
ಮೈಸೂರಿನಲ್ಲಿ ಆಳ್ವಿಕೆ ನಡೆಸಿದ್ದ ಟಿಪ್ಪು ಸುಲ್ತಾನ್ (Tipu Sultan) ಬಗ್ಗೆ ಹಲವಾರು ಚರ್ಚೆ ನಡೆದಿದೆ. ಕೆಲವರು ಟಿಪ್ಪು ಪರವಾಗಿ ಮಾತನಾಡಿದರೆ, ಇನ್ನು ಕೆಲವರು ತೀವ್ರ ವಿರೋಧ ವ್ಯಕ್ತಪಡಿಸುತ್ತಾರೆ. ಅಚ್ಚರಿ ಎಂದರೆ ಟಿಪ್ಪು ಸುಲ್ತಾನ್ ಕುರಿತಂತೆ ಈಗೊಂದು ಸಿನಿಮಾ ಸಿದ್ಧವಾಗುತ್ತಿದೆ. ಈ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೂಡಿಬರುತ್ತಿದೆ. ಈ ಸಿನಿಮಾಗೆ ‘ಟಿಪ್ಪು’ (Tipu Movie) ಎಂದು ಶೀರ್ಷಿಕೆ ಇಡಲಾಗಿದೆ. ಇಂದು (ಮೇ 4) ಟಿಪ್ಪು ಸುಲ್ತಾನ್ ಡೆತ್ ಆ್ಯನಿವರ್ಸರಿ. ಆ ಪ್ರಯುಕ್ತ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಬಾಲಿವುಡ್ ಟ್ರೇಡ್ ವಿಶ್ಲೇಷಕ ತರಣ್ ಆದರ್ಶ್ (Taran Adarsh) ಅವರು ಈ ಸಿನಿಮಾದ ಪೋಸ್ಟರ್ ಶೇರ್ ಮಾಡಿಕೊಂಡಿದ್ದಾರೆ. ಮೋಷನ್ ಪೋಸ್ಟರ್ನಲ್ಲಿ ಹಲವು ಅಂಶಗಳು ಹೈಲೈಟ್ ಆಗಿವೆ. ಟಿಪ್ಪು ವಿರುದ್ಧ ಅನೇಕ ಗಂಭೀರ ಆರೋಪಗಳನ್ನು ಮಾಡಲಾಗಿದೆ. ಒಟ್ಟಿನಲ್ಲಿ ಈ ಸಿನಿಮಾದಿಂದ ಮತ್ತೆ ಚರ್ಚೆಯ ಕಾವು ಜೋರಾಗುವುದು ಖಚಿತ.
ಪವನ್ ಶರ್ಮಾ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಸಂದೀಪ್ ಸಿಂಗ್ ಮತ್ತು ರಷ್ಮಿ ಶರ್ಮಾ ಅವರು ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ನಿರ್ಮಾಣದಲ್ಲಿ ಇರೋಸ್ ಇಂಟರ್ನ್ಯಾಷನಲ್ ಸಂಸ್ಥೆ ಕೂಡ ಪಾಲುದಾರಿಕೆ ಹೊಂದಿದೆ. ಟಿಪ್ಪು ಸುಲ್ತಾನ್ ಮುಖಕ್ಕೆ ಮಸಿ ಬಳಿದಿರುವ ರೀತಿಯಲ್ಲಿ ಪೋಸ್ಟರ್ ವಿನ್ಯಾಸಗೊಂಡಿದೆ.
ಟಿಪ್ಪು ನಿಜ ಕನಸುಗಳು ನಾಟಕ ನಿರ್ಮಾಣಕ್ಕೆ ಸಿದ್ದರಾಮಯ್ಯ ಪ್ರೇರಣೆ: ಅಡ್ಡಂಡ ಕಾರ್ಯಪ್ಪ
ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ಮಾಣ ಆಗಲಿರುವ ‘ಟಿಪ್ಪು’ ಸಿನಿಮಾ ಕನ್ನಡ, ಹಿಂದಿ, ಮಲಯಾಳಂ, ತಮಿಳು ಮತ್ತು ತೆಲುಗಿನಲ್ಲಿ ಬಿಡುಗಡೆ ಆಗಲಿದೆ. ಈ ಎಲ್ಲ ಭಾಷೆಗಳಲ್ಲೂ ಈಗ ಪೋಸ್ಟರ್ ಬಿಡುಗಡೆ ಆಗಿದೆ. ಪಠ್ಯ ಪುಸ್ತಕಗಳಲ್ಲಿ ಟಿಪ್ಪು ಸುಲ್ತಾನನ ಸಾಧನೆಗಳ ಬಗ್ಗೆ ಬರೆಯಲಾಗಿತ್ತು. ಆದರೆ ಅದಕ್ಕೆ ವಿರುದ್ಧವಾದ ಅಂಶಗಳು ಈ ಮೋಷನ್ ಪೋಸ್ಟರ್ನಲ್ಲಿವೆ.
‘ಮತಾಂಧ ಸುಲ್ತಾನನ ಕಥೆ’ ಎಂದು ಪೋಸ್ಟರ್ನಲ್ಲಿ ಬರೆಯಲಾಗಿದೆ. ‘8 ಸಾವಿರ ದೇವಸ್ಥಾನ ಮತ್ತು 27 ಚರ್ಚ್ಗಳನ್ನು ನಾಶ ಮಾಡಲಾಯಿತು. 40 ಲಕ್ಷ ಹಿಂದೂಗಳ ಮತಾಂತರ ಮಾಡಲಾಯಿತು ಮತ್ತು ಗೋಮಾಂಸ ತಿನ್ನುವಂತೆ ಒತ್ತಾಯಿಸಲಾಯಿತು. ಒಂದು ಲಕ್ಷಕ್ಕೂ ಅಧಿಕ ಹಿಂದೂಗಳನ್ನು ಜೈಲಿಗೆ ಕಳಿಸಲಾಯಿತು’ ಎಂಬಿತ್ಯಾದಿ ಆರೋಪಗಳನ್ನು ಪೋಷನ್ ಪೋಸ್ಟರ್ನಲ್ಲಿ ತೋರಿಸಲಾಗಿದೆ. ಸಿನಿಮಾ ಹೇಗೆ ಮೂಡಿಬರಬಹುದು ಎಂಬ ಕೌತುಕ ನಿರ್ಮಾಣ ಆಗಿದೆ.
‘ಟಿಪ್ಪು’ ಚಿತ್ರದ ಮೋಷನ್ ಪೋಸ್ಟರ್ ಬಗ್ಗೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ರೀತಿಯ ಸಿನಿಮಾಗಳಿಂದ ಕೇವಲ ದ್ವೇಷ ಹೆಚ್ಚಾಗುತ್ತದೆ. ಬಾಲಿವುಡ್ನವರು ಧರ್ಮದ ಬಗ್ಗೆ ಸಿನಿಮಾ ಮಾಡಿ ದುಡ್ಡು ಮಾಡಲು ಪ್ರಯತ್ನಿಸುತ್ತಿದ್ದಾರೆ. ಇದು ಪ್ರೊಪೊಗಾಂಡ ಸಿನಿಮಾ ಎಂದು ನೆಟ್ಟಿಗರು ಟೀಕಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.