ಸಿನಿಮಾ ನಟರು, ಅದರಲ್ಲೂ ಜನಪ್ರಿಯ ನಟರು ಭಾರಿ ದೊಡ್ಡ ಮೊತ್ತದ ಸಂಭಾವನೆಯನ್ನು (Remuneration) ಸಿನಿಮಾಗಳಿಗಾಗಿ ಪಡೆಯುತ್ತಿದ್ದಾರೆ. ಸ್ಟಾರ್ ನಟರ ಸಂಭಾವನೆಯಂತೂ ನೂರಾರು ಕೋಟಿಗಳನ್ನು ದಾಟಿಬಿಟ್ಟಿದೆ. ಸ್ಟಾರ್ಗಳಲ್ಲದ ಆದರೆ ಜನಪ್ರಿಯವಾಗಿರುವ ನಟರು ಸುಮಾರು 10-20 ಕೋಟಿ ಸಂಭಾವನೆಗಳನ್ನು ಪಡೆಯುತ್ತಿದ್ದಾರೆ. ಅಂಥಹಾ ನಟರಲ್ಲಿ ಶರತ್ ಕೇಲ್ಕರ್ ಸಹ ಒಬ್ಬರು. ಹಿಂದಿ, ಮರಾಠಿ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರು ಶರತ್ ಕೇಲ್ಕರ್ ಬೇಡಿಕೆ ಇರುವ ನಟ. ಆದರೆ ಇತ್ತೀಚೆಗೆ ಬಿಡುಗಡೆ ಆದ ಸಿನಿಮಾ ಒಂದರಲ್ಲಿ ನಟಿಸಲು ಶರತ್ ಪಡೆದಿರುವುದು ಕೇವಲ ನೂರಾ ಒಂದು ರೂಪಾಯಿಗಳನ್ನು ಮಾತ್ರ.
ಶರತ್ ಕೇಲ್ಕರ್, ಹಿಂದಿ, ಮರಾಠಿ ಹಾಗೂ ದಕ್ಷಿಣ ಭಾರತದ ಚಿತ್ರರಂಗದಲ್ಲಿಯೂ ಬೇಡಿಕೆ ಇರುವ ನಟ. 2004 ರಲ್ಲಿ ‘ಹಲ್ ಚಲ್’ ಸಿನಿಮಾ ಮೂಲಕ ನಟನೆಗೆ ಎಂಟ್ರಿ ಕೊಟ್ಟ ಶರತ್ ಕೇಲ್ಕರ್ ಈ ವರೆಗೆ ಹೃತಿಕ್ ರೋಷನ್, ರಣ್ವೀರ್ ಸಿಂಗ್, ಪವನ್ ಕಲ್ಯಾಣ್ ಇನ್ನೂ ಹಲವು ಸ್ಟಾರ್ ನಟರೊಟ್ಟಿಗೆ ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ಪ್ರಧಾನ ಪೋಷಕ ಪಾತ್ರದಲ್ಲಿ, ವಿಲನ್ ಪಾತ್ರಗಳಲ್ಲಿ ನಟಿಸಿದ್ದಾರೆ. ತಾನಾಜಿ, ಎಲ್ಎ ಕಾನ್ಫಿಡೆನ್ಷಿಯಲ್, ರಾಮ್ ಲೀಲಾ, ಲಕ್ಷ್ಮಿ, ಅಲಾಯನ್ ಇನ್ನೂ ಹಲವು ಸಿನಿಮಾಗಳಲ್ಲಿ ಶರತ್ ನಟಿಸಿದ್ದಾರೆ. ಇತ್ತೀಚೆಗೆ ಬಿಡುಗಡೆ ಆದ ಶ್ರೀಕಾಂತ್ ಬೊಲ್ಲ ಅವರ ಆತ್ಮಕತೆ ಆಧರಿಸಿದ ‘ಶ್ರೀಕಾಂತ್’ ಸಿನಿಮಾನಲ್ಲಿಯೂ ಸಹ ಶರತ್ ಕೇಲ್ಕರ್ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಆದರೆ ಈ ಸಿನಿಮಾದಲ್ಲಿ ನಟಿಸಲು ಅವರು ಪಡೆದಿರುವುದು ಕೇವಲ 101 ರೂಪಾಯಿಗಳು ಮಾತ್ರ.
ಇದನ್ನೂ ಓದಿ:Madhuri Dixit: ಸಲ್ಮಾನ್ ಖಾನ್ಗಿಂತ ಹೆಚ್ಚಿನ ಸಂಭಾವನೆ ಪಡೆಯುತ್ತಿದ್ದ ಮಾಧುರಿ ದೀಕ್ಷಿತ್
‘ಶ್ರೀಕಾಂತ್’ ಸಿನಿಮಾವನ್ನು ತುಷಾರ್ ಹೀರಾನಂದಾನಿ ಅವರು ನಿರ್ದೇಶನ ಮಾಡಿದ್ದು, ಸಿನಿಮಾದ ಪ್ರಚಾರ ಕುರಿತು ಆಯೋಜನೆ ಮಾಡಲಾಗಿದ್ದ ಸಂದರ್ಶನವೊಂದರಲ್ಲಿ ತುಷಾರ್, ಶರತ್ ಕೇಲ್ಕರ್ ಕೇವಲ 101 ರೂಪಾಯಿ ಸಂಭಾವನೆ ಪಡೆದು ಸಿನಿಮಾದಲ್ಲಿ ನಟಿಸಿರುವ ವಿಷಯ ಹೇಳಿಕೊಂಡಿದ್ದಾರೆ. ‘ಶ್ರೀಕಾಂತ್’ ಸಿನಿಮಾನಲ್ಲಿ ಶರತ್ ಕೇಲ್ಕರ್, ಹೂಡಿಕೆದಾರ ರವಿ ಮಂತಾನ ಪಾತ್ರದಲ್ಲಿ ನಟಿಸಿದ್ದಾರೆ. ಹೈದರಾಬಾದ್ನವರಾದ ರವಿ ಮಂತಾನ, ಅಂಧ ಸಾಧಕ ಶ್ರೀಕಾಂತ್ ಬೊಲ್ಲ ಅವರ ಸಂಸ್ಥೆಗೆ ಹೂಡಿಕೆ ಮಾಡಿ ಸಹಾಯ ಮಾಡಿದ್ದರು. ಆ ಪಾತ್ರದಲ್ಲಿ ಶರತ್ ಕೇಲ್ಕರ್ ನಟಿಸಿದ್ದಾರೆ.
‘ಶ್ರೀಕಾಂತ್’ ಸಿನಿಮಾ ಶ್ರೀಕಾಂತ್ ಬೊಲ್ಲ ಅವರ ಜೀವನ ಕತೆ ಆಧರಿಸಿದ್ದಾಗಿದೆ. ಆಂಧ್ರದಲ್ಲಿ ಜನಿಸಿದ್ದ ಶ್ರೀಕಾಂತ್ ಅಂಧರಾಗಿದ್ದರು. ಆದರೆ ಹಲವು ಸವಾಲುಗಳನ್ನು ಎದುರಿಸಿ ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆದ ಶ್ರೀಕಾಂತ್, ಯಶಸ್ವಿ ಉದ್ಯಮಿಯಾದರು. ಬೋಲ್ಲಂತ್ ಇಂಡಸ್ಟ್ರೀಸ್ನ ಸಂಸ್ಥಾಪಕ ಶ್ರೀಕಾಂತ್ ಬೊಲ್ಲ. ಇವರ ಕತೆಯನ್ನು ತುಷಾರ್ ಹೀರಾನಂದಾನಿ ತೆರೆಗೆ ತಂದಿದ್ದಾರೆ. ಶ್ರೀಕಾಂತ್ ಎದುರು ನಾಯಕಿಯಾಗಿ ಆಲಿಯಾ ಎಫ್ ನಟಿಸಿದ್ದಾರೆ. ಶ್ರೀಕಾಂತ್ಗೆ ಬೆಂಬಲವಾಗಿ ನಿಲ್ಲುವ ಶಿಕ್ಷಕಿಯಾಗಿ ಜ್ಯೋತಿಕಾ ನಟಿಸಿದ್ದಾರೆ. ಸಿನಿಮಾವನ್ನು ಭೂಷಣ್ ಕುಮಾರ್ ಹಾಗೂ ಇನ್ನಿಬ್ಬರು ಸೇರಿ ನಿರ್ಮಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ