ಅಡ್ಡಂಡ ಕಾರ್ಯಪ್ಪ ಅರ್ಜೆಂಟ್ ಆಗಿ ಎಂಎಲ್ಸಿ ಆಗಬೇಕಾಗಿದೆ: ಹೆಚ್.ವಿಶ್ವನಾಥ್
ಎಂಎಲ್ಸಿ ಆಗುವ ನಿಟ್ಟಿನಲ್ಲಿ ಅಡ್ಡಂಡ ಕಾರ್ಯಪ್ಪ ಅವರು ಸಾಂಸ್ಕೃತಿಕ ತಾಣವನ್ನು ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ಎಂಎಲ್ಸಿ ಹೆಚ್.ವಿಶ್ವನಾಥ್ ಹೇಳಿದ್ದಾರೆ.
ಮೈಸೂರು: ರಂಗಾಯಣದಲ್ಲಿ ಟಿಪ್ಪು ನಿಜ ಕನಸು ನಾಟಕ ಪ್ರದರ್ಶನವನ್ನು ಟೀಕಿಸಿರುವ ಬಿಜೆಪಿ ಎಂಎಲ್ಸಿ ಹೆಚ್.ವಿಶ್ವನಾಥ್ (H.Vishwanath) ಅವರು, ನಾಟಕ ರಚನೆಕಾರ ಅಡ್ಡಂಡ ಕಾರ್ಯಪ್ಪ ಅವರಿಗೆ ರಾಜಕೀಯವಾಗಿ ಟಾಂಗ್ ಕೊಟ್ಟಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಅಡ್ಡಂಡ ಕಾರ್ಯಪ್ಪ(Addanda Cariappa) ಅರ್ಜೆಂಟ್ ಆಗಿ ಎಂಎಲ್ಸಿ ಆಗಬೇಕಾಗಿದೆ. ಅದಕ್ಕಾಗಿ ಸಾಂಸ್ಕೃತಿಕ ತಾಣವನ್ನು ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಅಡ್ಡಂಡ ಕಾರ್ಯಪ್ಪ ನಡೆ ಬಹಳ ವಿಷಾದನೀಯ ಎಂದರು. ಅಲ್ಲದೆ, ಫೀಲ್ಡ್ ಮಾರ್ಷಲ್ ಕಾರ್ಯಪ್ಪರಂತಹ ಹೆಸರಿಟ್ಟುಕೊಂಡು ಅವಮಾನ ಮಾಡುತ್ತಿದ್ದಾರೆ. ಇನ್ನುಮುಂದೆ ಕಾರ್ಯಪ್ಪ ಅನ್ನುವ ಹೆಸರನ್ನು ತೆಗೆದುಬಿಡಿ. ಅಡ್ಡಂಡನಿಂದ ಕೊಡಗಿಗೆ ಅವಮಾನವಾಗಿದೆ. ಎಂಎಲ್ಸಿ ಆಗಲು ಅರ್ಜೆಂಟ್ ಆಗಿರುವುದರಿಂದ ಆರ್ಎಸ್ಎಸ್ ವಿಚಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಅಡ್ಡಂಡ ಕಾರ್ಯಪ್ಪ ಜತೆ ಸಾಹಿತ್ಯ ಲೋಕದ ಎತ್ತರದ ವ್ಯಕ್ತಿ ಸಾಹಿತಿ ಭೈರಪ್ಪ ಸೇರಿರುವುದು ಸೂಕ್ತವಲ್ಲ, ಎಸ್.ಎಲ್.ಭೈರಪ್ಪಗೆ (S.L.Bhyrappa) ಅರ್ಜೆಂಟ್ ಆಗಿ ಜ್ಞಾನಪೀಠ ಬೇಕಿದೆ ಅನಿಸುತ್ತಿದೆ, ಕೊಟ್ಟು ಬಿಡಿ ಎಂದು ಹೇಳಿದ ವಿಶ್ವನಾಥ್, ರಂಗಾಯಣ ನಿರ್ದೇಶಕ ಸ್ಥಾನದಿಂದ ಅಡ್ಡಂಡ ಕಾರ್ಯಪ್ಪ ಅವರನ್ನು ವಜಾಗೊಳಿಸುವಂತೆ ಒತ್ತಾಯಿಸಿದರು.
ಟಿಪ್ಪು ನಿಜ ಕನಸುಗಳು ನಾಟಕ
3 ಗಂಟೆ 10 ನಿಮಿಷಗಳ ಅವಧಿಯ ಟಿಪ್ಪು ನಿಜ ಕನಸು ಎಂಬ ನಾಟಕದ ಪುಸ್ತಕ ನವೆಂಬರ್ 20ರಂದು ಬಿಡುಗಡೆಯಾಗಿದೆ. ಚರಿತ್ರೆಯಲ್ಲಿ ಬಚ್ಚಿಡಲಾಗಿದ್ದ ವಿಚಾರಗಳಿಗೆ ಬೆಳಕು ಚೆಲ್ಲುವ ಪ್ರಯತ್ನ ಈ ನಾಟಕದ ಮೂಲಕ ನಡೆಯುತ್ತಿದೆ. ಮೇಲುಕೋಟೆ ದುರಂತ, 700 ಬ್ರಾಹ್ಮಣರ ಹತ್ಯೆ ವಿಚಾರ, ಕೊಡಗಿನಲ್ಲಿ ನಡೆದ ದೊಡ್ಡ ಸಂಖ್ಯೆ ಮತಾಂತರ, ಕೊಡಗಿನಲ್ಲಿ ನಡೆದ ಕೊಡವರ ಹತ್ಯೆ, ಟಿಪ್ಪು ಸುಲ್ತಾನ್ ಆಡಳಿತದಲ್ಲಿ ತೆಗೆದುಕೊಂಡ ಇಸ್ಲಾಮಿಕ್ ತೀರ್ಮಾನಗಳು, ಆತ ಬರೆದ ಪತ್ರಗಳ ದೃಶ್ಯಾವಳಿಗಳು, ಟಿಪ್ಪು ತಾಯಿ, ಪತ್ನಿಯಿಂದ ಮತಾಂದತೆಗೆ ವಿರೋಧದ ದೃಶ್ಯಗಳು ನಾಟಕದಲ್ಲಿ ಇರಲಿದೆ.
ಇದನ್ನೂ ಓದಿ: ಜರ್ಮನಿಯಿಂದ ಬಂದು ಮೈಸೂರು ಮೃಗಾಲಯದಲ್ಲಿ ಜನ್ಮದಿನ ಆಚರಿಸಿಕೊಂಡ ಗೊರಿಲ್ಲಾ ತಬೋ
ಅಷ್ಟೇ ಅಲ್ಲದೆ, ಪಾರ್ಸಿ ಭಾಷೆಯನ್ನು ರಾಜ್ಯ ಭಾಷೆಯನ್ನಾಗಿ ಮಾಡಿದ್ದು, ಕಂದಾಯ ಇಲಾಖೆ ಹೆಸರುಗಳನ್ನು ಪಾರ್ಸಿ ಭಾಷೆಯಾಗಿ ಬದಲಿಸಿದ್ದು, ಊರುಗಳ ಹೆಸರನ್ನು ಪಾರ್ಸಿ ಭಾಷೆಯಾಗಿ ಬದಲಿಸಿದ್ದು, ಶ್ರೀರಂಗಪಟ್ಟಣದಲ್ಲಿ ಬಹು ಮಹಡಿ ಕಟ್ಟಡದಲ್ಲಿ ಇದ್ದ ತಾಳೆಗರಿ ಗ್ರಂಥಗಳನ್ನು ಸುಟ್ಟು ಉರ್ದು ಗ್ರಂಥಗಳನ್ನು ಇರಿಸಿದ್ದು, ಇಸ್ಲಾಂ ನಡೆಗೆ ರಾಜ್ಯವನ್ನು ಬಲವಂತವಾಗಿ ದೂಡಿದ್ದು ಸೇರಿದಂತೆ ಇತರ ಅಂಶಗಳನ್ನು ಒಳಗೊಂಡಂತೆ ರಚನೆಯಾಗಿರುವ ನಾಟಕ ಪ್ರದರ್ಶನ ನವೆಂಬರ್ 22 ರಂದು ನಡೆಯಿತು.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:07 pm, Sat, 26 November 22