
ನಟ ಅನುಪಮ್ ಖೇರ್ ಅವರ ಪಾಲಿಗೆ ‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ಸಿನಿಮಾ ಹೆಚ್ಚು ವಿಶೇಷವಾಗಿದೆ. 2022ರ ಮಾರ್ಚ್ 11ರಂದು ಬಿಡುಗಡೆ ಆದ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ 250 ಕೋಟಿ ರೂಪಾಯಿಗಿಂತಲೂ ಹೆಚ್ಚು ಕಲೆಕ್ಷನ್ ಮಾಡಿತು. ಹಲವು ಸಿನಿಮೋತ್ಸವಗಳಲ್ಲಿ ಪ್ರದರ್ಶನ ಕಂಡಿತು. ಈಗ ಗೋವಾದಲ್ಲಿ ನಡೆಯುತ್ತಿರುವ ‘ಅಂತಾರಾಷ್ಟ್ರೀಯ ಭಾರತೀಯ ಸಿನಿಮೋತ್ಸವ’ದಲ್ಲೂ (IFFI Goa) ಈ ಚಿತ್ರಕ್ಕೆ ಗೌರವ ಸಿಕ್ಕಿದೆ. ಚಿತ್ರದ ಪ್ರದರ್ಶನದ ವೇಳೆ ನಟ ಅನುಪಮ್ ಖೇರ್, ನಿರ್ಮಾಪಕ ಅಭಿಷೇಕ್ ಅಗರ್ವಾಲ್ ಮುಂತಾದವರು ಹಾಜರಿದ್ದರು. ಎಲ್ಲರ ಎದುರು ಅನುಪಮ್ ಖೇರ್ (Anupam Kher) ಅವರು ತಮ್ಮ ಮನದ ಮಾತುಗಳನ್ನು ಹಂಚಿಕೊಂಡರು. ಆ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲೂ ಅವರು ಶೇರ್ ಮಾಡಿಕೊಂಡಿದ್ದಾರೆ.
ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆ ಘಟನೆಯನ್ನು ಆಧರಿಸಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಮೂಡಿಬಂದಿದೆ. ಈ ಚಿತ್ರಕ್ಕೆ ವಿವೇಕ್ ಅಗ್ನಿಹೋತ್ರಿ ನಿರ್ದೇಶನ ಮಾಡಿದ್ದಾರೆ. ಪಲ್ಲವಿ ಜೋಶಿ, ಅನುಪಮ್ ಖೇರ್, ದರ್ಶನ್ ಕುಮಾರ್, ಮಿಥುನ್ ಚಕ್ರವರ್ತಿ ಮುಂತಾದವರು ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಸಿನಿಮಾದ ಕುರಿತು ತಮ್ಮ ಮನದ ಮಾತುಗಳನ್ನು ಗೋವಾ ಸಿನಿಮೋತ್ಸವದಲ್ಲಿ ಅನುಪಮ್ ಖೇರ್ ಅವರು ತೆರೆದಿಟ್ಟಿದ್ದಾರೆ.
‘ಈ ಚಿತ್ರ ನನ್ನ ಹೃದಯಕ್ಕೆ ತುಂಬ ಹತ್ತಿರವಾಗಿದೆ. ಈ ಚಿತ್ರದಲ್ಲಿ ನಾವು ತೋರಿಸಿದ ಸತ್ಯವನ್ನು 32 ವರ್ಷಗಳ ಕಾಲ ಮುಚ್ಚಿಡಲಾಗಿತ್ತು. ಕಾಶ್ಮೀರಿ ಪಂಡಿತರ ಹಾಗೂ ಹಿಂದುಗಳ ಹತ್ಯಾಕಾಂಡದ ಕಥೆ ಇದು. ಎಲ್ಲರಿಗೂ ಇದು ಗೊತ್ತಿತ್ತು. ಆದರೆ ಸಿನಿಮಾ ಮಾಡಬೇಕು ಎಂದುಕೊಂಡ ಏಕೈಕ ವ್ಯಕ್ತಿ ವಿವೇಕ್ ಅಗ್ನಿಹೋತ್ರಿ’ ಎಂದು ಅನುಪಮ್ ಖೇರ್ ಹೇಳಿದ್ದಾರೆ.
ವ್ಯಾಕ್ಸಿನ್ ಕುರಿತು ವಿವೇಕ್ ಅಗ್ನಿಹೋತ್ರಿ ಸಿನಿಮಾ:
‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಯಶಸ್ಸಿನ ಬಳಿಕ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ಯಾವ ಸಿನಿಮಾ ಮಾಡುತ್ತಾರೆ ಎಂಬ ಕೌತುಕಕ್ಕೆ ಇತ್ತೀಚೆಗೆ ತೆರೆ ಬಿದ್ದಿದೆ. ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ಅವರ ನಿರ್ದೇಶನದಲ್ಲಿ ಮೂಡಿಬರಲಿದೆ. ಈ ಚಿತ್ರದ ಟೈಟಲ್ ಅನೌನ್ಸ್ ಮಾಡಲು ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ವ್ಯಾಕ್ಸಿನ್ ಬಾಟಲಿ ಮೇಲೆ ಚಿತ್ರದ ಶೀರ್ಷಿಕೆ ಬರೆಯಲಾಗಿದೆ.
2023ರ ಆಗಸ್ಟ್ 15ರಂದು ‘ದಿ ವ್ಯಾಕ್ಸಿನ್ ವಾರ್’ ರಿಲೀಸ್ ಆಗಲಿದೆ. ಕನ್ನಡ, ಹಿಂದಿ, ಇಂಗ್ಲಿಷ್, ತೆಲುಗು, ಮಲಯಾಳಂ, ಮರಾಠಿ ಸೇರಿದಂತೆ 11 ಭಾಷೆಗಳಲ್ಲಿ ತೆರೆಗೆ ಬರಲಿದೆ ಎಂಬುದು ವಿಶೇಷ. ಪಲ್ಲವಿ ಜೋಶಿ ಹಾಗೂ ಅಭಿಷೇಕ್ ಅಗರ್ವಾಲ್ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.