ಗೀತ ಸಾಹಿತಿ ಜಾವೇದ್ ಅಖ್ತರ್ (Javed Akhtar) ಅವರು ತಮ್ಮ ನೇರ ನುಡಿಗಳಿಂದಲೇ ಫೇಮಸ್ ಆದವರು. ಅವರು ಇತ್ತೀಚೆಗೆ ಸಾಕಷ್ಟು ಸುದ್ದಿ ಆಗುತ್ತಿದ್ದಾರೆ. ಪಾಕಿಸ್ತಾನಕ್ಕೆ ತೆರಳಿ ಓಪನ್ ವೇದಿಕೆ ಮೇಲೆ ಪಾಕಿಸ್ತಾನದವರನ್ನು, ಉಗ್ರರಿಗೆ ಪಾಕಿಸ್ತಾನ ನೀಡುವ ಬೆಂಬಲವನ್ನು ಖಂಡಿಸಿದ್ದರು. ಈ ಹೇಳಿಕೆಗೆ ಭಾರತದವರಿಂದ ಭರ್ಜರಿ ಬೆಂಬಲ ಸಿಕ್ಕಿತ್ತು. ಈ ವಿಚಾರದ ಬಗ್ಗೆ ಜಾವೇದ್ ಅಖ್ತರ್ ಮಾತನಾಡಿದ್ದಾರೆ. ‘ಸತ್ಯ ಹೇಳೋಕೆ ನಾವೇಕೆ ಹೆದರಬೇಕು’ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಕಾರ್ಯಕ್ರಮ ಒಂದಕ್ಕಾಗಿ ಪಾಕಿಸ್ತಾನದ ಲಾಹೋರ್ಗೆ ತೆರಳಿದ್ದ ಜಾವೇದ್ ಅವರು, ‘ಮುಂಬೈ ದಾಳಿ ಹೇಗಾಯ್ತು ಎಂದು ನೋಡಿದ್ದೇವೆ. ಆ ಉಗ್ರರು ನಾರ್ವೆಯಿಂದಲೋ, ಈಜಿಪ್ಟ್ನಿಂದಲೋ ಬಂದವರಲ್ಲ. ಪಾಕಿಸ್ತಾನದಿಂದಲೇ ಬಂದವರು. ಈಗಲೂ ಅವರು ಆರಾಮವಾಗಿ ಓಡಾಡಿಕೊಂಡಿದ್ದಾರೆ’ ಎಂದು ನೇರ ಮಾತುಗಳಲ್ಲಿ ಹೇಳಿದ್ದರು. ಇದಕ್ಕೆ ಪಾಕ್ನ ಅನೇಕ ಸೆಲೆಬ್ರಿಟಿಗಳು ಕಿಡಿಕಾರಿದ್ದಾರೆ. ‘ಅವರಿಗೆ ಇಲ್ಲಿಗೆ ಬರೋಕೆ ವೀಸಾ ಕೊಟ್ಟಿದ್ದು ಯಾರು’ ಎಂದು ಪ್ರಶ್ನಿಸಲಾಗಿತ್ತು.
ಈ ಬಗ್ಗೆ ಎಬಿಪಿ ಕಾರ್ಯಕ್ರಮದಲ್ಲಿ ಮಾತನಾಡಿರುವ ಜಾವೇದ್ ಅವರು, ‘ನನ್ನ ಹೇಳಿಕೆ ದೊಡ್ಡ ಮಟ್ಟದಲ್ಲಿ ಚರ್ಚೆ ಆಯಿತು. ನಾನು ಅಲ್ಲಿಗೆ ಹೋಗಲೇ ಬಾರದಿತ್ತು ಎಂದೆಲ್ಲ ಅನಿಸಿತು. ಆದರೆ, ಇಲ್ಲಿಗೆ ಬಂದಮೇಲೆ ನನಗೆ ಮೂರನೇ ವಿಶ್ವ ಯುದ್ಧ ಗೆದ್ದಂತೆ ಅನಿಸಿತು. ಜನರಿಂದ, ಮಾಧ್ಯಮಗಳಿಂದ ಸಾಕಷ್ಟು ಪ್ರತಿಕ್ರಿಯೆ ಬಂದಿದ್ದವು. ನಾನು ಅಷ್ಟನ್ನು ಹೇಳಲೇಬೆಕಿತ್ತು. ನಾನು ಸುಮ್ಮನಿರಬೇಕಿತ್ತೇ?’ ಎಂದು ಪ್ರಶ್ನೆ ಮಾಡಿದ್ದಾರೆ ಅವರು.
‘ನನಗೆ ಗೊತ್ತು ಆ ರಾಷ್ಟ್ರದವರು ನನ್ನ ಮೇಲೆ ದ್ವೇಷ ಕಾರುತ್ತಿದ್ದಾರೆ. ನನ್ನ ದೇಶದಲ್ಲಿ ಇದ್ದುಕೊಂಡು ಈ ರೀತಿ ಹೇಳಿಕೆಯನ್ನು ನಾನು ಕೊಡಬಹುದು ಎಂದಾದರೆ ಎರಡು ದಿನಕ್ಕೋಸ್ಕರ ತೆರಳುವ ದೇಶದಲ್ಲಿದ್ದು ಈ ರೀತಿಯ ಹೇಳಿಕೆಯನ್ನು ನೀಡಲು ಭಯ ಏಕೆ? ನನಗೆ ಇಲ್ಲೇ ಭಯ ಇಲ್ಲ ಎಂದರೆ ಅಲ್ಲೇಕೆ ಭಯ ಬೀಳಲಿ’ ಎಂದು ಜಾವೇದ್ ಅಖ್ತರ್ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: Emergency: ಇಂದಿರಾ ಗಾಂಧಿ ಕುರಿತು ಸಿನಿಮಾ ಮಾಡಲು ಆಸ್ತಿ ಅಡವಿಟ್ಟ ಕಂಗನಾ ರಣಾವತ್
ಜಾವೇದ್ ಅವರು ಲಾಹೋರ್ಗೆ ಭೇಟಿ ನೀಡಿದಾಗ ಮುಂಬೈ ದಾಳಿಯ ಬಗ್ಗೆ ಮಾತನಾಡಿದ್ದರು. ಇದರ ಜೊತೆಗೆ ಕಲಾವಿದರು ಕಾರ್ಯಕ್ರಮ ನೀಡುವ ಬಗ್ಗೆ ಮಾತನಾಡಿದ್ದರು. ‘ಪಾಕಿಸ್ತಾನದ ಗಾಯಕರಾದ ನುಸ್ರತ್ ಮತ್ತು ಮೆಹದಿ ಹಸನ್ ಅವರು ಭಾರತದಲ್ಲಿ ದೊಡ್ಡ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಆದರೆ, ಲತಾ ಮಂಗೇಶ್ಕರ್ ಅವರಿಗೋಸ್ಕರ ನಿಮ್ಮ ದೇಶ ಯಾವತ್ತಾದರೂ ಕಾರ್ಯಕ್ರಮ ಆಯೋಜಿಸಿತ್ತಾ?’ ಎಂದು ಕೂಡ ಜಾವೇದ್ ಅಖ್ತರ್ ಪ್ರಶ್ನೆ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ