
2020ರ ಜೂನ್ 14ರಂದು ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಅವರನ್ನು ಕಳೆದುಕೊಂಡಿದ್ದು ತೀವ್ರ ನೋವಿನ ಸಂಗತಿ. ಅವರು ಇಲ್ಲದೇ ಬಾಲಿವುಡ್ ಸೊರಗಿದೆ. ಭಿನ್ನ ಸಿನಿಮಾಗಳನ್ನು ಮಾಡುತ್ತಿದ್ದ ಪ್ರತಿಭಾವಂತ ನಟ ಇಂದು ಇಲ್ಲವಲ್ಲ ಎಂದು ಅವರ ಅಭಿಮಾನಿಗಳು ಸಖತ್ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಮುಂಬೈನ ಐಷಾರಾಮಿ ಅಪಾರ್ಟ್ಮೆಂಟ್ನಲ್ಲಿ ಸುಶಾಂತ್ ವಾಸಿಸುತ್ತಿದ್ದರು. ಅವರು ನಿಧನರಾದ ಬಳಿಕ ಆ ಮನೆ (Sushant Singh Rajput Flat) ಖಾಲಿ ಇದೆ. ಹೊಸದಾಗಿ ಯಾರೂ ಕೂಡ ಬಾಡಿಗೆಗೆ ಬರುತ್ತಿಲ್ಲ. ಈ ವಿಚಾರವನ್ನು ರಿಯಲ್ ಎಸ್ಟೇಟ್ ಬ್ರೋಕರ್ ಒಬ್ಬರು ಬಹಿರಂಗಪಡಿಸಿದ್ದಾರೆ. ಈ ಮನೆಗೆ ಕಾಲಿಡಲು ಜನರು ಹೆದರುತ್ತಿದ್ದಾರೆ. ಬಾಲಿವುಡ್ (Bollywood) ಮಂದಿಗೆ ಮತ್ತೆ ಮನೆ ನೀಡಲು ಆ ಅಪಾರ್ಟ್ಮೆಂಟ್ ಮಾಲೀಕರು ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಸುಶಾಂತ್ ಸಿಂಗ್ ರಜಪೂತ್ ಅವರು ಆತ್ಮಹತ್ಯೆ ಮಾಡಿಕೊಂಡರು ಎಂಬುದು ಒಂದು ವರ್ಗದ ವಾದ. ಅವರನ್ನು ಹತ್ಯೆ ಮಾಡಲಾಯಿತು ಎಂಬುದು ಕುಟುಂಬದವರ ಆರೋಪ. ತನಿಖೆ ಪೂರ್ಣಗೊಂಡು, ಕೋರ್ಟ್ ತೀರ್ಪು ನೀಡಿದ ಬಳಿಕವಷ್ಟೇ ಈ ವಾದಕ್ಕೆ ತೆರೆ ಬೀಳಲಿದೆ. ಸುಶಾಂತ್ ಆತ್ಮಹತ್ಯೆ ಮಾಡಿಕೊಂಡರು ಎಂದು ನಂಬಿರುವ ಎಲ್ಲರೂ ಈ ಫ್ಲಾಟ್ನಲ್ಲಿ ವಾಸ ಮಾಡಲು ಹೆದರುತ್ತಿದ್ದಾರೆ.
ಇದನ್ನೂ ಓದಿ: Sushant Singh Rajput: ‘ಸುಶಾಂತ್ ಮೃತದೇಹ ಕಂಡಾಗಲೇ ಅದು ಆತ್ಮಹತ್ಯೆ ಅಲ್ಲ ಅಂತ ಗೊತ್ತಾಗಿತ್ತು’: ಸಹೋದರಿ ಸ್ಫೋಟಕ ಹೇಳಿಕೆ
ಈ ಅಪಾರ್ಟ್ಮೆಂಟ್ ಮಾಲೀಕರು ಓರ್ವ ಎನ್ಆರ್ಐ. ಅವರು ಮುಂಬೈನಲ್ಲಿ ಇರುವುದಿಲ್ಲ. ಈ ಫ್ಲಾಟ್ಗೆ ಅವರು ಪ್ರತಿ ತಿಂಗಳಿಗೆ 5 ಲಕ್ಷ ರೂಪಾಯಿ ಬಾಡಿಗೆ ನಿಗದಿ ಮಾಡಿದ್ದಾರೆ. ಇದು ಅಲ್ಲಿನ ಮಾರ್ಕೆಟ್ ಬೆಲೆ. ಇದು ವಿವಾದಿತ ಫ್ಲಾಟ್ ಎಂಬುದು ಗೊತ್ತಿದ್ದರೂ ಕೂಡ ಬಾಡಿಗೆ ತಗ್ಗಿಸಲು ಮಾಲೀಕರು ಸಿದ್ಧರಿಲ್ಲ. ಇದೇ ಬೆಲೆಗೆ ಅಕ್ಕ-ಪಕ್ಕದ ಅಪಾರ್ಟ್ಮೆಂಟ್ನಲ್ಲಿ ಫ್ಲಾಟ್ ಸಿಗುತ್ತಿರುವಾಗ ಈ ವಿವಾದಿತ ಜಾಗಕ್ಕೆ ಯಾಕೆ ಬರಬೇಕು ಎಂದು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ.
ಇದು ನಾಲ್ಕು ಬೆಡ್ ರೂಮ್ ಇರುವ ಫ್ಲಾಟ್. ಮುಂಬೈನ ಬಾಂದ್ರಾದಲ್ಲಿ ಈ ಕಟ್ಟಡ ಇದೆ. ಸಮುದ್ರಕ್ಕೆ ಮುಖ ಮಾಡಿರುವ ಈ ಅಪಾರ್ಟ್ಮೆಂಟ್ನ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಕೆಲವು ಸ್ಟಾರ್ ಸೆಲೆಬ್ರಿಟಿಗಳು ಈ ಫ್ಲಾಟ್ ಅನ್ನು ಬಾಡಿಗೆಗೆ ಪಡೆಯಲು ಮುಂದೆಬರಬಹುದು. ಆದರೆ ಅವರು ಎಷ್ಟೇ ದೊಡ್ಡ ಸೆಲೆಬ್ರಿಟಿ ಆಗಿದ್ದರೂ ಕೂಡ ಸಿನಿಮಾ ಮಂದಿಗೆ ಮನೆ ನೀಡಬಾರದು ಎಂದು ಮಾಲೀಕರು ಗಟ್ಟಿ ನಿರ್ಧಾರ ಮಾಡಿಕೊಂಡಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ನಿಧನರಾಗಿ ಎರಡೂವರೆ ವರ್ಷ ಕಳೆದಿದೆ. ಒಂದಿಲ್ಲೊಂದು ಕಾರಣಕ್ಕೆ ಅಭಿಮಾನಿಗಳು ಅವರನ್ನು ಮಿಸ್ ಮಾಡಿಕೊಳ್ಳುತ್ತಲೇ ಇದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಅವರ ಕುರಿತು ಚರ್ಚೆ ಆಗುತ್ತಲೇ ಇರುತ್ತದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:44 am, Sun, 11 December 22