ಶಾರುಖ್ ಮನೆ ಮುಂದೆ ಗಂಟೆಗಟ್ಟಲೆ ಕಾಯುತ್ತಿದ್ದ ಯುವಕ ಈಗ ಬಾಲಿವುಡ್ನ ಟಾಪ್ ನಟ
ಬಾಲಿವುಡ್ನ ಯುವ ಸ್ಟಾರ್ ನಟ ಹಿಂದೊಮ್ಮೆ ಶಾರುಖ್ ಖಾನ್ ಮನೆ ಮನ್ನತ್ ಮುಂದೆ ಗಂಟೆ ಗಟ್ಟಲೆ ಕಾಯುತ್ತಿದ್ದರಂತೆ. ಆ ದಿನಗಳನ್ನು ಇದೀಗ ನೆನಪಿಸಿಕೊಂಡಿದ್ದಾರೆ ನಟ.
ಹಿಂದಿ ಚಿತ್ರರಂಗ ಪ್ರವೇಶಿಸುವ ಕಾಣುವ ಕೋಟ್ಯಂತರ ಮಂದಿ ಯುವಕರಿಗೆ ಬಾಲಿವುಡ್ನ (Bollywood) ಅಗ್ರಗಣ್ಯ ನಟರಲ್ಲಿ ಒಬ್ಬರಾದ ಶಾರುಖ್ ಖಾನ್ ಅವರೇ ಪ್ರೇರಣೆ. ಚಿತ್ರರಂಗದ ಹಿನ್ನೆಲೆಯೇ ಇಲ್ಲದೆ ನಟನಾಗುವ ಆಸೆ ಹೊತ್ತು ಬಂದವನಿಗಂತೂ ಶಾರುಖ್ ಖಾನ್ ಆದರ್ಶ. ಈಗ ಚಾಲ್ತಿಯಲ್ಲಿರುವ ಹಲವು ಬಾಲಿವುಡ್ ನಟರುಗಳು ಸಹ ಹಿಂದೊಮ್ಮೆ ಶಾರುಖ್ ಖಾನ್ (Shah Rukh Khan) ಅವರನ್ನು ಆದರ್ಶವಾಗಿಟ್ಟುಕೊಂಡು ಅವರಂತೆ ಆಗಬೇಕೆಂಬ ಕನಸು ಕಂಡವರೇ ಆಗಿರುತ್ತಾರೆ. ಅವರಲ್ಲಿ ಬಾಲಿವುಡ್ನ ಪ್ರತಿಭಾವಂತ ನಟ ರಾಜ್ಕುಮಾರ್ ರಾವ್ ಸಹ ಒಬ್ಬರು.
ಶ್ರೀಕಾಂತ್ ಹೆಸರಿನ ಭಿನ್ನವಾದ ಸಿನಿಮಾದಲ್ಲಿ ಅಂಧ ವ್ಯಕ್ತಿಯ ಸವಾಲಿನ ಪಾತ್ರದಲ್ಲಿ ನಟಿಸಿ ಗೆದ್ದಿರುವ ರಾಜ್ಕುಮಾರ್ ರಾವ್, ತಾವು ಶಾರುಖ್ ಖಾನ್ ಮನೆಯ ಮುಂದೆ ಗಂಟೆಗಟ್ಟಲೆ ನಿಂತು ಶಾರುಖ್ ಖಾನ್ಗಾಗಿ ಕಾಯುತ್ತಿದ್ದ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ. ಶಾರುಖ್ ಖಾನ್ ರೀತಿಯಲ್ಲಿಯೇ ರಾಜ್ಕುಮಾರ್ ರಾವ್ ಸಹ ಚಿತ್ರರಂಗಕ್ಕೆ ಹೊರಗಿನವರು. ಯಾವುದೇ ಗಾಡ್ಫಾದರ್ಗಳಿಲ್ಲದೆ ಕೇವಲ ಪ್ರತಿಭೆಯ ಬಲದ ಮೇಲೆ ಚಿತ್ರರಂಗಕ್ಕೆ ಎಂಟ್ರಿ ನೀಡಿ ಗೆದ್ದು ನಟರಾದವರು.
ಗುರುಗ್ರಾಮ (ಗುಡ್ಗಾಂವ್) ದವರಾದ ರಾಜ್ಕುಮಾರ್ ರಾವ್, ‘ಬೂಗಿ ವೂಗಿ’ ಡ್ಯಾನ್ಸ್ ಶೋಗಾಗಿ ಮುಂಬೈಗೆ ಬಂದಿದ್ದರಂತೆ. ಆಗಿನ್ನೂ ಅವರಿಗೆ 16 ವರ್ಷ ವಯಸ್ಸು, ತಮ್ಮ 12 ವರ್ಷದ ಸಹೋದರನ ಜೊತೆಗೆ ಮುಂಬೈಗೆ ಬಂದಿದ್ದರಂತೆ ರಾಜ್ಕುಮಾರ್ ರಾವ್. ಆಗ ಶಾರುಖ್ ಖಾನ್ ಅವರನ್ನು ನೋಡುವ ಉದ್ದೇಶದಿಂದ ಇಡೀ ದಿನ ಅವರ ಮನೆಯ ಎದುರಿಗೆ ನಿಂತಿದ್ದರಂತೆ. ಆದರೆ ಶಾರುಖ್ ಖಾನ್ ಅಂದು ಸಿಗಲಿಲ್ಲವೆಂದು ನೆನಪು ಮಾಡಿಕೊಂಡಿದ್ದಾರೆ ರಾಜ್ಕುಮಾರ್.
‘ಮೊದಲ ಬಾರಿಗೆ ಮುಂಬೈಗೆ ಬಂದಾಗ ಈ ನಗರ ಕಂಡು ನಾನು ಮಾರುಹೋಗಿದ್ದೆ. ಇದೊಂದು ಸ್ವರ್ಗದಂತೆ ಅನಿಸಿತ್ತು. ಸಾಕಷ್ಟು ಜಾಗಗಳಲ್ಲಿ ನಾನು ಹಾಗೂ ನನ್ನ ಸಹೋದರ ಓಡಾಡಿದೆವು. ಆದರೆ ನಾವು ಇಲ್ಲಿಂದ ಹೊರಡುವ ಮುನ್ನವೇ ನಮ್ಮಲ್ಲಿದ್ದ ಹಣವನ್ನು ಖರ್ಚು ಮಾಡಿಬಿಟ್ಟೆವು. ಕೊನೆಯ ದಿನ ನಾವು ರೈಲ್ವೆ ನಿಲ್ದಾಣದಲ್ಲಿ ನಿದ್ದೆ ಮಾಡಿದೆವು. ಅಂದು ನಮ್ಮಲ್ಲಿ ಇದ್ದಿದ್ದು ಕೇವಲ ಎರಡು ವಡಾಪಾವ್ ಖರೀದಿ ಮಾಡುವಷ್ಟು ಮಾತ್ರವೇ ಹಣ’ ಎಂದು ರಾಜ್ಕುಮಾರ್ ನೆನಪು ಮಾಡಿಕೊಂಡಿದ್ದಾರೆ.
ರಾಜ್ಕುಮಾರ್ ರಾವ್ ಬಾಲಿವುಡ್ನ ವರ್ಸಟೈಲ್ ನಟ. ಎಲ್ಲ ವಿಧದ ಪಾತ್ರಗಳಿಗೂ ಅವರು ಸರಿಹೊಂದುತ್ತಾರೆ. ಅದೇ ಕಾರಣಕ್ಕೆ ಭಿನ್ನ-ಭಿನ್ನ ಪಾತ್ರಗಳಲ್ಲಿ ರಾಜ್ಕುಮಾರ್ ರಾವ್ ನಟಿಸಿದ್ದಾರೆ. ಅಂಧ ಸಾಧಕ ಶ್ರೀಕಾಂತ್ ಪಾತ್ರದಲ್ಲಿ ರಾಜ್ಕುಮಾರ್ ಅದ್ಭುತವಾಗಿ ನಟಿಸಿದ್ದರು. ಆ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಗಳಿಕೆ ಮಾಡುತ್ತಿದೆ. ವಿಮರ್ಶಕರಿಂದಲೂ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಇದೀಗ ಜಾನ್ಹವಿ ಕಪೂರ್ ಜೊತೆಗೆ ‘ಮಿಸ್ಟರ್ ಆಂಡ್ ಮಿಸಸ್ ಮಹಿ’ ಸಿನಿಮಾದಲ್ಲಿ ನಟಿಸಿದ್ದು ಆ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:28 am, Thu, 16 May 24