
ನಟಿ ಆಶು ರೆಡ್ಡಿ (Ashu Reddy) ವಿರುದ್ಧ 9.35 ಕೋಟಿ ರೂಪಾಯಿ ವಂಚನೆಯ ಆರೋಪ ಕೇಳಿ ಬಂದಿದೆ. ಹಲವು ತೆಲುಗು ಸಿನಿಮಾಗಳಲ್ಲಿ ನಟಿಸಿರುವ, ಬಿಗ್ಬಾಸ್ ತೆಲುಗು ಮಾಜಿ ಸ್ಪರ್ಧಿಯೂ ಆಗಿರುವ ಆಶು ರೆಡ್ಡಿ, ತೆಲುಗು ಚಿತ್ರರಂಗದ ಜನಪ್ರಿಯ ನಟಿಯರಲ್ಲಿ ಒಬ್ಬರು. ಒಂದು ಸಮಯದಲ್ಲಿ ಆಶು ರೆಡ್ಡಿ ಅವರನ್ನು ಸಮಂತಾ ಋತ್ ಪ್ರಭು ಅವರಿಗೆ ಹೋಲಿಕೆ ಮಾಡಲಾಗಿತ್ತು. ಇನ್ಸ್ಟಾಗ್ರಾಂ, ಯೂಟ್ಯೂಬ್ನಲ್ಲಿಯೂ ಸಖತ್ ಸದ್ದು ಮಾಡುವ ಆಶು ರೆಡ್ಡಿ ಮೇಲೆ ಇದೀಗ ಅನಿವಾಸಿ ಭಾರತೀಯ ಯುವಕನೋರ್ವ ಬರೋಬ್ಬರಿ 9.35 ಕೋಟಿ ರೂಪಾಯಿ ವಂಚನೆ ಪ್ರಕರಣ ದಾಖಲಿಸಿದ್ದಾರೆ. ಆಶು ರೆಡ್ಡಿ ಮಾತ್ರವೇ ಅಲ್ಲದೆ ಅವರ ಕುಟುಂಬದ ಮೇಲೂ ಆರೋಪ ಮಾಡಿದ್ದಾನೆ ಯುವಕ.
ಹೈದರಾಬಾದ್‌ನ ಶೇಕ್‌ಪೇಟ್ ನಿವಾಸಿ ಸತ್ಯನಾರಾಯಣ ಎಂಬುವವರು ಹೈದರಾಬಾದ್‌ನ ಸೆಂಟ್ರಲ್ ಕ್ರೈಮ್ ಸ್ಟೇಷನ್ (CCS) ಪೊಲೀಸರಿಗೆ ನಟಿ ಆಶು ರೆಡ್ಡಿ ವಿರುದ್ಧ ದೂರು ನೀಡಿದ್ದಾರೆ. ಅವರ ಮಗ ಧರ್ಮೇಂದ್ರ ಲಂಡನ್‌ನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು, 2018ರಲ್ಲಿ ಹೈದರಾಬಾದ್‌ನಲ್ಲಿ ಧರ್ಮೇಂದ್ರ ಹಾಗೂ ಆಶು ರೆಡ್ಡಿ ನಡುವೆ ಪರಿಚಯವಾಗಿತ್ತು. ಈ ಸ್ನೇಹ ಮುಂದೆ ಪ್ರೇಮಕ್ಕೆ ತಿರುಗಿ, ಆಶು ರೆಡ್ಡಿ ಮದುವೆಯಾಗುವುದಾಗಿ ಭರವಸೆ ನೀಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ದೂರುದಾರರ ಪ್ರಕಾರ, 2018 ರಿಂದ 2025 ರ ಅವಧಿಯಲ್ಲಿ ಆಶು ರೆಡ್ಡಿ ವಿವಿಧ ಕಾರಣಗಳನ್ನು ನೀಡಿ ಧರ್ಮೇಂದ್ರ ಅವರಿಂದ ಸುಮಾರು 9.35 ಕೋಟಿ ರೂಪಾಯಿಗಳನ್ನು ಪಡೆದಿದ್ದಾರೆ. ಈ ಹಣದಲ್ಲಿ ಐಷಾರಾಮಿ ಕಾರುಗಳು, ಸುಮಾರು 5 ಕೆಜಿ ಚಿನ್ನ ಮತ್ತು ಹೈದರಾಬಾದ್‌ನ ಲಾಂಕೋ ಹಿಲ್ಸ್‌ನಂತಹ ಪ್ರದೇಶಗಳಲ್ಲಿ ಫ್ಲ್ಯಾಟ್‌ಗಳನ್ನು ಖರೀದಿಸಲಾಗಿದ್ದು, ಇವೆಲ್ಲವನ್ನೂ ಆಶು ರೆಡ್ಡಿ ಅವರ ಹೆಸರಿನಲ್ಲೇ ನೋಂದಣಿ ಮಾಡಿಸಲಾಗಿದೆ ಎಂದು ಆರೋಪಿಸಲಾಗಿದೆ. ಅಲ್ಲದೆ, ಅಶು ರೆಡ್ಡಿ ಅವರ ಸಹೋದರಿ ಕೂಡ 50 ಲಕ್ಷ ರೂಪಾಯಿ ಹಣ ಪಡೆದುಕೊಂಡಿದ್ದು ಅದನ್ನೂ ಸಹ ವಾಪಸ್ ನೀಡಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ:ತಮ್ಮ ತಂಡದ ಜೊತೆಗೆ ಸಖತ್ ಡ್ಯಾನ್ಸ್ ಮಾಡಿದ ನಟಿ ನೇಹಾ
ಈ ಹಿಂದೆ ನಟಿ ಆಶು ರೆಡ್ಡಿ ಮದುವೆಗೆ ನಿರಾಕರಿಸಿದಾಗ, ನಟಿ ಹೇಮಾ ಅವರ ಸಮ್ಮುಖದಲ್ಲಿ ಸಂಧಾನ ನಡೆದಿತ್ತು. ಆಗ 70 ಲಕ್ಷ ರೂಪಾಯಿ ಮರಳಿಸುವುದಾಗಿ ಒಪ್ಪಿ ಚೆಕ್ ನೀಡಿದ್ದರೂ, ನಂತರ ಆ ಚೆಕ್‌ಗಳನ್ನು ನಾಶಪಡಿಸಿ ವಂಚಿಸಿದ್ದಾರೆ ಎಂದು ಧರ್ಮೇಂದ್ರ ಕುಟುಂಬಸ್ಥರು ಆರೋಪಿಸಿದ್ದಾರೆ.
ಆಶು ರೆಡ್ಡಿ ಬಗ್ಗೆ ಆರೋಪಗಳು ಕೇಳಿ ಬಂದ ಬೆನ್ನಲ್ಲೆ ನಟಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿ ಮೂಲಕ ಇದಕ್ಕೆ ಪ್ರತಿಕ್ರಿಯೆ ನೀಡಿದ್ದು. ‘ನನ್ನ ಅನುಮತಿಯಿಲ್ಲದೆ ನನ್ನ ಬಗ್ಗೆ ಸುಳ್ಳು ಸುದ್ದಿ ಅಥವಾ ಆಧಾರರಹಿತ ಮಾಹಿತಿ ಹರಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಬರೆದುಕೊಂಡಿದ್ದಾರೆ. ಪ್ರಸ್ತುತ ಅವರು ಈ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದು, ಕಾನೂನುಬದ್ಧವಾಗಿ ಹೋರಾಡುವುದಾಗಿ ತಿಳಿಸಿದ್ದಾರೆ. ಆಶು ರೆಡ್ಡಿ ಈ ಹಿಂದೆ ಕೂಡ ವಿವಾದಗಳಲ್ಲಿ ಸಿಲುಕಿದ್ದರು. ಈ ಹಿಂದೆ ತೆಲಂಗಾಣದಲ್ಲಿ ಸದ್ದು ಮಾಡಿದ್ದ ಡ್ರಗ್ಸ್ ಪ್ರಕರಣವೊಂದರಲ್ಲಿ ಇವರ ಹೆಸರು ಕೇಳಿಬಂದಿತ್ತು. ಆದರೆ ಆಗಲೂ ಅವರು ತಮಗೂ ಆ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ಪ್ರಸ್ತುತ ಹೈದರಾಬಾದ್ ಪೊಲೀಸರು ಈ ವಂಚನೆ ಪ್ರಕರಣವನ್ನು ಆರ್ಥಿಕ ಅಪರಾಧಗಳ ವಿಭಾಗಕ್ಕೆ (EOW) ವರ್ಗಾಯಿಸಿದ್ದು, ತನಿಖೆ ತೀವ್ರಗೊಂಡಿದೆ. ನಟಿ ಆಶು ರೆಡ್ಡಿ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಒಂದು ವೇಳೆ ಈ ಆರೋಪಗಳು ಸಾಬೀತಾದಲ್ಲಿ, ನಟಿ ಕಾನೂನು ಸಂಕಷ್ಟಕ್ಕೆ ಸಿಲುಕುವುದು ಖಚಿತ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:17 pm, Sun, 26 April 26