
ನಟಿ ಅದಾ ಶರ್ಮಾ (Adah Sharma) ಅವರು ಈಗ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈ ವರ್ಷ ಅವರಿಗೆ ದೊಡ್ಡ ಗೆಲುವು ಸಿಕ್ಕಿದೆ. ‘ದಿ ಕೇರಳ ಸ್ಟೋರಿ’ ಸಿನಿಮಾದಲ್ಲಿ ಅವರು ಮಾಡಿದ ಪಾತ್ರ ಗಮನ ಸೆಳೆದಿದೆ. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಮೋಡಿ ಮಾಡಿದೆ. ಅದಾ ಶರ್ಮಾ ಅವರ ನಟನೆಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈಗ ಅವರಿಗೆ ಹೊಸ ಹೊಸ ಆಫರ್ಗಳು ಸಿಗುತ್ತಿವೆ. ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾದಿಂದ ಅವರ ವೃತ್ತಿಜೀವನಕ್ಕೆ ಹೊಸ ಮೈಲೇಜ್ ಸಿಕ್ಕಿದೆ. ಈಗ ಅವರಿಗೆ ಮತ್ತೊಂದು ದೊಡ್ಡ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ‘ದಿ ಗೇಮ್ ಆಫ್ ಗಿರ್ಗಿಟ್’ (The Game of Girgit) ಎಂಬ ಸಿನಿಮಾಗೆ ಅದಾ ಶರ್ಮಾ ಅವರು ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಈ ಸಿನಿಮಾದಲ್ಲಿ ಬಾಲಿವುಡ್ನ ಖ್ಯಾತ ನಟ ಶ್ರೇಯಸ್ ತಲ್ಪಡೆ ಕೂಡ ನಟಿಸುತ್ತಿದ್ದಾರೆ. ಒಂದಷ್ಟು ವರ್ಷಗಳ ಹಿಂದೆ ಭಾರಿ ಕುಖ್ಯಾತಿ ಪಡೆದಿದ್ದ ಬ್ಲೂ ವೇಲ್ ಗೇಮ್ ಕುರಿತು ಈ ಸಿನಿಮಾ ಸಿದ್ಧವಾಗಲಿದೆ ಎಂಬುದು ವಿಶೇಷ.
‘ಗಾಂಧಾರ್ ಫಿಲ್ಮ್ಸ್ ಆ್ಯಂಡ್ ಸ್ಟುಡಿಯೋ ಪ್ರೈವೇಟ್ ಲಿಮಿಡೆಟ್’ ಸಂಸ್ಥೆ ಮೂಲಕ ‘ದಿ ಗೇಮ್ ಆಫ್ ಗಿರ್ಗಿಟ್’ ಸಿನಿಮಾ ಮೂಡಿಬರುತ್ತಿದೆ. ಇಂದು (ಮೇ 11) ಅದಾ ಶರ್ಮಾ ಅವರ ಬರ್ತ್ಡೇ. ಆ ಪ್ರಯುಕ್ತ ‘ದಿ ಗೇಮ್ ಆಫ್ ಗಿರ್ಗಿಟ್’ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಈ ಸಿನಿಮಾದಲ್ಲಿ ಅದಾ ಶರ್ಮಾ ಅವರು ಪೊಲೀಸ್ ಪಾತ್ರ ಮಾಡಲಿದ್ದಾರೆ.
‘ದಿ ಗೇಮ್ ಆಫ್ ಗಿರ್ಗಿಟ್’ ಚಿತ್ರಕ್ಕೆ ವಿಶಾಲ್ ಪಾಂಡ್ಯ ನಿರ್ದೇಶನ ಮಾಡಲಿದ್ದಾರೆ. ಈ ಸಿನಿಮಾ ಬಗ್ಗೆ ಈಗಲೇ ಕುತೂಹಲ ಸೃಷ್ಟಿ ಆಗಿದೆ. ಒಂದು ಕಾಲದಲ್ಲಿ ಬ್ಲೂ ವೇಲ್ ಗೇಮ್ ಬಗ್ಗೆ ಸಾಕಷ್ಟು ಕ್ರೇಜ್ ಇತ್ತು. ಯುವಕರು ಈ ಗೇಮ್ಗೆ ಅಡಿಕ್ಟ್ ಆಗಿದ್ದರು. ಅದರಿಂದ ಸಾಕಷ್ಟು ಅನಾಹುತಗಳು ಆದ ಬಗ್ಗೆ ಮಾತುಗಳು ಕೇಳಿಬಂದಿದ್ದವು. ಅಂಥ ಖತರ್ನಾಕ್ ಗೇಮ್ ಕುರಿತು ‘ದಿ ಗೇಮ್ ಆಫ್ ಗಿರ್ಗಿಟ್’ ಸಿನಿಮಾ ಸಿದ್ಧವಾಗುತ್ತಿದೆ.
ಇದನ್ನೂ ಓದಿ: The Kerala Story: ಇನ್ನಷ್ಟು ಹೆಚ್ಚಿತು ‘ದಿ ಕೇರಳ ಸ್ಟೋರಿ’ ಕಲೆಕ್ಷನ್; 68 ಕೋಟಿ ರೂ. ದಾಟಿದರೂ ತಗ್ಗಿಲ್ಲ ಈ ಚಿತ್ರದ ಅಬ್ಬರ
ಈ ಸಿನಿಮಾದಲ್ಲಿ ನಟಿಸಲು ಅದಾ ಶರ್ಮಾ ಅವರು ಖುಷಿಯಾಗಿದ್ದಾರೆ. ‘ತಮಗೆ ತಾವೇ ಹಾನಿ ಮಾಡಿಕೊಳ್ಳುವ ಅಥವಾ ಬೇರೆಯವರಿಗೆ ಹಾನಿ ಮಾಡುವ ರೀತಿಯಲ್ಲಿ ಆ ಗೇಮ್ ಇತ್ತು. ಆ ಸಮಸ್ಯೆಗೆ ಪರಿಹಾರ ನೀಡುವ ಪಾತ್ರ ನನ್ನದು’ ಎಂದು ಅವರು ಹೇಳಿದ್ದಾರೆ. ಈ ಹಿಂದೆ ‘ಕಮಾಂಡೋ’ ಸಿನಿಮಾದಲ್ಲಿ ಕೂಡ ಅದಾ ಶರ್ಮಾ ಅವರು ಪೊಲೀಸ್ ಪಾತ್ರ ಮಾಡಿದ್ದರು. ಈಗ ಮತ್ತೊಮ್ಮೆ ಖಾಕಿ ಧರಿಸುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:10 pm, Thu, 11 May 23