ಅಲ್ಲು ಅರ್ಜುನ್ ಭೇಟಿ ಮಾಡಲು 42 ಷರತ್ತು: ನಿಜ ಏನೆಂದು ಹೇಳಿದ ಸಹ ನಟ

Allu Arjun movie: ಅಲ್ಲು ಅರ್ಜುನ್ ಬಗ್ಗೆ ಚಿತ್ರರಂಗದ ಕೆಲವರೇ ಋಣಾತ್ಮಕ ಸುದ್ದಿಗಳನ್ನು ಹಬ್ಬಿಸುವ ಮೂಲಕ ಅವರ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗಷ್ಟೆ 42 ನಿಯಮಗಳನ್ನು ಅಲ್ಲು ಅರ್ಜುನ್ ಹಾಕಿದ್ದಾರೆ ಎಂಬ ಸುಳ್ಳು ಸುದ್ದಿ ಹರಿದಾಡಿತ್ತು. ಇದೀಗ ಅಲ್ಲು ಅರ್ಜುನ್ ಅವರ ಸಹ ನಟರೊಬ್ಬರು ಈ ಬಗ್ಗೆ ಮಾತನಾಡಿದ್ದಾರೆ. ಸತ್ಯ ಏನೆಂದು ಹೇಳಿದ್ದಾರೆ.

ಅಲ್ಲು ಅರ್ಜುನ್ ಭೇಟಿ ಮಾಡಲು 42 ಷರತ್ತು: ನಿಜ ಏನೆಂದು ಹೇಳಿದ ಸಹ ನಟ
Allu Arjun

Updated on: Feb 15, 2026 | 7:30 PM

ಅಲ್ಲು ಅರ್ಜುನ್ (Allu Arjun) ಪ್ಯಾನ್ ಇಂಡಿಯಾ ಸ್ಟಾರ್ ನಟ. ‘ಪುಷ್ಪ’ ಮತ್ತು ‘ಪುಷ್ಪ 2’ ಸಿನಿಮಾಗಳ ಬಳಿಕ ಅವರ ಜನಪ್ರಿಯತೆ ವಿಶ್ವಮಟ್ಟದಲ್ಲಿ ಹರಡಿದೆ. ಇದೀಗ ಅಟ್ಲಿ ಜೊತೆಗೆ ಭಿನ್ನ ರೀತಿಯ ಸಿನಿಮಾ ಮಾಡುತ್ತಿದ್ದು, ಆ ಸಿನಿಮಾ ಅಲ್ಲು ಅರ್ಜುನ್ ಅನ್ನು ಹಾಲಿವುಡ್ ಲೆವೆಲ್ ಸ್ಟಾರ್ ಮಾಡಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅಲ್ಲು ಅರ್ಜುನ್ ಜನಪ್ರಿಯತೆ ದಿನದಿಂದ ದಿನಕ್ಕೆ ಏರುತ್ತಲೇ ಹೋಗುತ್ತಿರುವ ಹೊತ್ತಿನಲ್ಲಿಯೇ ಅವರನ್ನು ತುಳಿಯುವ ಪ್ರಯತ್ನಗಳು ಸಹ ತೆರೆ ಮರೆಯಲ್ಲಿ ನಡೆಯುತ್ತಿರುವಂತೆ ತೋರುತ್ತಿದೆ. ಇದಕ್ಕೆ ತಾಜಾ ಉದಾಹರಣೆಯೆಂದರೆ ಇತ್ತೀಚೆಗಷ್ಟೆ ಅಲ್ಲು ಅರ್ಜುನ್ ಬಗ್ಗೆ ಸುಳ್ಳು ಸುದ್ದಿಯೊಂದನ್ನು ಹಬ್ಬಿಸಲಾಗಿತ್ತು.

ಅಲ್ಲು ಅರ್ಜುನ್ ಅವರನ್ನು ಯಾರೇ ಭೇಟಿ ಆಗಬೇಕೆಂದರೂ ಅವರು 42 ನಿಯಮಗಳನ್ನು ಪಾಲಿಸಬೇಕು, ಅವರಿಂದ ದೂರ ನಿಂತೇ ಮಾತನಾಡಬೇಕು, ಅವರ ಕಣ್ಣಲ್ಲಿ ಕಣ್ಣಿಟ್ಟು ನೋಡಬಾರದು, ಅವರೊಟ್ಟಿಗೆ ಸೆಲ್ಫಿ ಕೇಳಬಾರದು, ಅವರೊಟ್ಟಿಗೆ ಮಾತನಾಡಬಾರದು ಇನ್ನೂ ಏನೇನೋ ನಿಯಮಗಳನ್ನು ಎಲ್ಲರೂ ಪಾಲಿಸಬೇಕು, ಅಲ್ಲು ಅರ್ಜುನ್ ಅವರೇ ಸ್ವತಃ ಈ ನಿಯಮಗಳನ್ನು ಹೇರಿದ್ದಾರೆ ಎಂದೆಲ್ಲ ಸುದ್ದಿಗಳನ್ನು ಹರಿಬಿಡಲಾಗಿತ್ತು. ಆದರೆ ಅಲ್ಲು ಅರ್ಜುನ್ ತಂಡ ಇದನ್ನು ಅಪ್ಪಟ ಸುಳ್ಳೆಂದು ಸ್ಪಷ್ಟನೆ ನೀಡಿದ್ದು ಮಾತ್ರವಲ್ಲದೆ, ಈ ರೀತಿಯ ಸುಳ್ಳು ಸುದ್ದಿ ಹರಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ಸಹ ನೀಡಿತ್ತು.

ಇದೀಗ ಅಲ್ಲು ಅರ್ಜುನ್ ಜೊತೆಗೆ ನಟನೆ ಮಾಡಿರುವ ನಟರೊಬ್ಬರು ಅಲ್ಲು ಅರ್ಜುನ್ ನಿಜಕ್ಕೂ ಸೆಟ್​​ನಲ್ಲಿ ಅಂಥಹಾ ನಿಯಮ ಹೇರಿದ್ದಾರೆಯೇ ಅಲ್ಲು ಅರ್ಜುನ್ ಸೆಟ್​​ನಲ್ಲಿ ಯಾರೊಟ್ಟಿಗೂ ಬೆರೆಯುವುದಿಲ್ಲವೇ ಇತರೆ ವಿಷಯಗಳ ಬಗ್ಗೆ ತಾವು ಕಂಡಿದ್ದನ್ನು ಹೇಳಿದ್ದಾರೆ. ಮಲಯಾಳಂ ಮೂಲದ ನಟ ಶಿವ ಹರಿಹರನ್ ಇತ್ತೀಚೆಗೆ ಜಾಹೀರಾತೊಂದಕ್ಕಾಗಿ ಅಲ್ಲು ಅರ್ಜುನ್ ಅವರೊಟ್ಟಿಗೆ ನಟನೆ ಮಾಡಿದ್ದರಂತೆ. ಅವರು ಅಲ್ಲು ಅರ್ಜುನ್ ಬಗ್ಗೆ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದು, ಅಲ್ಲು ಅರ್ಜುನ್ ಬಗ್ಗೆ ಹರಿದಾಡುತ್ತಿರುವ 42 ನಿಯಮಗಳ ಸುದ್ದಿ ಅಪ್ಪಟ ಸುಳ್ಳು ಎಂದಿದ್ದಾರೆ.

ಇದನ್ನೂ ಓದಿ:ಅಲ್ಲು ಅರ್ಜುನ್ ಭೇಟಿಗೆ ಇವೆ ಕಠಿಣ 42 ನಿಯಮಗಳು? ನಟನ ಪ್ರತಿಕ್ರಿಯೆ ಏನು?

ಅಲ್ಲು ಅರ್ಜುನ್ ಜೊತೆಗಿನ ಕೆಲವು ಚಿತ್ರಗಳನ್ನು ಹಂಚಿಕೊಂಡಿರುವ ನಟ ಶಿವ ಹರಿಹರನ್, ಅಲ್ಲು ಅರ್ಜುನ್ ಬಹಳ ಮಾನವೀಯ ಮತ್ತು ಬಹಳ ಸ್ನೇಹಮಯ ವ್ಯಕ್ತಿತ್ವ ಉಳ್ಳ ವ್ಯಕ್ತಿ ಎಂದಿದ್ದಾರೆ. ‘ನಾನು ಕೆಲಸ ಮಾಡಿರುವ ಅತ್ಯಂತ ಕೂಲ್ ಮತ್ತು ಮಾನವೀಯ ನಟರಲ್ಲಿ ಅಲ್ಲು ಅರ್ಜುನ್ ಒಬ್ಬರು. ಅವರು ನಿಜವಾಗಿಯೂ ಮಾನವೀಯತೆ ಉಳ್ಳ ವ್ಯಕ್ತಿ, ಶೂಟಿಂಗ್ ಸಮಯದಲ್ಲಿ ನಾವು ಅವರೊಂದಿಗೆ ಫೋಟೋ ಕೇಳಲು ಹಿಂಜರಿಯುತ್ತೇವೆ ಎಂದು ಅರ್ಥಮಾಡಿಕೊಂಡು, ಸ್ವತಃ ನಿಮಗೆ ಫೋಟೋ ಬೇಕಾ ಎಂದು ಕೇಳಿದರು, ಚಿತ್ರೀಕರಣದ ನಂತರ ಕಾದಿದ್ದು ನಮಗೆ ಫೋಟೋ ನೀಡಿದರು ಮಾತ್ರವಲ್ಲದೆ ನಮಗೆ ಫೋಟೊಗಳು ಸಿಕ್ಕವೆ ಎಂದು ಮ್ಯಾನೇಜರ್ ಮೂಲಕ ಖಚಿತಪಡಿಸಿಕೊಂಡರು. ‘ಹ್ಯಾಪಿ’ ಸಿನಿಮಾದ ಬಳಿಕ ಅವರ ಎಲ್ಲಾ ಇತರ ಮಲಯಾಳಿ ಅಭಿಮಾನಿಗಳಂತೆ ಈಗ ಅಭಿಮಾನಿಗಳ ಸಂಖ್ಯೆ ದ್ವಿಗುಣಗೊಂಡಿದೆ’ ಎಂದಿದ್ದಾರೆ ನಟ ಶಿವ ಹರಿಹರನ್.

ಅಲ್ಲು ಅರ್ಜುನ್ ಪ್ರಸ್ತುತ ಅಟ್ಲಿ ನಿರ್ದೇಶನದ ಹೊಸ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಸಿನಿಮಾಕ್ಕೆ ಅಟ್ಲಿ ನಿರ್ದೇಶಕ ಸಿನಿಮಾನಲ್ಲಿ ದೀಪಿಕಾ ಪಡುಕೋಣೆ ನಾಯಕಿ. ಅದೇ ಸಿನಿಮಾನಲ್ಲಿ ರಶ್ಮಿಕಾ ಸಹ ಮುಖ್ಯವಾದ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾದ ಕತೆ ಹಾಲಿವುಡ್​ನ ‘ಗಾರ್ಡಿಯನ್ಸ್ ಆಫ್ ದಿ ಗ್ಯಾಲೆಕ್ಸಿ’ ಮಾದರಿಯಲ್ಲಿ ಇರಲಿದೆ ಎನ್ನಲಾಗುತ್ತಿದೆ. ಸಿನಿಮಾಕ್ಕೆ ಸನ್ ಪಿಕ್ಚರ್ಸ್ ಬಂಡವಾಳ ಹೂಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ