ತ್ರಿಶಾ ಜೊತೆಯಲ್ಲೇ ಬಂದು ಅಜಿತ್ ತಾಯಿಯ ಅಂತಿಮ ದರ್ಶನ ಪಡೆದ ಸಿಎಂ ವಿಜಯ್

ಅಭಿಮಾನಿಗಳ ನಡುವೆ ಎಷ್ಟೇ ಕಿತ್ತಾಟ ಇದ್ದರೂ ಅಜಿತ್ ಕುಮಾರ್ ಮತ್ತು ದಳಪತಿ ವಿಜಯ್ ಅವರು ಆಪ್ತವಾಗಿದ್ದಾರೆ. ಅವರ ಜೊತೆ ನಟಿ ತ್ರಿಶಾ ಅವರಿಗೂ ಉತ್ತಮ ಬಾಂಧವ್ಯ ಇದೆ. ಅಜಿತ್ ತಾಯಿಯ ಅಂತಿಮ ದರ್ಶನ ಪಡೆಯಲು ತ್ರಿಶಾ ಮತ್ತು ವಿಜಯ್ ಅವರು ಒಟ್ಟಾಗಿ ಆಗಮಿಸಿದ್ದಾರೆ.

ತ್ರಿಶಾ ಜೊತೆಯಲ್ಲೇ ಬಂದು ಅಜಿತ್ ತಾಯಿಯ ಅಂತಿಮ ದರ್ಶನ ಪಡೆದ ಸಿಎಂ ವಿಜಯ್
Ajith, Cm Vijay, Trisha Krishnan

Updated on: May 31, 2026 | 8:17 AM

ತಮಿಳು ಚಿತ್ರರಂಗದ ಖ್ಯಾತ ನಟ ಅಜಿತ್ ಕುಮಾರ್ (Ajith Kumar) ಅವರ ತಾಯಿ ಮೋಹಿನಿ ಮಣಿ (89) ಶನಿವಾರ (ಮೇ 30) ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ. ತಾಯಿಯನ್ನು ಕಳೆದುಕೊಂಡು ದುಃಖದಲ್ಲಿರುವ ಅಜಿತ್ ಕುಮಾರ್ ಅವರ ನಿವಾಸಕ್ಕೆ ತಮಿಳುನಾಡು ಮುಖ್ಯಮಂತ್ರಿ ಹಾಗೂ ಖ್ಯಾತ ನಟ ದಳಪತಿ ವಿಜಯ್ (CM Vijay) ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ. ಈ ವೇಳೆ ವಿಜಯ್ ಅವರೊಂದಿಗೆ ಖ್ಯಾತ ನಟಿ ತ್ರಿಶಾ ಕೃಷ್ಣನ್ (Trisha Krishnan) ಕೂಡ ಸಾಂತ್ವನ ಹೇಳಲು ಆಗಮಿಸಿದ್ದು ವಿಶೇಷವಾಗಿ ಗಮನ ಸೆಳೆದಿದೆ. ಈ ಸಂದರ್ಭದ ವಿಡಿಯೋ ಈಗ ವೈರಲ್ ಆಗಿದೆ.

ತಮಿಳುನಾಡಿನ ಮುಖ್ಯಮಂತ್ರಿಯಾದ ಬಳಿಕವೂ ತಮ್ಮ ಹಳೇ ಗೆಳೆಯ ಹಾಗೂ ಚಿತ್ರರಂಗದ ಸಹೋದ್ಯೋಗಿ ಅಜಿತ್ ಕುಮಾರ್ ಅವರ ಕುಟುಂಬಕ್ಕೆ ಸಾಂತ್ವನ ಹೇಳಲು ಬಂದ ಸಿಎಂ ವಿಜಯ್ ಅವರು ಅಜಿತ್ ಅವರನ್ನು ಆತ್ಮೀಯವಾಗಿ ಅಪ್ಪಿಕೊಂಡು ದುಃಖವನ್ನು ಹಂಚಿಕೊಂಡಿದ್ದಾರೆ. ವಿಜಯ್ ಅವರ ಜೊತೆಯಲ್ಲೇ ಆಗಮಿಸಿದ ತ್ರಿಶಾ ಕೂಡ ಅಜಿತ್ ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ. ಬಿಗಿ ಭದ್ರತೆಯ ನಡುವೆ ಇಬ್ಬರೂ ತಾರೆಯರು ಅಜಿತ್ ಮನೆಗೆ ಭೇಟಿ ನೀಡುತ್ತಿರುವ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿವೆ.

ಅಭಿಮಾನಿಗಳ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಎಷ್ಟೇ ಪೈಪೋಟಿ ಇದ್ದರೂ, ವಿಜಯ್ ಮತ್ತು ಅಜಿತ್ ಕುಮಾರ್ ನಡುವೆ ಮೊದಲಿನಿಂದಲೂ ಉತ್ತಮ ಬಾಂಧವ್ಯವಿದೆ. ತಮ್ಮ ವೃತ್ತಿಜೀವನದ ಆರಂಭದಲ್ಲಿ ‘ರಾಜಾತಿನ್ ಪಾರ್ವಯಿಲೆ’ ಸಿನಿಮಾದಲ್ಲಿ ಅವರಿಬ್ಬರೂ ಒಟ್ಟಿಗೆ ನಟಿಸಿದ್ದರು. ಇದು ಇವರಿಬ್ಬರೂ ಒಟ್ಟಿಗೆ ತೆರೆ ಹಂಚಿಕೊಂಡ ಏಕೈಕ ಚಿತ್ರವಾಗಿದೆ. ಇತ್ತೀಚೆಗಷ್ಟೇ ತಮಿಳುನಾಡು ಚುನಾವಣೆಯಲ್ಲಿ ವಿಜಯ್ ಭರ್ಜರಿ ಜಯ ಸಾಧಿಸಿದಾಗ ಅಜಿತ್ ಕುಮಾರ್ ಖುದ್ದಾಗಿ ಫೋನ್ ಮಾಡಿ ಶುಭ ಕೋರಿದ್ದರು ಎಂದು ವರದಿಯಾಗಿತ್ತು.

ಇನ್ನು ನಟಿ ತ್ರಿಶಾ ಕೂಡ ಅಜಿತ್ ಕುಮಾರ್ ಅವರೊಂದಿಗೆ ಸುದೀರ್ಘ ವೃತ್ತಿಪರ ಸಂಬಂಧ ಹೊಂದಿದ್ದಾರೆ. ‘ಜಿ’, ‘ಎನ್ನೈ ಅರಿಂದಾಲ್’ ಹಾಗೂ ಇತ್ತೀಚಿನ ‘ವಿಡಾಮುಯರ್ಚಿ’ ಸೇರಿದಂತೆ ಹಲವು ಚಿತ್ರಗಳಲ್ಲಿ ಅಜಿತ್‌ಗೆ ಜೋಡಿಯಾಗಿ ತ್ರಿಶಾ ನಟಿಸಿದ್ದಾರೆ. ಸಿನಿಮಾ ಮಾತ್ರವಲ್ಲದೇ ಅದರ ಆಚೆಗೂ ಅವರಿಬ್ಬರ ನಡುವೆ ಉತ್ತಮ ಸ್ನೇಹವಿದೆ.

ಇದನ್ನೂ ಓದಿ: ಸಿಎಂ ದಳಪತಿ ವಿಜಯ್ ಭೇಟಿಯಾದ ಲೋಕೇಶ್ ಕನಗರಾಜ್: ‘ಲಿಯೋ 2’ ನಿರೀಕ್ಷೆಯಲ್ಲಿ ಅಭಿಮಾನಿಗಳು

ಅಜಿತ್ ಕುಮಾರ್ ಅವರ ತಾಯಿ ಮೋಹಿನಿ ಮಣಿ ಶನಿವಾರ ಮುಂಜಾನೆ ನಿದ್ದೆಯಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ‘ಕಳೆದ ಕೆಲವು ವರ್ಷಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ನಮ್ಮ ತಾಯಿ ನಿದ್ದೆಯಲ್ಲೇ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ ಸೂಕ್ತ ಚಿಕಿತ್ಸೆ ಮತ್ತು ಕಾಳಜಿ ನೀಡಿದ ವೈದ್ಯಕೀಯ ಸಿಬ್ಬಂದಿಗೆ ನಾವು ಕೃತಜ್ಞರಾಗಿದ್ದೇವೆ’ ಎಂದು ಅಜಿತ್ ಸಹೋದರ ಅನಿಲ್ ಕುಮಾರ್ ತಿಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us