ಟಿಪ್ಪು ನಿಜ ಕನಸುಗಳು ನಾಟಕ ನಿರ್ಮಾಣಕ್ಕೆ ಸಿದ್ದರಾಮಯ್ಯ ಪ್ರೇರಣೆ: ಅಡ್ಡಂಡ ಕಾರ್ಯಪ್ಪ
ಟಿಪ್ಪು ನಿಜ ಕನಸುಗಳು ನಾಟಕ ನಿರ್ಮಾಣಕ್ಕೆ ಸಿದ್ದರಾಮಯ್ಯ ಪ್ರೇರಣೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಹೇಳಿದರು.
ಮೈಸೂರು: ಟಿಪ್ಪು ನಿಜ ಕನಸುಗಳು ನಾಟಕ ನಿರ್ಮಾಣಕ್ಕೆ ಸಿದ್ದರಾಮಯ್ಯ (Siddaramaiah) ಪ್ರೇರಣೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ (Addanda Cariappa) ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಟಿಪ್ಪು ಜಯಂತಿ ಮಾಡಿದ ಕಾರಣಕ್ಕಾಗಿಯೇ ನಾನು ಪುಸ್ತಕ ಬರೆದೆ. ಸಿದ್ದರಾಮಯ್ಯ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಸೋತರು. ಟಿಪ್ಪು ಅನೇಕ ಚಾಮುಂಡಿ ದೇವಾಲಯಗಳನ್ನು ಧ್ವಂಸಗೊಳಿಸಿದ್ದಾನೆ. ಟಿಪ್ಪು ನಿಜ ಕನಸುಗಳು ನಾಟಕ ನಿರ್ಮಾಣಕ್ಕೆ ಅನುದಾನ ಕೇಳಿದೆ. ನಾನು ಅನೇಕ ಪತ್ರ ಬರೆದೆ, ಅವರಿಗೆ ನಾಟಕ ವಿಶೇಷ ಅನ್ನಿಸಲೇ ಇಲ್ಲ. ಈಗ ನಾಟಕದಲ್ಲಿ ಪ್ರೇಕ್ಷಕರಿಗಿಂತಲೂ ಹೆಚ್ಚು ಪೊಲೀಸರೇ ಇರುತ್ತಾರೆ. 25 ವರ್ಷದ ಹಿಂದೆ ಕಾರ್ನಾಡ್ರವರು ಟಿಪ್ಪು ಕನಸುಗಳು ನಾಟಕ ಮಾಡಿದಾಗ ಇವರೆಲ್ಲ ಸಂಭ್ರಮಿಸಿದರು. ನನ್ನ ಪುಸ್ತಕ 12 ಮುದ್ರಣ ಕಂಡಿದೆ, 45,000 ಜನ ನಾಟಕ ನೋಡಿದ್ದಾರೆ. ಕೋಲಾರದಲ್ಲೂ ಟಿಪ್ಪು ನಿಜ ಕನಸುಗಳು ನಾಟಕ ಪ್ರದರ್ಶನ ಆಯಿತು. ಸಿದ್ದರಾಮಯ್ಯ ಸ್ಪರ್ಧೆ ಕಾರಣಕ್ಕಾಗಿ ಫುಲ್ ಸೆಕ್ಯೂರಿಟಿ ಕೊಟ್ಟಿದ್ದರು ಎಂದು ಹೇಳಿದರು.
ಉರಿಗೌಡ, ನಂಜೇಗೌಡ ಟಿಪ್ಪು ಕೊಂದಿದ್ದು ನಿಜ
ಟಿಪ್ಪು ನಿಜ ಕನಸು ನಾಟಕ ಪ್ರದರ್ಶನ ಸೂಕ್ಷ್ಮ ವಿಚಾರ ಅಂತ ಹೇಳಿದ್ದರು. ನಾನು ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್ ಕುಮಾರ್ ಅವರೊಂದಿಗೆ ಮಾತನಾಡಿದ್ದೆ. ಸಚಿವರು ಬಸವರಾಜ ಬೊಮ್ಮಾಯಿ, ನಳೀನ್ ಕುಮಾರ್ ಕಟೀಲ್ ಜೊತೆ ಒಮ್ಮೆ ಮಾತನಾಡಿ ಅಂತ ಹೇಳಿದ್ದರು. ಅವರಿಬ್ಬರ ಪರ್ಮಿಷನ್ ಕೇಳಿದ್ದರೆ ನಾಟಕವನ್ನೇ ಮಾಡಲು ಸಾಧ್ಯ ಆಗುತ್ತಿರಲಿಲ್ಲ. ಒಂದು ಪಕ್ಷಕ್ಕೆ ಒಕ್ಕಲಿಗರನ್ನು ಲೀಸ್ ಕೊಟ್ಟಿಲ್ಲ. ನಮ್ಮಲ್ಲಿ ಕಾಫಿ ಎಸ್ಟೇಟ್‌ಗಳನ್ನು 99 ವರ್ಷ ಲೀಸ್ ಕೊಡುತ್ತಾರೆ. ಹಾಗೆ ಒಕ್ಕಲಿಗರನ್ನು ಯಾರಿಗೂ ಲೀಸ್ ಕೊಟ್ಟಿಲ್ಲ. ಗೌಡ ನಮ್ಮದು ಅಂತ ಬೋರ್ಡ್ ಹಾಕಿಕೊಂಡಿದ್ದಾರೆ. ಜಾತ್ಯಾತೀತರು ಅಂತಾರೆ. ಆದರೆ ಗೌಡ, ಕುರುಬ, ಲಿಂಗಾಯತ ನಾಯಕರು ಅನ್ನಿಸಿಕೊಳ್ಳುತ್ತಾರೆ. ನಾವೆಲ್ಲ ಚಡ್ಡಿಗಳು. ಆರ್‌ಎಸ್‌ಎಸ್‌ನಲ್ಲಿ ಚಡ್ಡಿ ಹೋಗಿ, ಪ್ಯಾಂಟ್ ಬಂದಿದೆ. ನಾನು ಅಧ್ಯಯನ ಮಾಡಿಯೇ ನಾಟಕ ಬರೆದಿದ್ದೇನೆ. ಉರಿಗೌಡ, ನಂಜೇಗೌಡ ಟಿಪ್ಪು ಕೊಂದಿದ್ದು ನಿಜ ಎಂದರು.
ನಿರ್ದೇಶಕರು- ಉಪನಿರ್ದೇಶಕಿ ಜಟಾಪಟಿ
ಇನ್ನು ಕಾರ್ಯಕ್ರಮದ ನಡುವೆಯೇ ರಂಗಾಯಣದಲ್ಲಿ ನಿರ್ದೇಶಕರು- ಉಪನಿರ್ದೇಶಕಿ ಜಟಾಪಟಿ ಉಂಟಾಯಿತು. ಅಧಿಕಾರಿಗಳು ನನ್ನ ಮೇಲೆ ಚಾಡಿ ಹೇಳುವುದನ್ನೇ ಕಾಯಕ ಮಾಡಿಕೊಂಡಿದ್ದರು. ನಿತ್ಯವೂ ಅದೇ ಕೆಲಸ ಮಾಡುತ್ತಿದ್ದರು. ಅವರಿಗೆ ಹಿಂದಿನ ಸರ್ಕಾರವೂ ಬೇಕು, ಮುಂದಿನ ಸರ್ಕಾರವೂ ಬೇಕು. ಅವರಿಗೆ ನನ್ನನ್ನು ಸಹಿಸಲು ಆಗಲಿಲ್ಲ. ಭಾಷಣದುದ್ದಕ್ಕೂ ನೇರವಾಗಿಯೇ ನಿರ್ಮಲಾ ಮಠಪತಿ ಹೆಸರು ಪ್ರಸ್ತಾಪಿಸಿಯೇ ವಾಗ್ದಾಳಿ ಮಾಡಿದರು. ಇದಕ್ಕೆ ಭಾಷಣದ ನಡುವೆಯೇ ಉಪನಿರ್ದೇಶಕಿ ನಿರ್ಮಲಾ ಮಠಪತಿ ಆಕ್ಷೇಪ ವ್ಯಕ್ತಪಡಿಸಿದ್ದು, ಸರ್, ಅಧಿಕಾರಿಗಳಿಗೆ ಯಾವುದೇ ಐಡಿಯಾಲಜಿ ಇರಲ್ಲ. ಸುಮ್ಮನೆ ನಮ್ಮನ್ನು ದೂಷಿಸಬೇಡಿ ಎಂದು ಕೂಗಿದ್ದಾರೆ.
ಉರಿಗೌಡ, ನಂಜೆಗೌಡ ಹೆಸರು ರಾಜಕೀಯ ವಲಯದಲ್ಲಿ ಭಾರಿ ಚರ್ಚೆ
ಇನ್ನು ರಾಜ್ಯ ವಿಧಾನ ಸಭಾ ಚುನಾವಣೆ ಕಾವು ಹೆಚ್ಚುತ್ತಿದ್ದಂತೆ ಉರಿಗೌಡ, ನಂಜೆಗೌಡ ಹೆಸರು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಪ್ರಧಾನಿ ಮೋದಿ ಮಂಡ್ಯಕ್ಕೆ ಆಗಮಿಸಿದ್ದ ವೇಳೆ ಉರಿಗೌಡ-ನಂಜೇಗೌಡ ಹೆಸರಿನಲ್ಲಿ ಮಹಾದ್ವಾರ ನಿರ್ಮಾಣ ಮಾಡಲಾಗಿತ್ತು. ಟಿಪ್ಪು ಕೊಂದಿದ್ದ ಒಕ್ಕಲಿಗರ ಸೇನಾನಿಗಳು ಇವರು ಎಂದು ಬಿಜೆಪಿ ನಾಯಕರು ಹೇಳಿಕೊಂಡಿದ್ದರು.
ಇದನ್ನೂ ಓದಿ: ಕೋಲಾರದಲ್ಲಿ ಸಿದ್ದರಾಮಯ್ಯ ಬದಲಿಗೆ ಬೇರೆ ಅಭ್ಯರ್ಥಿ ರೆಡಿ, ಬಾದಾಮಿಯಲ್ಲಿ ಮತ್ತೆ ಚಿಗುರೊಡೆದ ಸಿದ್ದು ಅಭಿಮಾನಿಗಳ ಆಸೆ
ಇದಾದ ಬಳಿಕ ಕಾಂಗ್ರೆಸ್, ಜೆಡಿಎಸ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿತ್ತು. ಉರಿಗೌಡ-ನಂಜೇಗೌಡ ಕಪೋಲ ಕಲ್ಪಿತ ಪಾತ್ರಗಳು ಎಂದಿದ್ದರು. ಈಗ ಮತ್ತೆ ಮಂಡ್ಯದಲ್ಲಿ ಉರಿಗೌಡ, ದೊಡ್ಡನಂಜೇ ಗೌಡ ವಿಚಾರ ಮುನ್ನಲೆಗೆ ಬಂದಿದೆ. 2006ರಲ್ಲಿ ಪರಿಷ್ಕೃತ ಆವೃತ್ತಿಯ ಸುವರ್ಣ ಮಂಡ್ಯ ಪುಸ್ತಕದಲ್ಲಿ ಉರಿಗೌಡ-ನಂಜೇಗೌಡರ ಹೆಸರು ದಾಖಲಾಗಿದೆ. ಪ್ರೊ. ಜಯಪ್ರಕಾಶ್ ಗೌಡರ ಪರಿಶ್ಕೃತ ಆವೃತ್ತಿಯ ಸುವರ್ಣ ಮಂಡ್ಯ ಪುಸ್ತಕದಲ್ಲಿಉರಿಗೌಡ-ನಂಜೇಗೌಡರ ಹೆಸರು ಪ್ರಸ್ತಾಪ ಮಾಡಲಾಗಿದೆ.
ಇದನ್ನೂ ಓದಿ: ಕೊಪ್ಪಳ: 5 ಸಾವಿರ ಕೋಟಿ ವೆಚ್ಚದಲ್ಲಿ ಅಂಜನಾದ್ರಿ ಕ್ಷೇತ್ರವನ್ನ ಅಭಿವೃದ್ಧಿ ಮಾಡುವೆ; ಜನಾರ್ದನರೆಡ್ಡಿ
ಕೋಲಾರದಿಂದ ಸ್ಪರ್ಧೆಗೆ ಸಿದ್ದರಾಮಯ್ಯ ಹಿಂದೇಟು
ಕೋಲಾರದಿಂದ ಸ್ಪರ್ಧೆಗೆ ಸಿದ್ದರಾಮಯ್ಯ ಹಿಂದೇಟು ಹಾಕಲಾಗುತ್ತಿದೆ ಎನ್ನಲಾಗುತ್ತಿದೆ. ಹಾಗಾದರೆ ಅವರ ಮುಂದಿನ ಆಯ್ಕೆ ವರುಣನಾ ಅಥವಾ ಬಾದಾಮಿನಾ ಎಂಬ ಪ್ರಶ್ನೆ ಉದ್ಭವವಾಗಿದೆ. ಈ ಹಿಂದೆ ಕೋಲಾರ ಬಾದಾಮಿ ವರುಣ ಕ್ಷೇತ್ರದ ಬಗ್ಗೆ ಹೇಳಿದ್ದ ಸಿದ್ಧರಾಮಯ್ಯ, ಮೂರು ಕ್ಷೇತ್ರ ಫೈನಲ್ ಆಗಿದೆ. ಒಂದರಲ್ಲಿ ಸ್ಪರ್ಧೆ ಮಾಡುವುದಾಗಿ ಹೇಳಿದ್ದರು.
ಇದೀಗ ಕೋಲಾರದಿಂದ ಸ್ಪರ್ಧೆ ಬಹುತೇಕ ಇಲ್ಲವೆನ್ನಲಾಗುತ್ತಿದ್ದು, ಈ ಹಿನ್ನೆಲೆ ವರುಣ ಅಥವಾ ಬಾದಾಮಿ ಆಯ್ಕೆ ಸಾಧ್ಯತೆ ಎನ್ನಲಾಗುತ್ತಿದೆ. ಅಥವಾ ವರುಣ ಹಾಗೂ ಬಾದಾಮಿ ಎರಡು ಕ್ಷೇತ್ರದಲ್ಲಿ ಸ್ಪರ್ಧೆಗೆ ಒಲವು ತೋರಿದಂತಿದೆ. ವರುಣಗೆ ಬಂದರೆ ಮಗ ಡಾ. ಯತೀಂದ್ರ ರಾಜಕೀಯ ಭವಿಷ್ಯ ಮಂಕಾಗುವ ಸಾಧ್ಯತೆಯಿದೆ. ಈ ಹಿನ್ನೆಲೆ ಅಳೆದು ತೂಗಿ ಸಿದ್ದರಾಮಯ್ಯ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:01 pm, Sun, 19 March 23