ಚಿರಂಜೀವಿ ವಿರುದ್ಧ ಸುಳ್ಳು ಆರೋಪ: ನಟ ರಾಜಶೇಖರ್, ಪತ್ನಿ ಜೀವಿತಾಗೆ 1 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

|

Updated on: Jul 19, 2023 | 1:10 PM

Chiranjeevi: ‘ಚಿರಂಜೀವಿ ಬ್ಲಡ್ ಬ್ಯಾಂಕ್​ಗೆ ಬರುವ ರಕ್ತವನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ’ ಎಂದು ದಂಪತಿ ದೂರಿದ್ದರು. ಅಲ್ಲು ಅರವಿಂದ ಅವರು ಈ ದಂಪತಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ಚಿರಂಜೀವಿ ವಿರುದ್ಧ ಸುಳ್ಳು ಆರೋಪ: ನಟ ರಾಜಶೇಖರ್, ಪತ್ನಿ ಜೀವಿತಾಗೆ 1 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್
ನಾಗಶೇಖರ್-ಜೀವಿತಾ
Follow us on

ಚಿರಂಜೀವಿ (Chiranjeevi) ಬ್ಲಡ್ ಬ್ಯಾಂಕ್​ನಲ್ಲಿ ಅಕ್ರಮ ನಡೆದಿದೆ ಎಂದು ನಟ ರಾಜಶೇಖರ್ ಹಾಗೂ ಅವರ ಪತ್ನಿ ಜೀವಿತಾ ಆರೋಪ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಚಿರಂಜೀವಿ ಅವರ ಭಾವ ಅಲ್ಲು ಅರವಿಂದ್ ಅವರು ಕೋರ್ಟ್​ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಇದರ ವಿಚಾರಣೆ ಪೂರ್ಣಗೊಂಡಿದ್ದು, ತೀರ್ಪು ಪ್ರಕಟ ಆಗಿದೆ. ಸುಳ್ಳು ಆರೋಪ ಮಾಡಿದ ರಾಜಶೇಖರ್ ಹಾಗೂ ಜೀವಿತಾಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದ್ದು, ಐದು ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.

2011ರಲ್ಲಿ ರಾಜಶೇಖರ್ ಹಾಗೂ ಜೀವಿತಾ ಅವರು ಚಿರಂಜೀವಿ ವಿರುದ್ಧ ಆರೋಪ ಮಾಡಿದ್ದರು. ‘ಚಿರಂಜೀವಿ ಬ್ಲಡ್ ಬ್ಯಾಂಕ್​ಗೆ ಬರುವ ರಕ್ತವನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ’ ಎಂದು ದಂಪತಿ ದೂರಿದ್ದರು. ಅಲ್ಲು ಅರವಿಂದ ಅವರು ಈ ದಂಪತಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಹಲವು ವರ್ಷಗಳಿಂದ ಕೋರ್ಟ್​ನಲ್ಲಿ ಈ ಅರ್ಜಿ ವಿಚಾರಣೆ ನಡೆಯುತ್ತಲೇ ಇತ್ತು. ಜುಲೈ 18ರಂದು ತೀರ್ಪು ಹೊರಬಿದ್ದಿದೆ.

ನಾಂಪಲ್ಲಿ ಕೋರ್ಟ್​ನ ಮುಖ್ಯ ಮ್ಯಾಜಿಸ್ಟ್ರೇಟ್ ಅವರು ಜೀವಿತಾ ಹಾಗೂ ರಾಜಶೇಖರ್​ಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ ಅರ್ಜಿದಾರರಿಗೆ 5 ಲಕ್ಷ ರೂಪಾಯಿ ನೀಡುವಂತೆ ಆದೇಶ ಹೊರಡಿಸಿದರು. ಸದ್ಯ ದಂಪತಿ ಜಾಮೀನು ಪಡೆದು ಹೊರಬಂದಿದ್ದಾರೆ. ಇವರಿಗೆ ಹೈಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ ಇದೆ.

ರಾಜಶೇಖರ್-ಚಿರಂಜೀವಿ ಮಧ್ಯೆ ಈ ಮೊದಲಿನಿಂದಲೂ ದ್ವೇಷ ಇತ್ತು. ಇದನ್ನು ರಾಜಶೇಖರ್ ಆಗಾಗ ಪ್ರಕಟ ಮಾಡುತ್ತಲೇ ಇದ್ದರು. ಚಲನಚಿತ್ರ ಕಲಾವಿದರ ಸಂಘ (ಮಾ) ಕಾರ್ಯಕ್ರಮದಲ್ಲಿ ಚಿರಂಜೀವಿ ಹಾಗೂ ರಾಜಶೇಖರ್ ಭಾಗಿ ಆಗಿದ್ದರು. ಆ ಸಂದರ್ಭದಲ್ಲಿ ಮಾ ಅಧ್ಯಕ್ಷರಾಗಿದ್ದ ನರೇಶ್ ವಿರುದ್ಧ ರಾಜಶೇಖರ್ ಬಾಯಿಗೆ ಬಂದಂತೆ ಮಾತನಾಡಿದ್ದರು.

ಇದನ್ನೂ ಓದಿ: ಚಿರಂಜೀವಿ ಮಾಡಿದ ಒಳ್ಳೆಯ ಕೆಲಸಕ್ಕೆ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ; ನಟನ ಕೊಂಡಾಡಿದ ಫ್ಯಾನ್ಸ್

‘ನರೇಶ್ ಅವರಿಂದ ನಾನು ಹಣ ಕಳೆದುಕೊಂಡೆ, ಅವರಿಗೆ ನನಗೆ ಅವಕಾಶ ಕೂಡ ಇಲ್ಲದಂತಾಯಿತು’ ಎಂದು ರಾಜಶೇಖರ್ ವೇದಿಕೆ ಮೇಲೆ ದೂರಿದ್ದರು. ಇದನ್ನು ಚಿರಂಜೀವಿ ಅವರು ಖಂಡಿಸಿದ್ದರು. ‘ಈ ರೀತಿಯ ನಡವಳಿಕೆ ಸರಿ ಅಲ್ಲ. ರಾಜಶೇಖರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಎಚ್ಚರಿಕೆ ನೀಡಿದ್ದರು.  ಈ ರೀತಿಯ ಅನೇಕ ಘಟನೆಗಳು ನಡೆದಿವೆ. 2003ರಲ್ಲಿ ಇವರ ಮಧ್ಯೆ ದ್ವೇಷ ಆರಂಭ ಆಯಿತು ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 1:09 pm, Wed, 19 July 23