
ಮಂಗಳೂರು ಮೂಲದ ಶಿಲ್ಪಾ ಶೆಟ್ಟಿ (Shilpa Shetty) ದಶಕಗಳಿಂದಲೂ ಬಾಲಿವುಡ್ನಲ್ಲಿ ಬೇಡಿಕೆಯಲ್ಲಿರುವ ನಟಿ. ಬಾಲಿವುಡ್ ಮಾತ್ರವೇ ಅಲ್ಲದೆ, ಕನ್ನಡ, ತೆಲುಗು, ತಮಿಳು ಭಾಷೆಗಳ ಸಿನಿಮಾಗಳಲ್ಲಿಯೂ ಶಿಲ್ಪಾ ಶೆಟ್ಟಿ ನಟಿಸಿದ್ದಾರೆ. ಅಂದಹಾಗೆ ಶಿಲ್ಪಾ ಶೆಟ್ಟಿ ಕೇವಲ ನಟಿ ಮಾತ್ರವೇ ಅಲ್ಲ, ಶಿಲ್ಪಾ ಶೆಟ್ಟಿ ಉದ್ಯಮಿಯೂ ಹೌದು. ಉದ್ಯಮದ ಕಾರಣಕ್ಕೆ ಈ ಹಿಂದೆ ಕೆಲ ಬಾರಿ ಸುದ್ದಿಯಲ್ಲೂ ಇದ್ದರು ನಟಿ. ಇತ್ತೀಚೆಗೆ ಸಹ ಶಿಲ್ಪಾ ಮೇಲೆ 60 ಕೋಟಿ ವಂಚನೆ ಆರೋಪ ಕೇಳಿ ಬಂದಿತ್ತು. ಆದರೆ ಇದೀಗ ಶಿಲ್ಪಾ ಶೆಟ್ಟಿ ತಮ್ಮ ರೆಸ್ಟೊರೆಂಟ್ ಗೆ ಬಾಗಿಲು ಹಾಕಿದ್ದಾರೆ. ಹಾಗೆಂದು ಶಿಲ್ಪಾ, ಹೋಟೆಲ್ ಉದ್ಯಮದಲ್ಲಿ ನಷ್ಟ ಅನುಭವಿಸಿಲ್ಲ. ಬದಲಿಗೆ ಹೆಚ್ಚು ಲಾಭ ಗಳಿಸಿದ್ದಾರೆ.
ಶಿಲ್ಪಾ ಶೆಟ್ಟಿ, ಮುಂಬೈನ ಪ್ರತಿಷ್ಠಿತ ಏರಿಯಾ ಬಾಂಡ್ರಾನಲ್ಲಿ ಬಾಸ್ಟಿಯನ್ ಹೆಸರಿನ ರೆಸ್ಟೊರೆಂಟ್ ತೆರೆದಿದ್ದರು. ಬಾಂಡ್ರಾದ ಜನಪ್ರಿಯ ರೆಸ್ಟೋರೆಂಟ್ಗಳಲ್ಲಿ ಇದು ಸಹ ಒಂದಾಗಿತ್ತು. ಆದರೆ ಇದೀಗ ಹಠಾತ್ತನೆ ರೆಸ್ಟೊರೆಂಟ್ ಅನ್ನು ಬಂದ್ ಮಾಡುತ್ತಿದ್ದಾರೆ ಶಿಲ್ಪಾ ಶೆಟ್ಟಿ. ಗುರುವಾರ ರೆಸ್ಟೊರೆಂಟ್ ಬಂದ್ ಆಗಲಿದ್ದು, ಗುರುವಾರದ ದಿನದಂದು ರೆಸ್ಟೊರೆಂಟ್ನಲ್ಲಿ ಕೊನೆಯ ಆತಿಥ್ಯವನ್ನು ಗ್ರಾಹಕರಿಗೆ ನೀಡಲಾಗುತ್ತಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿರುವ ಶಿಲ್ಪಾ ಶೆಟ್ಟಿ, ‘ಈ ಗುರುವಾರ ಮುಂಬೈನ ಅತ್ಯಂತ ಪ್ರಸಿದ್ಧ ತಾಣಗಳಲ್ಲಿ ಒಂದಾದ ಬ್ಯಾಸ್ಟಿಯನ್ ಬಾಂದ್ರಾಕ್ಕೆ ನಾವು ವಿದಾಯ ಹೇಳುತ್ತಿದ್ದು, ಇದು ಒಂದು ಯುಗದ ಅಂತ್ಯವನ್ನು ಸೂಚಿಸುತ್ತದೆ. ನಮಗೆ ಲೆಕ್ಕವಿಲ್ಲದಷ್ಟು ನೆನಪುಗಳು, ಮರೆಯಲಾಗದ ಸ್ಮರಣೆಗಳನ್ನು ಮತ್ತು ನಗರದ ರಾತ್ರಿಜೀವನವನ್ನು ಭಿನ್ನವಾಗಿ ರೂಪಿಸಿದ ಹೆಮ್ಮೆಯ ಕ್ಷಣಗಳನ್ನು ನೀಡಿದ ಸ್ಥಳವು ಈಗ ತನ್ನ ಅಂತಿಮ ಬಿಲ್ಲನ್ನು ಪಡೆಯುತ್ತಿದೆ’ ಎಂದಿದ್ದಾರೆ.
ಮುಂದುವರೆದು, ‘ಹಲವಾರು ನೆನಪುಗಳನ್ನು ನೀಡಿರುವ ಈ ಸ್ಥಳವನ್ನು ಗೌರವಿಸಲು, ನಾವು ನಮ್ಮ ಹತ್ತಿರದ ಗ್ರಾಹಕರು, ನಮ್ಮ ಏಳ್ಗೆಯಲ್ಲಿ ಸಹಾಯ ಮಾಡಿದ ಪೋಷಕರಿಗಾಗಿ ಒಂದು ವಿಶೇಷ ಪಾರ್ಟಿಯನ್ನು ಆಯೋಜಿಸುತ್ತಿದ್ದೇವೆ. ಹಳೆಯ ನೆನಪುಗಳು ಮತ್ತು ಮಾಂತ್ರಿಕತೆಯಿಂದ ತುಂಬಿರುವ ಪಾರ್ಟಿ ಅದಾಗಲಿದೆ’ ಎಂದಿದ್ದಾರೆ ಶಿಲ್ಪಾ ಶೆಟ್ಟಿ. ಗುರುವಾರ ರಾತ್ರಿ ಈ ವಿಶೇಷ ಪಾರ್ಟಿಯನ್ನು ಬಾಸ್ಟನ್ನಲ್ಲಿ ಆಯೋಜಿಸಲಾಗಿದೆ.
ಇದನ್ನೂ ಓದಿ:ಶಿಲ್ಪಾ ಶೆಟ್ಟಿಗೆ ಗಣೇಶ ಹಬ್ಬ ಎಂದ್ರೆ ಸಖತ್ ಸ್ಪೆಷಲ್
ಬಾಸ್ಟಿಯನ್ ಬಾಂದ್ರಾ ಬಂದ್ ಆಗಿದೆಯಾದರೂ ಬಾಸ್ಟಿಯನ್ ಹೋಟೆಲ್ ಚೈನ್ ಭಾರತದ ಅತಿ ದೊಡ್ಡ ಫೈನ್ ಡೈನ್ ಹೋಟೆಲ್ ಚೈನ್ಗಳಲ್ಲಿ ಒಂದಾಗಿದೆ. ಬೆಂಗಳೂರು, ಪುಣೆ, ಮುಂಬೈ, ಹೊರದೇಶಗಳಲ್ಲಿ ಸಹ ಬಾಸ್ಟಿಯನ್ ಹೋಟೆಲ್ಗಳು ಇವೆ. ಬಾಸ್ಟಿಯನ್ ಬಾಂದ್ರಾ ಬಂದ್ ಆಗಿದ್ದರೂ ಸಹ ಶಿಲ್ಪಾ ಶೆಟ್ಟಿ ಭಾರತದ ಅತಿ ದೊಡ್ಡ ಹೋಟೆಲಿಯರ್ ಎನಿಸಿಕೊಂಡಿದ್ದಾರೆ. 2024ರಲ್ಲಿ ಅವರ ಸಹ ಮಾಲೀಕತ್ವದ ಬಾಸ್ಟಿಯನ್ ಅತಿ ಹೆಚ್ಚು ತೆರಿಗೆ ತುಂಬಿದ ಹೋಟೆಲ್ ಸಂಸ್ಥೆಯಾಗಿದೆ. ಈಗಲೂ ಸಹ ಬಾಸ್ಟಿಯನ್ ಬಾಂದ್ರಾ ಬಂದ್ ಆಗಿದ್ದರೂ ಸಹ ಮುಂಬೈನ ದಾದರ್ ವೆಸ್ಟ್ನಲ್ಲಿ ಬಾಸ್ಟಿಯನ್ ರೂಫ್ ಟಾಪ್ ಕಾರ್ಯ ನಿರ್ವಹಿಸುತ್ತಲೇ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:36 pm, Wed, 3 September 25