ನೀಲಿ ಸಿನಿಮಾಗಳನ್ನು ಮಾಡಿ ಅದನ್ನು ಬೇರೆಬೇರೆ ಆ್ಯಪ್ಗಳಲ್ಲಿ ಅಪ್ಲೋಡ್ ಮಾಡುತ್ತಿದ್ದ ಆರೋಪದ ಮೇಲೆ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ ಅವರನ್ನು ಮುಂಬೈ ಪೊಲೀಸರು ಸೋಮವಾರ (ಜುಲೈ 19) ಬಂಧಿಸಿದ್ದರು. ನಂತರ ಅವರನ್ನು ಜುಲೈ 23 ವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು. ಈಗ ಈ ಅವಧಿಯನ್ನು ನ್ಯಾಯಾಲಯ ಜುಲೈ 27ವರೆಗೆ ವಿಸ್ತರಣೆ ಮಾಡಿದೆ.
ರಾಜ್ ಕುಂದ್ರಾ ಅವರನ್ನು ಹೆಚ್ಚುವರಿಯಾಗಿ 7 ದಿನ ಪೊಲೀಸ್ ಕಸ್ಟಡಿಗೆ ನೀಡುವಂತೆ ಮುಂಬೈ ಪೊಲೀಸರು ಮುಂಬೈನ ಮ್ಯಾಜಿಸ್ಟ್ರೇಟ್ ಕೋರ್ಟ್ ಬಳಿ ಮನವಿ ಮಾಡಿದ್ದರು. ಆದರೆ, ನ್ಯಾಯಾಲಯ ಅವರನ್ನು ನಾಲ್ಕು ದಿನ ಮಾತ್ರ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ. ಇನ್ನು ಕುಂದ್ರಾ ಜಾಮೀನು ಅರ್ಜಿಯನ್ನು ವಿಚಾರಣೆ ಮಾಡಲು ನ್ಯಾಯಾಲಯ ನಿರಾಕರಿಸಿದೆ.
ರಾಜ್ ಕುಂದ್ರಾ ತನಿಖೆಗೆ ಸೂಕ್ತ ಸಹಕಾರ ನೀಡಿಲ್ಲ ಎನ್ನಲಾಗಿದೆ. ಹೀಗಾಗಿ, ಪೊಲೀಸರಿಗೆ ಹೆಚ್ಚಿನ ವಿಚಾರಣೆ ನಡೆಸುವ ಅಗತ್ಯವಿದೆ. ಈ ಕಾರಣಕ್ಕೆ ಹೆಚ್ಚುವರಿಯಾಗಿ 7 ದಿನಗಳ ಕಾಲ ರಾಜ್ ಕುಂದ್ರಾ ವಶಕ್ಕೆ ನೀಡಬೇಕು ಎಂದು ನ್ಯಾಯಾಲಯದಲ್ಲಿ ಪೊಲೀಸರು ಅನುಮತಿ ಕೇಳಿದ್ದರು. ಅಂತಿಮವಾಗಿ ನ್ಯಾಯಾಲಯ ರಾಜ್ ಕುಂದ್ರಾ ಅವರನ್ನು ನಾಲ್ಕು ದಿನ ಮಾತ್ರ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲು ಅನುಮತಿ ನೀಡಿದೆ.
ಪತಿಯ ಬಂಧನದ ಬಳಿಕ ಸಂಪೂರ್ಣ ಮೌನ ವಹಿಸಿದ್ದ ಶಿಲ್ಪಾ ಶೆಟ್ಟಿ ಈ ಬಗ್ಗೆ ಮೌನ ಮುರಿದಿದ್ದರು. ‘ಬದುಕಿರುವುದಕ್ಕಾಗಿ ನಾನು ಅದೃಷ್ಟವಂತೆ ಎಂದು ತಿಳಿದುಕೊಂಡು ದೀರ್ಘ ಉಸಿರು ತೆಗೆದುಕೊಳ್ಳುತ್ತೇನೆ. ಈ ಹಿಂದೆ ಅನೇಕ ಸವಾಲುಗಳನ್ನು ಎದುರಿಸಿದ್ದೇನೆ. ಮುಂದೆಯೂ ಅನೇಕ ಸವಾಲುಗಳನ್ನು ಎದುರಿಸಲಿದ್ದೇನೆ. ಇಂದಿನ ನನ್ನ ಬದುಕನ್ನು ಯಾವುದೂ ಕೂಡ ಕೆಡಿಸಬೇಕಿಲ್ಲ’ ಎಂದು ಶಿಲ್ಪಾ ಶೆಟ್ಟಿ ಮಾರ್ಮಿಕವಾಗಿ ಪೋಸ್ಟ್ ಮಾಡಿದ್ದರು.
‘ಈ ಹಿಂದೆ ನಮ್ಮನ್ನು ನೋಯಿಸಿದವರ ಬಗ್ಗೆ, ಅನುಭವಿಸಿದ ಹತಾಶೆಯ ಬಗ್ಗೆ, ಕೈಕೊಟ್ಟ ಅದೃಷ್ಟದ ಬಗ್ಗೆ ನಾವು ಕೋಪ ಮಾಡಿಕೊಳ್ಳುತ್ತೇವೆ. ಮುಂದೆ ಬರಬಹುದಾದ ಸಾವು-ನೋವು, ಕಷ್ಟ-ನಷ್ಟಗಳ ಬಗ್ಗೆ ಭಯ ಇಟ್ಟುಕೊಳ್ಳುತ್ತೇವೆ. ಹಿಂದೆ ಏನಾಗಿತ್ತು, ಮುಂದೆ ಏನಾಗಬಹುದು ಎಂಬುದರ ಚಿಂತೆ ಬಿಟ್ಟು, ಈ ಕ್ಷಣಕ್ಕಾಗಿ ನಾವು ಬದುಕಬೇಕು’ ಎಂದು ಶಿಲ್ಪಾ ಶೆಟ್ಟಿ ಬರೆದುಕೊಂಡಿದ್ದರು.
ಇದನ್ನೂ ಓದಿ: ‘ಬದುಕಿರುವುದಕ್ಕೆ ನಾನು ಅದೃಷ್ಟವಂತೆ’; ಗಂಡನ ನೀಲಿ ಚಿತ್ರ ಹಗರಣ ಬಯಲಾದ ಬಳಿಕ ಶಿಲ್ಪಾ ಶೆಟ್ಟಿ ಮೊದಲ ಮಾತು
Published On - 2:09 pm, Fri, 23 July 21