Deepika Padukone: ಆಸ್ಕರ್ ಪ್ರಶಸ್ತಿ ನೀಡಲು ವೇದಿಕೆ ಏರಲಿರುವ ದೀಪಿಕಾ ಪಡುಕೋಣೆ; ಹಾಲಿವುಡ್ ಮಂದಿ ಜೊತೆ ಅವಕಾಶ
95th Academy Awards | Oscars 2023: ಮಾರ್ಚ್ 12ರಂದು ಲಾಸ್ ಏಂಜಲಿಸ್ನಲ್ಲಿ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಪ್ರಶಸ್ತಿ ವಿಜೇತರಿಗೆ ಈ ವೇದಿಕೆಯಲ್ಲಿ ನಟಿ ದೀಪಿಕಾ ಪಡುಕೋಣೆ ಅವರು ಟ್ರೋಫಿ ನೀಡಲಿದ್ದಾರೆ.
ನಟಿ ದೀಪಿಕಾ ಪಡುಕೋಣೆ (Deepika Padukone) ಅವರು ದಿನದಿಂದ ದಿನಕ್ಕೆ ಖ್ಯಾತಿ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಭಾರತದಲ್ಲಿ ಮಾತ್ರವಲ್ಲದೇ ವಿದೇಶದಲ್ಲೂ ಅವರಿಗೆ ಅಭಿಮಾನಿಗಳು ಇದ್ದಾರೆ. ಹಾಲಿವುಡ್ ಮಂದಿಗೂ ಅವರ ಪರಿಚಯ ಇದೆ. ಜಾಗತಿಕ ಮಟ್ಟದ ಪ್ರತಿಷ್ಠಿತ ವೇದಿಕೆಗಳಲ್ಲೂ ದೀಪಿಕಾ ಪಡುಕೋಣೆ ಅವರಿಗೆ ಅವಕಾಶಗಳು ಸಿಗುತ್ತಿದೆ. ವಿದೇಶದಲ್ಲಿನ ಅನೇಕ ಸಿನಿಮೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ಅವರು ಮಿಂಚಿದ್ದಾರೆ. ಈಗ ಅವರಿಗೆ ಆಸ್ಕರ್ (Oscar Awards) ವೇದಿಕೆ ಏರುವ ಅವಕಾಶ ಸಿಕ್ಕಿದೆ. ಹಲವು ಹಾಲಿವುಡ್ ಸೆಲೆಬ್ರಿಟಿಗಳ ಜೊತೆ ಇಂಥ ಅವಕಾಶ ಪಡೆದ ಭಾರತದ ಸೆಲೆಬ್ರಿಟಿ ಎಂಬ ಖ್ಯಾತಿಗೆ ಅವರು ಪಾತ್ರರಾಗುತ್ತಿದ್ದಾರೆ. ಈ ಸುದ್ದಿ ಕೇಳಿ ದೀಪಿಕಾ ಪಡುಕೋಣೆ ಫ್ಯಾನ್ಸ್ ಖುಷಿ ಆಗಿದ್ದಾರೆ. 95ನೇ ಅಕಾಡೆಮಿ ಅವಾರ್ಡ್ಸ್ (95th Academy Awards) ಕಾರ್ಯಕ್ರಮದಲ್ಲಿ ಆಸ್ಕರ್ ಪ್ರಶಸ್ತಿ ಗೆದ್ದವರಿಗೆ ದೀಪಿಕಾ ಪಡುಕೋಣೆ ಅವರು ಟ್ರೋಫಿ ನೀಡಲಿದ್ದಾರೆ.
ಈ ಹಿಂದೆ ನಟಿ ಪ್ರಿಯಾಂಕಾ ಚೋಪ್ರಾ ಅವರು ಆಸ್ಕರ್ ಪ್ರಶಸ್ತಿ ಪ್ರದಾನ ಮಾಡಿದ್ದರು. ಈಗ ದೀಪಿಕಾ ಪಡುಕೋಣೆ ಅವರಿಗೆ ಆ ಅವಕಾಶ ಸಿಗುತ್ತಿದೆ. ಮಾರ್ಚ್ 12ರಂದು ಲಾಸ್ ಏಂಜಲಿಸ್ನ ಡಾಲ್ಬಿ ಥಿಯೇಟರ್ನಲ್ಲಿ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಹಲವು ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ. ಆ ಪೈಕಿ ಒಂದು ವಿಭಾಗದಲ್ಲಿ ಪ್ರಶಸ್ತಿ ಗೆದ್ದವರಿಗೆ ದೀಪಿಕಾ ಪಡುಕೋಣೆ ಅವರು ಟ್ರೋಫಿ ಹಸ್ತಾಂತರಿಸಲಿದ್ದಾರೆ.
ಇದನ್ನೂ ಓದಿ: ‘ಪಠಾಣ್’ ಗೆದ್ದಿದ್ದಕ್ಕೆ ಶಾರುಖ್ ಖಾನ್ಗೆ ದೀಪಿಕಾ ಸಿಹಿ ಮುತ್ತು
ತಮಗೆ ಈ ಚಾನ್ಸ್ ಸಿಕ್ಕಿದೆ ಎಂಬುದನ್ನು ದೀಪಿಕಾ ಪಡುಕೋಣೆ ಅವರು ಸೋಶಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ. ಅದಕ್ಕೆ ಸೆಲೆಬ್ರಿಟಿಗಳು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ದೀಪಿಕಾ ಪತಿ ರಣವೀರ್ ಸಿಂಗ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ನಟಿ ನೇಹಾ ಧೂಪಿಯಾ ಅವರು, ‘ನಿಮ್ಮನ್ನು ನೋಡಲು ಕಾಯುತ್ತಿದ್ದೇನೆ ದೀಪು’ ಎಂದು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ವಿಮಾನದಲ್ಲಿ ಜನಸಾಮಾನ್ಯರ ಜೊತೆ ಪ್ರಯಾಣಿಸಿದ ದೀಪಿಕಾ ಪಡುಕೋಣೆ; ಗುರುತು ತಿಳಿಯದಂತೆ ಮಾಡಲು ನಟಿ ಮಾಡಿದ್ದೇನು?
ದೀಪಿಕಾ ಪಡುಕೋಣೆ ಅವರು ಈ ವರ್ಷ ಆರಂಭದಲ್ಲಿಯೇ ಗೆಲುವಿನ ನಗು ಬೀರಿದ್ದಾರೆ. ಶಾರುಖ್ ಖಾನ್ ಜೊತೆ ಅವರು ನಟಿಸಿದ ‘ಪಠಾಣ್’ ಚಿತ್ರ ಸೂಪರ್ ಹಿಟ್ ಆಗಿದೆ. ಅದರ ಬೆನ್ನಲ್ಲೇ ಆಸ್ಕರ್ ವೇದಿಕೆ ಏರುವ ಅವಕಾಶ ಸಿಗುತ್ತಿರುವುದರಿಂದ ಅವರ ಚಾರ್ಮ್ ಹೆಚ್ಚಿದೆ.
View this post on Instagram
ಈ ಬಾರಿ ಭಾರತದ ಪಾಲಿಗೆ ಆಸ್ಕರ್ ಪ್ರಶಸ್ತಿ ಸಮಾರಂಭ ವಿಶೇಷ ಎನಿಸಿಕೊಂಡಿದೆ. ಯಾಕೆಂದರೆ, ‘ಆರ್ಆರ್ಆರ್’ ಚಿತ್ರದ ‘ನಾಟು ನಾಟು..’ ಹಾಡು ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ನಾಮಿನೇಟ್ ಆಗಿದೆ. ಭಾರತದ ‘ಆಲ್ ದಟ್ ಬ್ರೀಥ್ಸ್’, ‘ದಿ ಎಲಿಫೆಂಟ್ ವಿಸ್ಪರರ್ಸ್’ ಕಿರುಚಿತ್ರಗಳು ಕೂಡ ನಾಮಿನೇಟ್ ಆಗಿದ್ದು, ಭಾರತಕ್ಕೆ ಈ ಬಾರಿ ಆಸ್ಕರ್ ಗೆಲ್ಲುವ ಚಾನ್ಸ್ ದಟ್ಟವಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.