ಹೀನಾಯವಾಗಿ ಕುಸಿದ ‘ದಿ ಕೇರಳ ಸ್ಟೋರಿ 2’ ಬಾಕ್ಸ್ ಆಫೀಸ್ ಕಲೆಕ್ಷನ್

2023ರಲ್ಲಿ ಬಿಡುಗಡೆ ಆಗಿದ್ದ ‘ದಿ ಕೇರಳ ಸ್ಟೋರಿ’ ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿ ಮೋಡಿ ಮಾಡಿತ್ತು. ಆದರೆ ಅದರ ಸೀಕ್ವೆಲ್ ಅಷ್ಟೇನೂ ಯಶಸ್ಸು ಕಂಡಿಲ್ಲ. ದಿನದಿಂದ ದಿನಕ್ಕೆ ಕಲೆಕ್ಷನ್ ಕುಸಿಯುತ್ತಿದೆ. ಮೊದಲ ಪಾರ್ಟ್ ರೀತಿಯಲ್ಲಿ ಕಲೆಕ್ಷನ್ ಮಾಡಲು 2ನೇ ಪಾರ್ಟ್​​ಗೆ ಸಾಧ್ಯವಾಗಿಲ್ಲ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಹೀನಾಯವಾಗಿ ಕುಸಿದ ‘ದಿ ಕೇರಳ ಸ್ಟೋರಿ 2’ ಬಾಕ್ಸ್ ಆಫೀಸ್ ಕಲೆಕ್ಷನ್
The Kerala Story 2 Poster

Updated on: Mar 03, 2026 | 4:33 PM

ವಿವಾದದ ಮೂಲಕವೇ ಭಾರಿ ಸುದ್ದಿ ಆಗಿದ್ದ ‘ದಿ ಕೇರಳ ಸ್ಟೋರಿ 2’ ಸಿನಿಮಾಗೆ ನಿರೀಕ್ಷಿತ ಪ್ರಮಾಣದ ಕಲೆಕ್ಷನ್ ಆಗಿಲ್ಲ. ಫೆಬ್ರವರಿ 27ರಂದು ರಿಲೀಸ್ ಆದ ಈ ಚಿತ್ರಕ್ಕೆ ಹೇಳಿಕೊಳ್ಳುವಂತಹ ಉತ್ತಮ ಪ್ರತಿಕ್ರಿಯೆ ಸಿಕ್ಕಿಲ್ಲ. ಆದ್ದರಿಂದ ಬಾಕ್ಸ್ ಆಫೀಸ್ ಕಲೆಕ್ಷನ್ (Box Office Collection) ಮೇಲೆ ಪೆಟ್ಟು ಬಿದ್ದಿದೆ. ಎರಡು ಮತ್ತು ಮೂರನೇ ದಿನ ಸ್ವಲ್ಪ ಚೇತರಿಕೆ ಕಂಡಿದ್ದ ಬಾಕ್ಸ್ ಆಫೀಸ್ ನಂಬರ್ ನಂತರದ ದಿನಗಳಲ್ಲಿ ಕುಸಿಯಲು ಆರಂಭ ಆಗಿದೆ. ‘ದಿ ಕೇರಳ ಸ್ಟೋರಿ 2’ (The Kerala Story 2) ಸಿನಿಮಾಗೆ ಹಾಕಿದ ಬಜೆಟ್ ಆದ್ರೂ ವಾಪಸ್ ಬರುತ್ತಾ ಅಥವಾ ಇಲ್ಲವಾ ಎಂಬ ಅನುಮಾನ ಮೂಡುವಂತಾಗಿದೆ.

ಕಾನೂನಿನ ತೊಡಕು ಉಂಟಾಗಿದ್ದರಿಂದ ಫೆಬ್ರವರಿ 27ರಂದು ಕೆಲವೇ ಕೆಲವು ಕಡೆಗಳಲ್ಲಿ ಮಾತ್ರ ‘ದಿ ಕೇರಳ ಸ್ಟೋರಿ 2’ ಸಿನಿಮಾ ರಿಲೀಸ್ ಆಯಿತು. ಅಂದು ಕೇವಲ 75 ಲಕ್ಷ ರೂಪಾಯಿ ಕಲೆಕ್ಷನ್ ಆಗಿತ್ತು. 2ನೇ ದಿನವಾದ ಫೆ.28ರಂದು ಈ ಚಿತ್ರಕ್ಕೆ 4.65 ಕೋಟಿ ರೂಪಾಯಿ ಕಮಾಯಿ ಆಯಿತು. 3ನೇ ದಿನ (ಮಾರ್ಚ್ 1) 4.75 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು.

ಆದರೆ 4ನೇ ದಿನವಾದ ಮಾರ್ಚ್ 2ರಂದು ‘ದಿ ಕೇರಳ ಸ್ಟೋರಿ 2’ ಸಿನಿಮಾದ ಕಲೆಕ್ಷನ್ 2.75 ಕೋಟಿ ರೂಪಾಯಿಗೆ ಕುಸಿದಿದೆ. 5ನೇ ದಿನ (ಮಾರ್ಚ್ 3) ಇನ್ನಷ್ಟು ಕುಸಿಯುವ ಸೂಚನೆ ಸಿಕ್ಕಿದೆ. ದೇಶಾದ್ಯಂತ ಈ ಸಿನಿಮಾ ಬಿಡುಗಡೆ ಆಗಿದೆ. ಆದರೆ ಮುಂಬೈ ಹೊರತುಪಡಿಸಿ ಬೇರೆ ಯಾವುದೇ ನಗರಗಳಲ್ಲಿ ಈ ಸಿನಿಮಾಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿಲ್ಲ.

ಕೇರಳದಲ್ಲಿ ಪ್ರೇಕ್ಷಕರು ಈ ಸಿನಿಮಾವನ್ನು ಬಹುತೇಕ ತಿರಸ್ಕರಿಸಿದ್ದಾರೆ. ವರದಿಗಳ ಪ್ರಕಾರ, ಈ ಸಿನಿಮಾಗೆ ಹಾಕಿರುವ ಒಟ್ಟು ಬಂಡವಾಳ 30 ಕೋಟಿ ರೂಪಾಯಿ. ಆದರೆ ಈವರೆಗೂ ಕಲೆಕ್ಷನ್ ಆಗಿರುವುದು ಅಂದಾಜು 14 ಕೋಟಿ ರೂಪಾಯಿ ಮಾತ್ರ. ಮುಂದಿನ ದಿನಗಳಲ್ಲಿ ಕಲೆಕ್ಷನ್ ಇನ್ನಷ್ಟು ಕುಸಿದರೆ ಹಾಕಿದ ಬಂಡವಾಳ ಕೂಡ ವಾಪಸ್ ಬರುವುದು ಕಷ್ಟವಾಗುತ್ತದೆ.

ಇದನ್ನೂ ಓದಿ: ‘ದಿ ಕೇರಳ ಸ್ಟೋರಿ 2’ ಸಿನಿಮಾ ಬಗ್ಗೆ ಜನರಿಗೆ ಎಚ್ಚರಿಕೆ ನೀಡಿದ ಸಿಎಂ ಪಿಣರಾಯಿ ವಿಜಯನ್

ಕಾಮ್ಯಾಕ್ಯ ನಾರಾಯಣ್ ಸಿಂಗ್ ಅವರು ನಿರ್ದೇಶನ ಮಾಡಿದ ಈ ಸಿನಿಮಾವನ್ನು ವಿಪುಲ್ ಅಮೃತ್​ಲಾಲ್ ಶಾ ಅವರು ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಉಲ್ಕಾ ಗುಪ್ತಾ, ಐಶ್ವರ್ಯಾ ಊಜಾ, ಅದಿತಿ ಭಾಟಿಯಾ, ಅರ್ಜುನ್ ಸಿಂಗ್ ಮುಂತಾದವರು ನಟಿಸಿದ್ದಾರೆ. ಲವ್ ಜಿಹಾದ್ ಕುರಿತ ಕಥೆಯನ್ನು ‘ದಿ ಕೇರಳ ಸ್ಟೋರಿ 2’ ಸಿನಿಮಾದಲ್ಲಿ ತೋರಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us