
ಶಾರುಖ್ ಖಾನ್ ಅವರ ‘ಪಠಾಣ್’ ಸಿನಿಮಾ (Pathaan Movie) ಜಯಭೇರಿ ಬಾರಿಸಿದೆ. ವಿರೋಧಿಸುವವರು ಎಷ್ಟೇ ಅಪಪ್ರಚಾರ ಮಾಡಿದರೂ ಈ ಸಿನಿಮಾದ ಕಲೆಕ್ಷನ್ಗೆ ಧಕ್ಕೆ ಆಗಿಲ್ಲ. ಸಿನಿಪ್ರಿಯರು ‘ಪಠಾಣ್’ ಸಿನಿಮಾವನ್ನು ಮುಗಿಬಿದ್ದು ನೋಡಿದ್ದಾರೆ. ಅದರ ಪರಿಣಾಮವಾಗಿ ವಿಶ್ವಾದ್ಯಂತ ಈ ಚಿತ್ರಕ್ಕೆ 988 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಇದರಿಂದಾಗಿ ಶಾರುಖ್ ಖಾನ್ (Shah Rukh Khan) ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಖುಷಿ ಆಗಿದೆ. ಸಾವಿರ ಕೋಟಿ ರೂಪಾಯಿ ಕ್ಲಬ್ ಸೇರಲು ಇನ್ನು 12 ಕೋಟಿ ರೂಪಾಯಿ ಮಾತ್ರ ಬಾಕಿ ಇದೆ. ಈ ಸಂದರ್ಭದಲ್ಲಿ ಪ್ರೇಕ್ಷಕರನ್ನು ಸೆಳೆಯಲು ಹೊಸ ಪ್ಲ್ಯಾನ್ ಮಾಡಲಾಗಿದೆ. ‘ಪಠಾಣ್’ ಚಿತ್ರದ ಟಿಕೆಟ್ ಬೆಲೆಯನ್ನು (Pathaan Movie Ticket Price) ಕೇವಲ 110 ರೂಪಾಯಿಗೆ ಇಳಿಸಲಾಗಿದೆ.
ಜನವರಿ 25ರಂದು ‘ಪಠಾಣ್’ ಚಿತ್ರ ತೆರೆಕಂಡಾಗ ಟಿಕೆಟ್ ಬೆಲೆ ದುಬಾರಿ ಆಗಿತ್ತು. ಆದರೂ ಜನರು ಮುಗಿಬಿದ್ದು ಈ ಸಿನಿಮಾ ನೋಡಿದರು. ಪರಿಣಾಮವಾಗಿ ಚಿತ್ರಕ್ಕೆ ಉತ್ತಮ ಓಪನಿಂಗ್ ಸಿಕ್ಕಿತು. ಇನ್ನು ಕೆಲವೇ ದಿನಗಳ ಕಾಲ ಚಿತ್ರಮಂದಿರದಲ್ಲಿ ‘ಪಠಾಣ್’ ಪ್ರದರ್ಶನ ಕಾಣಲಿದೆ. ಅದಕ್ಕಾಗಿ ಟಿಕೆಟ್ ಬೆಲೆ ತಗ್ಗಿಸಲಾಗಿದೆ. ಸೋಮವಾರದಿಂದ (ಫೆ.20) ಶುಕ್ರವಾರದವರೆಗೆ (ಫೆ.24) ಬಹುತೇಕ ಮಲ್ಟಿಪ್ಲೆಕ್ಸ್ಗಳಲ್ಲಿ ಕೇವಲ 110 ರೂಪಾಯಿಗೆ ಈ ಚಿತ್ರದ ಟಿಕೆಟ್ ಮಾರಾಟ ಮಾಡಲು ನಿರ್ಧರಿಸಲಾಗಿದೆ.
ಇದನ್ನೂ ಓದಿ: Pathaan Review: ದೇಶಭಕ್ತಿಯಲ್ಲಿ ಮಿಂದೆದ್ದ ‘ಪಠಾಣ್’; ಶಾರುಖ್ ಫ್ಯಾನ್ಸ್ಗೆ ಹಬ್ಬ, ಆ್ಯಕ್ಷನ್ ಪ್ರಿಯರಿಗೆ ಮಸ್ತ್ ಮನರಂಜನೆ
ಹಿಂದಿ, ತೆಲುಗು, ತಮಿಳು ವರ್ಷನ್ ಸೇರಿ ಭಾರತದಲ್ಲಿ ‘ಪಠಾಣ್’ ಸಿನಿಮಾ 25 ದಿನಕ್ಕೆ 511 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಅಲ್ಲೊಂದು ಇಲ್ಲೊಂದು ಚಿತ್ರಮಂದಿರಗಳಲ್ಲಿ ಈಗಲೂ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಸಂದರ್ಭದಲ್ಲಿ ಟಿಕೆಟ್ ಬೆಲೆ ತಗ್ಗಿಸಿದರೆ ಖಂಡಿತವಾಗಿಯೂ ಇನ್ನೂ ಒಂದಷ್ಟು ದಿನಗಳ ಕಾಲ ‘ಪಠಾಣ್’ ಆಟ ಯಶಸ್ವಿಯಾಗಿ ಮುಂದುವರಿಯಲಿದೆ ಎಂಬುದು ನಿರ್ಮಾಪಕರ ಆಲೋಚನೆ. ಅದಕ್ಕಾಗಿ ವಾರದ ದಿನಗಳಲ್ಲಿ ಟಿಕೆಟ್ ಬೆಲೆಯನ್ನು 110 ರೂಪಾಯಿಗೆ ಇಳಿಸಲಾಗಿದೆ.
ಇದನ್ನೂ ಓದಿ: Pathaan Movie: ‘ಶ್ರೀನಗರದಲ್ಲಿ ದಶಕಗಳ ಬಳಿಕ ಹೌಸ್ಫುಲ್ ಆಗಿದೆ’: ‘ಪಠಾಣ್’ ಗೆಲುವಿನ ಬಳಿಕ ಸಂಸತ್ತಿನಲ್ಲಿ ಮೋದಿ ಭಾಷಣ
‘ಪಠಾಣ್’ ಚಿತ್ರಕ್ಕೆ ಸಿದ್ದಾರ್ಥ್ ಆನಂದ್ ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಗೆಲುವಿನಿಂದಾಗಿ ಅವರ ಡಿಮ್ಯಾಂಡ್ ಹೆಚ್ಚಾಗಿದೆ. ಬಾಲಿವುಡ್ನಲ್ಲಿ ತಾವು ಭರವಸೆಯ ನಿರ್ದೇಶಕ ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ. ಈ ಹಿಂದೆ ಸಿದ್ದಾರ್ಥ್ ಆನಂದ್ ನಿರ್ದೇಶಿಸಿದ್ದ ‘ವಾರ್’ ಸಿನಿಮಾ ಕೂಡ ಸೂಪರ್ ಹಿಟ್ ಆಗಿತ್ತು.
ಶಾರುಖ್ ಖಾನ್ ಅವರಿಗೆ ನಿರೀಕ್ಷೆಗೂ ಮೀರಿದ ಗೆಲುವು ಸಿಕ್ಕಿದೆ. ನಾಲ್ಕು ವರ್ಷದ ಬಳಿಕ ಕಮ್ಬ್ಯಾಕ್ ಮಾಡಿದ ಅವರನ್ನು ಜನರು ಒಪ್ಪಿಕೊಂಡಿದ್ದಾರೆ. ಇದರಿಂದ ಶಾರುಖ್ ವೃತ್ತಿಜೀವನಕ್ಕೆ ಮತ್ತೆ ಕಳೆ ಬಂದಿದೆ. ಅವರ ಮುಂಬರುವ ಸಿನಿಮಾಗಳಿಗಾಗಿ ಪ್ರೇಕ್ಷಕರು ಕಾತರದಿಂದ ಕಾಯುವಂತಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:00 am, Mon, 20 February 23