ಅಶ್ಲೀಲ ಹಾಡಿನ ವಿವಾದ: 800ಕ್ಕೂ ಹೆಚ್ಚು ಲಿಂಕ್ಸ್ ಡಿಲೀಟ್ ಮಾಡಿದ ಪೊಲೀಸರು

ಅಶ್ಲೀಲ ಸಾಹಿತ್ಯ ಇರುವ ‘ಟಟೀರಿ’ ಹಾಡಿನ ವಿರುದ್ಧ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ದೇಶಾದ್ಯಂತ ಜನರಿಂದ ತೀವ್ರ ವಿರೋಧ ವ್ಯಕ್ತವಾಗಿದ ಬೆನ್ನಲ್ಲೇ ಈ ಹಾಡನ್ನು ಡಿಲೀಟ್ ಮಾಡಲಾಗಿದೆ. ಈಗ ಆ ಹಾಡಿಗೆ ಸಂಬಂಧಿಸಿದ ರೀಲ್ಸ್, ಶಾರ್ಟ್ಸ್ ಮುಂತಾದ ವಿಡಿಯೋಗಳನ್ನು ತೆಗೆದು ಹಾಕಲಾಗುತ್ತಿದೆ.

ಅಶ್ಲೀಲ ಹಾಡಿನ ವಿವಾದ: 800ಕ್ಕೂ ಹೆಚ್ಚು ಲಿಂಕ್ಸ್ ಡಿಲೀಟ್ ಮಾಡಿದ ಪೊಲೀಸರು
Badshah

Updated on: Mar 23, 2026 | 3:49 PM

ಬಾಲಿವುಡ್‌ನ ಖ್ಯಾತ ಗಾಯಕ ಬಾದ್‌ಶಾ (Badshah) ಅವರ ಹೊಸ ಹಾಡು ‘ಟಟೀರಿ’ ಭಾರಿ ವಿವಾದಕ್ಕೆ ಗುರಿಯಾಗಿದೆ. ಮಹಿಳೆಯರು ಮತ್ತು ಅಪ್ರಾಪ್ತರ ಬಗ್ಗೆ ಆಕ್ಷೇಪಾರ್ಹ ಸಾಹಿತ್ಯವನ್ನು ಹೊಂದಿದೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ, ಹರಿಯಾಣ ಪೊಲೀಸರು ಈ ಹಾಡಿನ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದಾರೆ. ಹರಿಯಾಣ ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ‘ಟಟೀರಿ’ (Tateeree) ಹಾಡಿನ ಒಟ್ಟು 857 ಲಿಂಕ್‌ಗಳನ್ನು ಈವರೆಗೆ ತೆಗೆದುಹಾಕಿದ್ದಾರೆ. ಇದರಲ್ಲಿ ಯೂಟ್ಯೂಬ್‌ನ 154 ವೀಡಿಯೊಗಳು ಮತ್ತು ಇನ್‌ಸ್ಟಾಗ್ರಾಮ್‌ನ 703 ರೀಲ್ಸ್‌ ಸೇರಿವೆ. ಮರು-ಅಪ್‌ಲೋಡ್ ಮಾಡಲಾದ ವೀಡಿಯೊಗಳು ಮತ್ತು ಶಾರ್ಟ್ಸ್​ಗಳನ್ನು ಸಹ ಡಿಲೀಟ್ ಮಾಡುವಂತೆ ಸೋಶಿಯಲ್ ಮೀಡಿಯಾ ಸಂಸ್ಥೆಗಳಿಗೆ ನೋಟಿಸ್ ನೀಡಲಾಗಿದೆ.

ಮಹಿಳೆಯರ ಮತ್ತು ಅಪ್ರಾಪ್ತರ ಘನತೆಗೆ ಧಕ್ಕೆ ತರುವಂತಹ ಯಾವುದೇ ವಿಷಯವನ್ನು ಸಹಿಸುವುದಿಲ್ಲ ಎಂದು ಹರಿಯಾಣ ಪೊಲೀಸ್ ಮಹಾನಿರ್ದೇಶಕ (DGP) ಅಜಯ್ ಸಿಂಘಾಲ್ ತಿಳಿಸಿದ್ದಾರೆ. ನಿಯಮ ಉಲ್ಲಂಘಿಸುವ ಖಾತೆಗಳನ್ನು ನಿರ್ಬಂಧಿಸಲಾಗುವುದು ಮತ್ತು ಪದೇ ಪದೇ ತಪ್ಪು ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

ಅಲ್ಲದೇ, ಈ ಹಾಡನ್ನು ಬಳಸಿ ಹೊಸ ವೀಡಿಯೊಗಳನ್ನು ಕ್ರಿಯೇಟ್ ಮಾಡದಂತೆ ಅಥವಾ ಶೇರ್ ಮಾಡದಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ. ಹರಿಯಾಣದ ಪಂಚಕುಲ ನಗರದ ಸೆಕ್ಟರ್ 20 ಸೈಬರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಈ ಹಾಡಿನ ವಿವಾದದಿಂದಾಗಿ ಬಾದ್​ಶಾ ಅವರಿಗೆ ಅಪಖ್ಯಾತಿ ಬಂದಂತೆ ಆಗಿದೆ.

ಕಳೆದ ವಾರವಷ್ಟೇ ರಾಷ್ಟ್ರೀಯ ಮಹಿಳಾ ಆಯೋಗವು ಈ ಹಾಡಿನ ಅಶ್ಲೀಲತೆಯ ಬಗ್ಗೆ ಗಾಯಕ ಬಾದ್‌ಶಾ ಮತ್ತು ಹಾಡಿನ ನಿರ್ಮಾಪಕರಿಗೆ ಸಮನ್ಸ್ ನೀಡಿತ್ತು. ಈ ಹಾಡು ಭಾರತೀಯ ನ್ಯಾಯ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ನಿಬಂಧನೆಗಳನ್ನು ಉಲ್ಲಂಘಿಸಿದೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ. ಸಂಕಷ್ಟಕ್ಕೆ ಸಿಲುಕಿದ ಬಾದ್‌ಶಾ ಈಗಾಗಲೇ ಈ ಬಗ್ಗೆ ಕ್ಷಮೆಯಾಚಿಸಿದ್ದು, ಎಲ್ಲಾ ಪ್ಲಾಟ್‌ಫಾರ್ಮ್‌ಗಳಿಂದ ಹಾಡನ್ನು ಹಿಂಪಡೆದಿದ್ದಾರೆ.

ಇದನ್ನೂ ಓದಿ: ಪ್ರೇಮ್ ಬರೆದ ‘ಕೆಡಿ’ ಹಾಡಿನ ಅಶ್ಲೀಲ ಸಾಹಿತ್ಯಕ್ಕೆ ಜನರ ಆಕ್ರೋಶ; ಸೆಲೆಬ್ರಿಟಿಗಳೂ ಗರಂ

ಕನ್ನಡದ ‘ಕೆಡಿ’ ಸಿನಿಮಾದ ‘ಸರ್ಸೆ ನಿನ್ನ ಸೆರಗ’ ಹಾಡು ಕೂಡ ದೇಶಾದ್ಯಂತ ವಿವಾದ ಸೃಷ್ಟಿ ಮಾಡಿದೆ. ಈ ಹಾಡಿನಲ್ಲಿ ಕೂಡ ಅಶ್ಲೀಲ ಸಾಹಿತ್ಯ ಇದೆ ಎಂಬ ಕಾರಣಕ್ಕೆ ಮಹಿಳಾ ಆಯೋಗ ನೋಟಿಸ್ ಜಾರಿ ಮಾಡಿತು. ತೀವ್ರ ವಿರೋಧ ವ್ಯಕ್ತವಾದ ಬಳಿಕ ಹಾಡನ್ನು ಡಿಲೀಟ್ ಮಾಡಲಾಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us