್ರಮಿಸುತ್ತಿದ್ದಾರೆ. ವಿಶೇಷ ಏನೆಂದರೆ 50 ದಿನ ಕಳೆದಿದ್ದರೂ ಕೂಡ 20 ದೇಶಗಳಲ್ಲಿ ಇಂದಿಗೂ ಈ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಬೇರೆ ಸ್ಟಾರ್ ನಟರ ಹೊಸ ಸಿನಿಮಾಗಳು ಬಂದು ಪೈಪೋಟಿ ನೀಡಿದರೂ ಕೂಡ ಶಾರುಖ್ ಖಾನ್ ಚಿತ್ರಕ್ಕೆ ಹಿನ್ನಡೆ ಆಗಿಲ್ಲ.
‘ಪಠಾಣ್’ ಸಿನಿಮಾದಲ್ಲಿ ಶಾರುಖ್ ಖಾನ್, ದೀಪಿಕಾ ಪಡುಕೋಣೆ, ಜಾನ್ ಅಬ್ರಾಹಂ, ಡಿಂಪಲ್ ಕಪಾಡಿಯಾ, ಆಶುತೋಷ್ ರಾಣಾ, ಪ್ರಕಾಶ್ ಬೆಳವಾಡಿ ಮುಂತಾದವರು ನಟಿಸಿದ್ದಾರೆ. ಯಶ್ ರಾಜ್ ಫಿಲ್ಮ್ಸ್ ಈ ಚಿತ್ರಕ್ಕೆ ಬಂಡವಾಳ ಹೂಡಿದೆ. ವಿಶ್ವಾದ್ಯಂತ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿರುವ ಈ ಸಿನಿಮಾದಿಂದ ನಿರ್ಮಾಪಕರಿಗೆ ಭರ್ಜರಿ ಲಾಭ ಆಗಿದೆ.
‘ಪಠಾಣ್’ ಚಿತ್ರದಿಂದ ನಿರ್ಮಾಪಕರಿಗೆ ಆದ ಲಾಭ ಇಷ್ಟೊಂದಾ? ಇಲ್ಲಿದೆ ಲೆಕ್ಕಾಚಾರ
ಆರಂಭದಲ್ಲಿ ‘ಪಠಾಣ್’ ಸಿನಿಮಾದ ಟಿಕೆಟ್ ದರ ದುಬಾರಿ ಆಗಿತ್ತು. ಕೆಲವು ಕಡೆಗಳಲ್ಲಿ ಟಿಕೆಟ್ ಬೆಲೆ 1000 ರೂಪಾಯಿ ದಾಟಿತ್ತು. ಹಾಗಿದ್ದರೂ ಕೂಡ ಅಭಿಮಾನಿಗಳು ಮುಗಿಬಿದ್ದು ಸಿನಿಮಾ ನೋಡಿದರು. ಮೊದಲ ದಿನ ‘ಪಠಾಣ್’ ಮಾಡಿದ ಕಲೆಕ್ಷನ್ 57 ಕೋಟಿ ರೂಪಾಯಿ. ಈಗ 50 ದಿನ ಕಳೆದ ಬಳಿಕವೂ ಅಮೆರಿಕ, ಇಂಗ್ಲೆಂಡ್, ಅರಬ್ ರಾಷ್ಟ್ರಗಳು ಸೇರಿದಂತೆ 20 ದೇಶಗಳಲ್ಲಿ ಈ ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ.
Pathaan: ಬಾಂಗ್ಲಾದೇಶದಲ್ಲಿ ರಿಲೀಸ್ ಆಗಲಿದೆ ‘ಪಠಾಣ್’; 8 ವರ್ಷಗಳ ಬಳಿಕ ಭಾರತದ ಸಿನಿಮಾ ಪ್ರದರ್ಶನಕ್ಕೆ ಅವಕಾಶ
‘ಪಠಾಣ್’ ಚಿತ್ರಕ್ಕೆ ಸಿದ್ದಾರ್ಥ್ ಆನಂದ್ ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಗೆಲುವಿನಿಂದಾಗಿ ಅವರ ಡಿಮ್ಯಾಂಡ್ ಹೆಚ್ಚಾಗಿದೆ. ಬಾಲಿವುಡ್ನಲ್ಲಿ ತಾವು ಭರವಸೆಯ ನಿರ್ದೇಶಕ ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ. ಈ ಹಿಂದೆ ಸಿದ್ದಾರ್ಥ್ ಆನಂದ್ ನಿರ್ದೇಶಿಸಿದ್ದ ‘ವಾರ್’ ಸಿನಿಮಾ ಕೂಡ ಸೂಪರ್ ಹಿಟ್ ಆಗಿತ್ತು.
ಶಾರುಖ್ ಖಾನ್ ಅವರಿಗೆ ‘ಪಠಾಣ್’ ಸಿನಿಮಾದಿಂದ ನಿರೀಕ್ಷೆಗೂ ಮೀರಿದ ಗೆಲುವು ಸಿಕ್ಕಿದೆ. ನಾಲ್ಕು ವರ್ಷದ ಬಳಿಕ ಕಮ್ಬ್ಯಾಕ್ ಮಾಡಿದ ಅವರನ್ನು ಜನರು ಒಪ್ಪಿಕೊಂಡಿದ್ದಾರೆ. ಇದರಿಂದ ಶಾರುಖ್ ವೃತ್ತಿಜೀವನಕ್ಕೆ ಮತ್ತೆ ಕಳೆ ಬಂದಿದೆ. ಅವರ ಮುಂಬರುವ ಸಿನಿಮಾಗಳಿಗಾಗಿ ಪ್ರೇಕ್ಷಕರು ಕಾತರದಿಂದ ಕಾಯುವಂತಾಗಿದೆ. ‘ಡಂಕಿ’, ‘ಜವಾನ್’ ಸಿನಿಮಾದ ಕೆಲಸಗಳಲ್ಲಿ ಶಾರುಖ್ ಖಾನ್ ಬ್ಯುಸಿ ಆಗಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:20 pm, Wed, 15 March 23