ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಅವರನ್ನು ಕಳೆದುಕೊಂಡಿದ್ದು ನೋವಿನ ಸಂಗತಿ. ಅವರು ಇಲ್ಲ ಎಂಬ ನೋವು ಪ್ರತಿದಿನವೂ ಕುಟುಂಬದವರನ್ನು ಮತ್ತು ಆಪ್ತರನ್ನು ಕಾಡುತ್ತಿದೆ. ಅವರ ಸಾವಿಗೆ ನ್ಯಾಯ ಕೊಡಿಸಬೇಕು ಎಂದು ಅಭಿಮಾನಿಗಳಿಗೆ ಇಂದಿಗೂ ಹೋರಾಟ ಮಾಡುತ್ತಲೇ ಇದ್ದಾರೆ. ಸುಶಾಂತ್ ಅವರದ್ದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಬಗ್ಗೆ ಇನ್ನೂ ಅಂತಿಮ ನಿರ್ಧಾರಕ್ಕೆ ಬರಲಾಗಿಲ್ಲ. ಅಂತಿಮವಾಗಿ ಕೋರ್ಟ್ ಯಾವ ತೀರ್ಪು ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ. ಈ ನಡುವೆ ಸುಶಾಂತ್ ಸಿಂಗ್ ರಜಪೂತ್ ಸಹೋದರಿ ಪ್ರಿಯಾಂಕಾ ಸಿಂಗ್ (Priyanka Singh) ಅವರು ಕೆಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ವೃತ್ತಿಯಲ್ಲಿ ಲಾಯರ್ ಆಗಿರುವ ಅವರು ತಮ್ಮ ಸಹೋದರನ ಸಾವಿನ ಬಗ್ಗೆ ಹಲವು ವಿವರಗಳನ್ನು ಹಂಚಿಕೊಂಡಿದ್ದಾರೆ. ರಿಯಾ ಚಕ್ರವರ್ತಿ (Rhea Chakraborty) ಮೇಲೆ ಕೆಲವು ಆರೋಪಗಳನ್ನು ಅವರು ಹೊರಿಸಿದ್ದಾರೆ.
2020ರ ಜೂನ್ 14ರಂದು ಮುಂಬೈನ ಅಪಾರ್ಟ್ಮೆಂಟ್ನಲ್ಲಿ ಸುಶಾಂತ್ ಸಿಂಗ್ ರಜಪೂತ್ ಅವರ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆ ಆಗಿತ್ತು. ಆ ಘಟನೆಯನ್ನು ಪ್ರಿಯಾಂಕಾ ಸಿಂಗ್ ಅವರು ಮತ್ತೆ ಈಗ ನೆನಪು ಮಾಡಿಕೊಂಡಿದ್ದಾರೆ. ‘ಇಂಡಿಯಾ ನ್ಯೂಸ್’ಗೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಚಾರಗಳನ್ನು ತಿಳಿಸಿದ್ದಾರೆ.
‘ನಾನು ಕ್ರಿಮಿನಲ್ ಲಾಯರ್. ವರದಕ್ಷಿಣೆ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡವರ ಅನೇಕ ಕೇಸ್ಗಳನ್ನು ನಾನು ಕಂಡಿದ್ದೇನೆ. ಕಣ್ಣುಗಳು ಹೊರಗೆ ಬಂದಿರುತ್ತವೆ. ನಾಲಿಗೆ ಹೊರಚಾಚಿರುತ್ತದೆ. ನನ್ನ ಸಹೋದರನ ದೇಹದಲ್ಲಿ ಆ ರೀತಿ ಏನೂ ಆಗಿರಲಿಲ್ಲ. ಕೆಲವು ದಿನಗಳ ಬಳಿಕ ನಾನು ಆ ರೂಮ್ಗೆ ಹೋಗಿ ನೋಡಿದೆ. ಬೆಡ್ ಮತ್ತು ಫ್ಯಾನ್ ನಡುವೆ ಸುಶಾಂತ್ನ ಎತ್ತರದಷ್ಟು ಅಂತರ ಕೂಡ ಇರಲಿಲ್ಲಿ’ ಎಂದು ಪ್ರಿಯಾಂಕಾ ಸಿಂಗ್ ಹೇಳಿದ್ದಾರೆ.
‘2019ರಲ್ಲಿ ರಿಯಾ ಚಕ್ರವರ್ತಿ ಬಂದ ಬಳಿಕ ಸುಶಾಂತ್ ಜೀವನ ಹಾಳಾಗಲು ಶುರು ಆಯಿತು. ನನ್ನ ಮತ್ತು ಆತನ ನಡುವೆ ಭಿನ್ನಾಭಿಪ್ರಾಯ ಮೂಡಲು ಶುರುವಾಗಿದ್ದೇ ಆಗ. ನಂತರದ 6 ದಿನಗಳಲ್ಲಿ ಇಷ್ಟೆಲ್ಲ ಆಯಿತು. ಯಾರೋ ಬೇಕಂತಲೇ ಸುಶಾಂತ್ ಬದುಕಿನಲ್ಲಿ ರಿಯಾಳ ಎಂಟ್ರಿ ಆಗುವಂತೆ ಮಾಡಿದ್ದರು’ ಎಂಬುದು ಪ್ರಿಯಾಂಕಾ ಸಿಂಗ್ ಅಭಿಪ್ರಾಯ.
ರಿಯಾ ವಿರುದ್ಧ ಚಾರ್ಜ್ಶೀಟ್:
ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿದ ಡ್ರಗ್ಸ್ ಪ್ರಕರಣದಲ್ಲಿ ಎನ್ಸಿಬಿ ಇತ್ತೀಚೆಗೆ ಚಾರ್ಜ್ಶೀಟ್ ಸಲ್ಲಿಕೆ ಮಾಡಿದೆ. ಅದರ ಅನ್ವಯ, ರಿಯಾ ಚಕ್ರವರ್ತಿ ಅವರ ಮೇಲೆ ಹಲವು ಆರೋಪಗಳನ್ನು ಮಾಡಲಾಗಿದೆ. ಸುಶಾಂತ್ ಸಿಂಗ್ ರಜಪೂತ್ಗೆ ಗಾಂಜಾ ಮುಂತಾದ ಮಾದಕ ವಸ್ತುಗಳನ್ನು ಪೂರೈಸಿದ್ದೇ ರಿಯಾ ಚಕ್ರವರ್ತಿ ಎಂದು ಉಲ್ಲೇಖ ಮಾಡಲಾಗಿದೆ. ಇದರಿಂದ ಅವರಿಗೆ ಸಂಕಷ್ಟ ಎದುರಾಗಿದೆ. ಒಂದು ವೇಳೆ ಆರೋಪ ಸಾಬೀತಾದರೆ ರಿಯಾ ಚಕ್ರವರ್ತಿಗೆ 10 ವರ್ಷ ಜೈಲು ಶಿಕ್ಷೆ ಆಗುವ ಸಾಧ್ಯತೆ ಇದೆ.
Published On - 8:57 am, Fri, 15 July 22