‘ಟಾಕ್ಸಿಕ್ ಚಿತ್ರದಿಂದ ನನಗೆ ಲಾಭವೇ ಆಗಿದೆ’; ಅಚ್ಚರಿಯ ಮಾಹಿತಿ ರಿವೀಲ್ ಮಾಡಿದ ದಿಲ್ ರಾಜು
ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಸೋತರೂ ತಮಗೆ ಯಾವುದೇ ನಷ್ಟವಾಗಿಲ್ಲ ಎಂದು ವಿತರಕ ದಿಲ್ ರಾಜು ಸ್ಪಷ್ಟಪಡಿಸಿದ್ದಾರೆ. ವಿತರಣೆಯಿಂದ ತಮಗೆ ಲಾಭವೇ ಆಗಿದೆ ಎಂದಿರುವ ಅವರು, ತಮ್ಮ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಪೇಯ್ಡ್ ಪ್ರಮೋಷನ್ ಮೂಲಕ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಮುಖ್ಯಾಂಶಗಳು
- 'ಟಾಕ್ಸಿಕ್' ಸೋತರೂ ನಷ್ಟವಿಲ್ಲ
- ವಿತರಣೆಯಿಂದ ಲಾಭ ಗಳಿಸಿದ್ದೇನೆ ಎಂದ ದಿಲ್ ರಾಜು
- ಸೋಶಿಯಲ್ ಮೀಡಿಯಾ ಅಪಪ್ರಚಾರಕ್ಕೆ ತಿರುಗೇಟು
ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್‘ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಈ ಚಿತ್ರದ ವಿತರಣೆಯಿಂದ ನಿರ್ಮಾಪಕರಿಗೆ ಹಾಗೂ ಹಂಚಿಕೆದಾರರಿಗೆ ಭಾರಿ ನಷ್ಟವಾಗಿದೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಈ ವದಂತಿಗಳಿಗೆ ಖ್ಯಾತ ನಿರ್ಮಾಪಕ ದಿಲ್ ರಾಜು ತೆರೆ ಎಳೆದಿದ್ದಾರೆ. ಸಿನಿಮಾ ಸೋತರೂ ತಮಗೆ ಯಾವುದೇ ನಷ್ಟವಾಗಿಲ್ಲ. ಬದಲಾಗಿ ತಾವು ಲಾಭವನ್ನೇ ಗಳಿಸಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗೆ ತೆರೆಕಂಡ ‘ರಾಮಾಯಣ’ ಮತ್ತು ‘ಸೀನ್’ ಚಿತ್ರಗಳು ನಿಜಾಮ್ ಪ್ರದೇಶದಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿವೆ. ಈ ಎರಡೂ ಚಿತ್ರಗಳ ಹಂಚಿಕೆ ಜವಾಬ್ದಾರಿ ಹೊತ್ತಿರೋ ದಿಲ್ ರಾಜು ಮಾಧ್ಯಮಗಳೊಂದಿಗೆ ಮಾತನಾಡಿದರು. ದಿಲ್ ರಾಜು ಅವರು ತೆಲುಗಿನಲ್ಲಿ ‘ಟಾಕ್ಸಿಕ್’ ಚಿತ್ರವನ್ನು ವಿತರಣೆ ಮಾಡಿದ್ದರು.
‘ಟಾಕ್ಸಿಕ್ ಸೋತಾಗ ನನಗೆ ನಷ್ಟ ಆಗಿದೆ ಎಂದು ಕೆಲವರು ಅಪಪ್ರಚಾರ ಮಾಡಿದರು. ಆದರೆ ವಿತರಕನಾಗಿ ನನಗೆ ಸಿಗಬೇಕಾದ ಪಾಲು ಸಿಕ್ಕಿದೆ. ಚಿತ್ರ ಸೋತ ತಕ್ಷಣ ವಿತರಕರಿಗೆ ನಷ್ಟವಾಗುತ್ತದೆ ಎನ್ನುವುದು ತಪ್ಪು ಕಲ್ಪನೆ’ ಎಂದು ಅವರು ವಿವರಿಸಿದ್ದಾರೆ.
SURPRISE…!
#YASH’s recent debacle #TOXIC turned into a profitable venture for #DilRaju in the Telugu States. https://t.co/j0q8uXOrD0
— Rangasthalam (@RangasthalamIN) November 13, 2026
ಸೋಶಿಯಲ್ ಮೀಡಿಯಾದಲ್ಲಿ ತಮ್ಮ ವಿರುದ್ಧ ನಡೆಯುತ್ತಿರುವ ಪ್ರಚಾರಕ್ಕೂ ದಿಲ್ ರಾಜು ತಿರುಗೇಟು ನೀಡಿದ್ದಾರೆ. ‘ಟಾಕ್ಸಿಕ್ ಫಲಿತಾಂಶದಿಂದ ನನಗೆ ನಷ್ಟವಾಗಿದೆ ಎಂದು ಕೆಲವರು ಪೇಯ್ಡ್ ಪ್ರಮೋಷನ್ ಮಾಡಿಸಿದ್ದಾರೆ. ನಾನು ಇವೆಲ್ಲದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ . ಆದರೆ ಸಾಮಾಜಿಕ ಜಾಲತಾಣದಲ್ಲಿ ನನ್ನ ಬಗ್ಗೆ ಬರುವ ಪ್ರತಿಯೊಂದು ಅಪ್‌ಡೇಟ್ ಅನ್ನು ನಮ್ಮ ತಂಡ ಗಮನಿಸುತ್ತಿದೆ. ನಾನು ಎಲ್ಲವನ್ನೂ ಸೂಕ್ಷ್ಮವಾಗಿ ನೋಡುತ್ತಿದ್ದೇನೆ’ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಈ ಅಪಪ್ರಚಾರದ ಹಿಂದೆ ಯಾರಿದ್ದಾರೆ ಎಂಬ ಗುಟ್ಟನ್ನು ದಿಲ್ ರಾಜು ಬಿಟ್ಟುಕೊಡಲಿಲ್ಲ. ಕೇವಲ ಪೇಯ್ಡ್ ಪ್ರಮೋಷನ್ ನಡೆದಿದೆ ಎಂದಷ್ಟೇ ಅವರು ಆರೋಪಿಸಿದರು. ಇದೇ ವೇಳೆ ಇತ್ತೀಚಿನ ಸಿನಿಮಾಗಳ ಗಳಿಕೆಯ ಬಗ್ಗೆಯೂ ಅವರು ಸಂತಸ ಹಂಚಿಕೊಂಡರು. ‘ರಾಮಾಯಣ’ ಸಿನಿಮಾ ತಮಗೆ ಉತ್ತಮ ಲಾಭ ತಂದುಕೊಟ್ಟಿದೆ ಎಂದರು. ಹಾಗೆಯೇ ‘ಸೀನ್’ ಸಿನಿಮಾ ಕೂಡ ಬ್ರೇಕ್ ಈವನ್ ಆಗಿ ಲಾಭದ ಹಾದಿಯಲ್ಲಿದೆ ಎಂದು ತಿಳಿಸಿದರು.
ಇದನ್ನೂ ಓದಿ: ‘ಟಾಕ್ಸಿಕ್’ ಎಫೆಕ್ಟ್: ಶಾಲಾ-ಕಾಲೇಜುಗಳಲ್ಲಿ ಸಿನಿಮಾ ಪ್ರಚಾರಕ್ಕೆ ಅವಕಾಶವಿಲ್ಲ
ಪ್ರಸ್ತುತ ದಿಲ್ ರಾಜು ಸಾಲು ಸಾಲು ಸಿನಿಮಾಗಳ ವಿತರಣೆಯಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ನಿರ್ಮಾಣದ ಜೊತೆಗೆ ಪರಭಾಷೆಯ ದೊಡ್ಡ ಚಿತ್ರಗಳನ್ನು ತೆಲುಗು ಪ್ರೇಕ್ಷಕರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ‘ಟಾಕ್ಸಿಕ್’ ಚಿತ್ರದಿಂದ ನಷ್ಟವಾಗಿದೆ ಎಂಬ ಹೈಪ್ ನಡುವೆಯೇ ತಮಗೆ ಲಾಭವಾಗಿದೆ ಎಂಬ ಅವರ ಹೇಳಿಕೆ ಈಗ ಚಿತ್ರರಂಗದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




