ಗುಂಡಿನ ದಾಳಿ ಹಿಟ್‌ಲಿಸ್ಟ್​​ನಲ್ಲಿ ಸಲ್ಮಾನ್, ಆಮಿರ್, ಅಕ್ಷಯ್? ಪೊಲೀಸ್ ಅಧಿಕಾರಿ ಸ್ಪಷ್ಟನೆ

ಟೈಗರ್ ಶ್ರಾಫ್ ಮೇಲಿನ ಗುಂಡಿನ ದಾಳಿ ಪ್ರಕರಣದ ಆರೋಪಿಗಳು ಮೊದಲು ಸಲ್ಮಾನ್ ಖಾನ್ ಅವರ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ ಬಳಿ ಪರಿಶೀಲನೆ ನಡೆಸಿದ್ದರು. ಆದರೆ ಅಲ್ಲಿ ಕಟ್ಟುನಿಟ್ಟಿನ ಭದ್ರತೆ ಇದ್ದುದರಿಂದ ತಮ್ಮ ಯೋಜನೆಯನ್ನು ಬದಲಾಯಿಸಿ, ಟೈಗರ್ ಶ್ರಾಫ್ ಅವರನ್ನು ಗುರಿಯಾಗಿಸಿಕೊಂಡಿದ್ದರು ಎಂದು ಹೇಳಲಾಗಿತ್ತು. ಆ ಬಗ್ಗೆ ಪೊಲೀಸ್ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ಗುಂಡಿನ ದಾಳಿ ಹಿಟ್‌ಲಿಸ್ಟ್​​ನಲ್ಲಿ ಸಲ್ಮಾನ್, ಆಮಿರ್, ಅಕ್ಷಯ್? ಪೊಲೀಸ್ ಅಧಿಕಾರಿ ಸ್ಪಷ್ಟನೆ
Salman Khan, Akshay Kumar, Tiger Shroff, Aamir Khan

Updated on: Oct 21, 2026 | 7:21 PM

ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಕಾರನ್ನು ಗುರಿಯಾಗಿಸಿಕೊಂಡು ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ನಾಲ್ವರು ಆರೋಪಿಗಳ ಬೇರೆ ಯಾವುದೇ ಬಾಲಿವುಡ್ ನಟರನ್ನು ಗುರಿಯಾಗಿಸಿಕೊಂಡಿರುವ ಬಗ್ಗೆ ವಿಚಾರಣೆಯಲ್ಲಿ ಮಾಹಿತಿ ತಿಳಿದುಬಂದಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. ನಟ ಸಲ್ಮಾನ್ ಖಾನ್ ಅವರು ಈ ದಾಳಿಯ ಮೂಲ ಗುರಿ ಆಗಿದ್ದರು ಮತ್ತು ಆರೋಪಿಗಳು ಆಮಿರ್ ಖಾನ್ ಹಾಗೂ ಅಕ್ಷಯ್ ಕುಮಾರ್ ಅವರ ಮನೆಗಳ ಬಳಿಯೂ ಪರಿಶೀಲನೆ ನಡೆಸಿದ್ದರು ಎಂಬ ವರದಿಗಳು ಹರಡುತ್ತಿದ್ದ ಬೆನ್ನಲ್ಲೇ ಪೊಲೀಸರಿಂದ ಈ ಅಧಿಕೃತ ಸ್ಪಷ್ಟನೆ ಹೊರಬಿದ್ದಿದೆ.

ಬಂಧನದ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ವಿಶೇಷ ವಿಭಾಗದ ಉಪ ಪೊಲೀಸ್ ಕಮಿಷನರ್ ಪ್ರವೀಣ್ ತ್ರಿಪಾಠಿ ಮಾತನಾಡಿ, ಬಂಧಿತ ನಾಲ್ವರು ಆರೋಪಿಗಳು ಶಸ್ತ್ರಾಸ್ತ್ರ ಪೂರೈಕೆ ಜಾಲದ ಭಾಗವಾಗಿದ್ದರು ಎಂದು ತಿಳಿಸಿದ್ದಾರೆ. ‘ಅಕ್ರಮ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುವುದು, ಅವುಗಳನ್ನು ಮುಂಬೈಗೆ ಸಾಗಿಸುವುದು ಮತ್ತು ದಾಳಿಕೋರರಿಗೆ ತಲುಪಿಸುವುದಷ್ಟೇ ಇವರ ಕೆಲಸವಾಗಿತ್ತು’ ಎಂದು ಅವರು ವಿವರಿಸಿದ್ದಾರೆ.

ವಿಚಾರಣೆಯ ವೇಳೆ ಬೇರೆ ಯಾವುದೇ ಸೆಲೆಬ್ರಿಟಿಗಳನ್ನು ಗುರಿಯಾಗಿಸಿಕೊಂಡಿದ್ದರೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರವೀಣ್ ತ್ರಿಪಾಠಿ, ‘ನಮ್ಮ ವಿಚಾರಣೆಯಲ್ಲಿ ಅಂತಹ ಯಾವುದೇ ವಿಷಯ ಕಂಡುಬಂದಿಲ್ಲ. ಈ ವ್ಯಕ್ತಿಗಳು ಕೇವಲ ಶಸ್ತ್ರಾಸ್ತ್ರ ಪೂರೈಕೆ ಜಾಲದ ಭಾಗವಾಗಿದ್ದರು. ಬಂದೂಕುಗಳನ್ನು ಎಲ್ಲಿಂದ ತರಬೇಕು ಮತ್ತು ಯಾರಿಗೆ ತಲುಪಿಸಬೇಕು ಎಂಬುದಷ್ಟೇ ಇವರಿಗೆ ತಿಳಿದಿತ್ತು’ ಎಂದು ಸ್ಪಷ್ಟಪಡಿಸಿದರು.

ತನಿಖಾ ಮೂಲಗಳನ್ನು ಉಲ್ಲೇಖಿಸಿ ಬಂದಿದ್ದ ಕೆಲವು ವರದಿಗಳ ಪ್ರಕಾರ, ಆರೋಪಿಗಳು ಆರಂಭದಲ್ಲಿ ಸಲ್ಮಾನ್ ಖಾನ್ ಅವರ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ ಬಳಿ ಪರಿಶೀಲನೆ ನಡೆಸಿದ್ದರು. ಆದರೆ ಅಲ್ಲಿ ಕಟ್ಟುನಿಟ್ಟಿನ ಭದ್ರತೆ ಇದ್ದ ಕಾರಣದಿಂದ ತಮ್ಮ ಯೋಜನೆಯನ್ನು ಬದಲಾಯಿಸಿ, ಟೈಗರ್ ಶ್ರಾಫ್ ಅವರನ್ನು ಸುಲಭವಾಗಿ ಗುರಿಯಾಗಿಸಿಕೊಂಡಿದ್ದರು ಎಂದು ಹೇಳಲಾಗಿತ್ತು.

ಇದನ್ನೂ ಓದಿ: ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ ಬಳಿಕ ಭಾರೀ ಭದ್ರತೆಯಲ್ಲಿ ಮನೆಯಿಂದ ಹೊರಬಂದ ಸಲ್ಮಾನ್ ಖಾನ್

ಅಷ್ಟೇ ಅಲ್ಲದೆ, ಆರೋಪಿಗಳು ಸಾಮಾನ್ಯ ಪ್ರವಾಸಿಗರಂತೆ ಮುಂಬೈನಲ್ಲಿ ಓಡಾಡಿಕೊಂಡು ಅಮಿತಾಭ್ ಬಚ್ಚನ್, ಆಮಿರ್ ಖಾನ್ ಮತ್ತು ಅಕ್ಷಯ್ ಕುಮಾರ್ ಸೇರಿದಂತೆ ಹಲವು ಪ್ರಮುಖ ನಟರ ನಿವಾಸಗಳು ಹಾಗೂ ಕಚೇರಿಗಳ ಬಳಿ ಸಂಚರಿಸಿದ್ದರು ಎಂದೂ ವರದಿಯಾಗಿತ್ತು. ಆದರೆ, ಈ ಯಾವುದೇ ಮಾಧ್ಯಮ ವರದಿಗಳನ್ನು ಪ್ರವೀಣ್ ತ್ರಿಪಾಠಿ ಅವರ ಹೇಳಿಕೆಯು ಅಧಿಕೃತವಾಗಿ ದೃಢಪಡಿಸುವುದಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us