ಮಕ್ಕಳು ಮಾಡುವ ತಪ್ಪಿನಿಂದಾಗಿ ಅವರ ತಂದೆ-ತಾಯಿ ಕೂಡ ತಲೆ ತಗ್ಗಿಸಬೇಕಾಗುತ್ತದೆ. ಅಷ್ಟೇ ಅಲ್ಲ, ಇಡೀ ಕುಟುಂಬಕ್ಕೆ ಮುಜುಗರ ಆಗುತ್ತದೆ. ನಟ ಸಿದ್ಧಾಂತ್ ಕಪೂರ್ (Siddhanth Kapoor) ಅವರು ಡ್ರಗ್ಸ್ ಕೇಸ್ನಲ್ಲಿ ಸಿಕ್ಕಿಬಿದ್ದಿರುವುದು ಅವರ ಕುಟುಂಬಕ್ಕೆ ತಲೆ ನೋವಾಗಿದೆ. ಸಿದ್ಧಾಂತ್ ಕಪೂರ್ ಅವರ ತಂದೆ ಶಕ್ತಿ ಕಪೂರ್ ಅವರು ಬಾಲಿವುಡ್ನ ಜನಪ್ರಿಯ ನಟ. ಹಲವಾರು ಸಿನಿಮಾಗಳಲ್ಲಿ ನಟಿಸಿದ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಆದರೆ ಅವರ ಪುತ್ರ ಸಿದ್ಧಾಂತ್ ಕಪೂರ್ ಈಗ ಬೆಂಗಳೂರಿನಲ್ಲಿ ಡ್ರಗ್ಸ್ ಪಾರ್ಟಿ (Bengaluru Drugs Party) ಮಾಡಿ ಹೆಸರು ಕೆಡಿಸಿಕೊಂಡಿದ್ದಾರೆ. ಭಾನುವಾರ (ಜೂನ್ 12) ತಡರಾತ್ರಿ ಈ ಪಾರ್ಟಿ ನಡೆದಿದೆ. ರೇವ್ ಪಾರ್ಟಿಯಲ್ಲಿ ಡ್ರಗ್ಸ್ ಬಳಕೆ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು ಅನೇಕರನ್ನು ಬಂಧಿಸಿದ್ದಾರೆ. ಈ ಘಟನೆ ಕುರಿತಂತೆ ಮಾಧ್ಯಮಗಳಿಗೆ ಶಕ್ತಿ ಕಪೂರ್ (Shakti Kapoor) ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಖಾಸಗಿ ಹೋಟೆಲ್ನಲ್ಲಿ ಪಾರ್ಟಿ ಮಾಡಿದ ಎಲ್ಲರನ್ನೂ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ಈ ವೇಳೆ ಸಿದ್ಧಾಂತ್ ಕಪೂರ್ ಕೂಡ ಮಾದಕ ವಸ್ತು ಸೇವಿಸಿರುವುದು ಖಚಿತವಾಗಿದೆ. ಈ ವಿಚಾರವಾಗಿ ಪ್ರತಿಕ್ರಿಯೆ ಪಡೆಯಲು ಶಕ್ತಿ ಕಪೂರ್ ಅವರನ್ನು ‘ಇಟೈಮ್ಸ್’ ಸಂಪರ್ಕಿಸಿದೆ. ‘ಇದು ಅಸಾಧ್ಯ. ಅಷ್ಟು ಮಾತ್ರ ನಾನು ಹೇಳಬಲ್ಲೆ’ ಎಂದು ಶಕ್ತಿ ಕಪೂರ್ ಹೇಳಿರುವುದಾಗಿ ವರದಿ ಆಗಿದೆ.
ಬೆಂಗಳೂರಿಗೆ ಬಂದು ಪಾರ್ಟಿಯಲ್ಲಿ ಭಾಗವಹಿಸುವ ಬಗ್ಗೆ ಸಿದ್ಧಾಂತ್ ಕಪೂರ್ ಅವರು ತಮ್ಮ ಕುಟುಂಬದವರಿಗೆ ಸರಿಯಾಗಿ ಮಾಹಿತಿ ನೀಡಿರಲಿಲ್ಲ. ಬೆಂಗಳೂರಿನ ಯಾವ ಹೋಟೆಲ್ನಲ್ಲಿ ಸಿದ್ಧಾಂತ್ ಉಳಿದುಕೊಂಡಿದ್ದಾರೆ ಎಂಬುದು ಕೂಡ ಫ್ಯಾಮಿಲಿಯವರಿಗೆ ತಿಳಿದಿರಲಿಲ್ಲ ಎಂದು ವರದಿಯಲ್ಲಿ ವಿವರಿಸಲಾಗಿದೆ. ಒಟ್ಟಿನಲ್ಲಿ ಶಕ್ತಿ ಕಪೂರ್ ಕುಟುಂಬಕ್ಕೆ ಈ ಘಟನೆಯಿಂದ ಮುಜುಗರ ಆದಂತಾಗಿದೆ.
ಸಿದ್ಧಾಂತ್ ಕಪೂರ್ ಅವರ ತಂಗಿ ಶ್ರದ್ಧಾ ಕಪೂರ್ ಅವರು ಬಾಲಿವುಡ್ನಲ್ಲಿ ಸ್ಟಾರ್ ನಟಿಯಾಗಿ ಮಿಂಚುತ್ತಿದ್ದಾರೆ. ಈ ಹಿಂದೆ ಅವರು ಕೂಡ ಎನ್ಸಿಬಿ ಕಚೇರಿಯ ಮೆಟ್ಟಿಲು ಹತ್ತಿದ್ದರು. ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆಯ ವೇಳೆ ಬಾಲಿವುಡ್ ಡ್ರಗ್ಸ್ ಕೇಸ್ ಪುರಾಣ ಬಯಲಾಗಿತ್ತು. ಆ ಸಂಬಂಧ ಶ್ರದ್ಧಾ ಕಪೂರ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ತಮ್ಮ ಮೇಲಿನ ಆರೋಪಗಳೆಲ್ಲವೂ ಸುಳ್ಳು ಎಂದು ಅವರು ಹೇಳಿದ್ದರು. ಈಗ ಅವರ ಸಹೋದರ ಸಿದ್ಧಾಂತ್ ಕಪೂರ್ ಡ್ರಗ್ಸ್ ಪಾರ್ಟಿ ಮಾಡಿ ಪೊಲೀಸರ ಅತಿಥಿ ಆಗಿರುವುದರಿಂದ ಶಕ್ತಿ ಕಪೂರ್ ಕುಟುಂಬಕ್ಕೆ ಸಂಕಷ್ಟ ಶುರುವಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:33 pm, Mon, 13 June 22