
95ನೇ ಅಕಾಡೆಮಿ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಆಸ್ಕರ್ ಪ್ರಶಸ್ತಿ ಗೆದ್ದವರಿಗೆ ದೀಪಿಕಾ ಪಡುಕೋಣೆ (Deepika Padukone) ಅವರು ಟ್ರೋಫಿ ನೀಡಲಿದ್ದಾರೆ. ಮಾರ್ಚ್ 12ರಂದು ಲಾಸ್ ಏಂಜಲಿಸ್ನ ಡಾಲ್ಬಿ ಥಿಯೇಟರ್ನಲ್ಲಿ ಆಸ್ಕರ್ ಪ್ರಶಸ್ತಿ (Oscar Awards) ಪ್ರದಾನ ಸಮಾರಂಭ ನಡೆಯಲಿದೆ. ಹಲವು ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ. ಆ ಪೈಕಿ ಒಂದು ವಿಭಾಗದಲ್ಲಿ ಪ್ರಶಸ್ತಿ ಗೆದ್ದವರಿಗೆ ದೀಪಿಕಾ ಪಡುಕೋಣೆ ಅವರು ಟ್ರೋಫಿ ಹಸ್ತಾಂತರಿಸಲಿದ್ದಾರೆ. ಹಾಗಾಗಿ ದೀಪಿಕಾ ಅವರನ್ನು ವಿವೇಕ್ ಅಗ್ನಿಹೋತ್ರಿ ಹೊಗಳಿದ್ದಾರೆ. ಆದರೆ ಇದೇ ಅಗ್ನಿಹೋತ್ರಿ ಅವರು ಈ ಹಿಂದೆ ‘ಬೇಷರಂ ರಂಗ್..’ ಹಾಡು ರಿಲೀಸ್ ಆಗಿದ್ದಾಗ ವಿರೋಧ ವ್ಯಕ್ತಪಡಿಸಿದ್ದರು. ದೀಪಿಕಾ ಬಗ್ಗೆ ಈ ರೀತಿ ದ್ವಂದ್ವ ನಿಲುವು ತೋರುತ್ತಿರುವುದಕ್ಕೆ ವಿವೇಕ್ ಅಗ್ನಿಹೋತ್ರಿ (Vivek Agnihotri) ಅವರನ್ನು ನೆಟ್ಟಿಗರು ಟೀಕೆ ಮಾಡಿದ್ದಾರೆ.
ಬಾಲಿವುಡ್ನಲ್ಲಿ ಎರಡು ಬಣಗಳಿವೆ. ದೀಪಿಕಾ ಪಡುಕೋಣೆ, ಶಾರುಖ್ ಖಾನ್ ಮುಂತಾದವರನ್ನು ವಿವೇಕ್ ಅಗ್ನಿಹೋತ್ರಿ, ಕಂಗನಾ ರಣಾವತ್ ಮೊದಲಾದ ಸೆಲೆಬ್ರಿಟಿಗಳು ವಿರೋಧಿಸುತ್ತಲೇ ಬಂದಿದ್ದಾರೆ. ಆದರೆ ಏಕಾಏಕಿ ದೀಪಿಕಾ ಅವರನ್ನು ವಿವೇಕ್ ಅಗ್ನಿಹೋತ್ರಿ ಹೊಗಳಿರುವುದು ಅನೇಕರಿಗೆ ಅಚ್ಚರಿ ಮೂಡಿಸಿದೆ. ಹಾಗಾಗಿ ಅವರನ್ನು ಟ್ರೋಲ್ ಮಾಡಲಾಗಿದೆ. ಅದಕ್ಕೆ ವಿವೇಕ್ ಅಗ್ನಿಹೋತ್ರಿ ಪ್ರತಿಕ್ರಿಯೆ ನೀಡಿದ್ದಾರೆ.
‘ನಿಮ್ಮ ಸಹಮತ ಇಲ್ಲದೇ ಇದ್ದಾಗ ಯಾರನ್ನಾದರೂ ಟೀಕಿಸುವುದು ಮತ್ತು ಅವರ ಕೆಲಸ ಇಷ್ಟ ಆದಾಗ ಮೆಚ್ಚುಗೆ ಸೂಚಿಸುವುದನ್ನು ಈ ಹೊಸ ಯುಗದಲ್ಲಿ ದ್ವಂದ್ವ ನೀತಿ ಎಂದು ಕರೆಯುತ್ತಾರೆ. ನಾನು ಅದನ್ನು ನ್ಯಾಯಸಮ್ಮತವಾದದ್ದು ಎಂದುಕೊಂಡಿದ್ದೇನೆ. ಭಾರತದ ಹೆಸರಿಗೆ ಗೌರವ ತರುವ ಎಲ್ಲರೂ ಮೆಚ್ಚುಗೆಗೆ ಅರ್ಹರು’ ಎಂದು ವಿವೇಕ್ ಅಗ್ನಿಹೋತ್ರಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಪಿಎಂ ಮೋದಿ ಸೂಚನೆಯನ್ನು ಟೀಕಿಸಿದ ಅನುರಾಗ್ ಕಶ್ಯಪ್ಗೆ ತಿರುಗೇಟು ಕೊಟ್ಟ ವಿವೇಕ್ ಅಗ್ನಿಹೋತ್ರಿ
ಅನುಪಮ್ ಖೇರ್ ಕೂಡ ದೀಪಿಕಾ ಪಡುಕೋಣೆಗೆ ಮೆಚ್ಚುಗೆ ಸೂಚಿಸಿದ್ದಾರೆ. ‘ಪ್ರೀತಿಯ ದೀಪಿಕಾ ಪಡುಕೋಣೆ.. ಈ ವರ್ಷ ಆಸ್ಕರ್ ಪ್ರೆಸೆಂಟರ್ಗಳಲ್ಲಿ ನೀವೂ ಒಬ್ಬರಾಗಿರುವುದಕ್ಕೆ ಅಭಿನಂದನೆಗಳು. ನೀವು ಸಾಧನೆಯ ಪ್ರತಿ ಮೆಟ್ಟಿಲನ್ನು ಏರಿದಾಗ ನಿಮ್ಮ ಪಯಣದಲ್ಲಿ ನಾವೂ ಭಾಗಿ ಆಗಿದ್ದೇವೆ ಎಂಬ ಹೆಮ್ಮೆ ನಮಗಿದೆ’ ಎಂದು ಅನುಪಮ್ ಖೇರ್ ಟ್ವೀಟ್ ಮಾಡಿದ್ದಾರೆ.
ಈ ಹಿಂದೆ ನಟಿ ಪ್ರಿಯಾಂಕಾ ಚೋಪ್ರಾ ಅವರು ಆಸ್ಕರ್ ಪ್ರಶಸ್ತಿ ಪ್ರದಾನ ಮಾಡಿದ್ದರು. ಈಗ ದೀಪಿಕಾ ಪಡುಕೋಣೆ ಅವರಿಗೆ ಆ ಅವಕಾಶ ಸಿಗುತ್ತಿದೆ. ತಮಗೆ ಈ ಚಾನ್ಸ್ ಸಿಕ್ಕಿದೆ ಎಂಬುದನ್ನು ದೀಪಿಕಾ ಪಡುಕೋಣೆ ಅವರು ಸೋಶಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ. ಅದಕ್ಕೆ ಸೆಲೆಬ್ರಿಟಿಗಳು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ದೀಪಿಕಾ ಪತಿ ರಣವೀರ್ ಸಿಂಗ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ನಟಿ ನೇಹಾ ಧೂಪಿಯಾ ಅವರು, ‘ನಿಮ್ಮನ್ನು ನೋಡಲು ಕಾಯುತ್ತಿದ್ದೇನೆ ದೀಪು’ ಎಂದು ಕಮೆಂಟ್ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:09 pm, Sun, 5 March 23