
ಭಾರತದಲ್ಲಿ ಕೊರೊನಾ ವೈರಸ್ ಹಾವಳಿ ಮಿತಿ ಮೀರಿದೆ. ಕೊವಿಡ್ 2ನೇ ಅಲೆಗೆ ಇಡೀ ದೇಶ ತತ್ತರಿಸುತ್ತಿದೆ. ಜನಸಾಮಾನ್ಯರ ಕಷ್ಟ ಹೇಳತೀರದು. ಸೂಕ್ತ ಕಾಲಕ್ಕೆ ಚಿಕಿತ್ಸೆ, ಆಕ್ಸಿಜನ್ ಸಿಲಿಂಡರ್ ಸಿಗದೇ ಒದ್ದಾಡುವಂತಾಗಿದೆ. ಈ ಪರಿಸ್ಥಿತಿಯಲ್ಲಿ ಕೆಲವು ಸೆಲೆಬ್ರಿಟಿಗಳು ಹಾಯಾಗಿ ಇದ್ದಾರೆ. ಕೊವಿಡ್ ಕಾಟ ಕಡಿಮೆ ಇರುವಂತಹ ದೇಶಗಳಿಗೆ ಹೋಗಿ ರಜೆಯ ಮಜಾ ಸವಿಯುತ್ತಿದ್ದಾರೆ. ಆದರೆ ಅವರೆಲ್ಲರಿಗಿಂತ ಭಿನ್ನವಾಗಿ ನಟಿ ಪ್ರಿಯಾಂಕಾ ಚೋಪ್ರಾ ನಿಂತುಕೊಂಡಿದ್ದಾರೆ.
ಸದ್ಯ ಪ್ರಿಯಾಂಕಾ ಚೋಪ್ರಾ ಅಮೆರಿಕದಲ್ಲಿ ವಾಸವಾಗಿದ್ದಾರೆ. ಗಾಯಕ ನಿಕ್ ಜೋನಸ್ ಜೊತೆ ಮದುವೆ ಆದ ಬಳಿಕ ಅವರು ಅಲ್ಲಿಯೇ ಸೆಟ್ಲ್ ಆಗಿದ್ದಾರೆ. ಸದ್ಯ ಅಮೆರಿಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದರೂ ಸಹ ಮಹಾಮಾರಿಯನ್ನು ಎದುರಿಸಲು ಅಮೆರಿಕ ಸಜ್ಜಾಗಿದೆ. ಹಾಗೇ ನೋಡಿದರೆ ಪ್ರಿಯಾಂಕಾ ಅಲ್ಲಿ ತುಂಬಾ ಸೇಫ್ ಆಗಿದ್ದಾರೆ. ಆದರೂ ಕೂಡ ಅವರು ಭಾರತದ ಪರವಾಗಿ ಧ್ವನಿ ಎತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಕಾಳಜಿ ವ್ಯಕ್ತಪಡಿಸಿದ್ದಾರೆ.
ಕೊರೊನಾ ವ್ಯಾಕ್ಸಿನ್ಗಳಿಗೆ ತೀವ್ರ ಬೇಡಿಕೆ ಇದೆ. ಅದನ್ನು ಭಾರತಕ್ಕೆ ಕೊಡಿಸಲು ಪ್ರಿಯಾಂಕಾ ಪ್ರಯತ್ನಿಸಿದ್ದಾರೆ. ಈ ಬಗ್ಗೆ ಅವರು ಟ್ವೀಟ್ ಮಾಡಿದ್ದಾರೆ. ‘ನನ್ನ ಹೃದಯ ಛಿದ್ರವಾಗುತ್ತಿದೆ. ಕೊರೊನಾದಿಂದ ಭಾರತ ಬಳಲುತ್ತಿದೆ. ಆದರೆ ಈ ಸಂದರ್ಭದಲ್ಲಿ ಅಮೆರಿಕ ತನಗೆ ಅವಶ್ಯಕತೆ ಇರುವುದಕ್ಕಿಂತಲೂ 55 ಕೋಟಿ ಹೆಚ್ಚುವರಿ ವ್ಯಾಕ್ಸಿನ್ಗಳನ್ನು ಪಡೆದುಕೊಂಡಿದೆ. ಜಗತ್ತಿನಾದ್ಯಂತ ಆಸ್ಟ್ರಾವೆನೆಕಾ ಹಂಚಿಕೆ ಮಾಡಿದ್ದಕ್ಕೆ ಧನ್ಯವಾದಗಳು. ಆದರೆ ನನ್ನ ದೇಶ ಭಾರತದಲ್ಲಿ ಪರಿಸ್ಥಿತಿ ತುಂಬ ಚಿಂತಾಜನಕ ಆಗಿದೆ. ತುರ್ತಾಗಿ ಭಾರತಕ್ಕೆ ವ್ಯಾಕ್ಸಿನ್ ನೀಡುತ್ತೀರಾ?’ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಮತ್ತು ಇತರೆ ಉನ್ನತ ಅಧಿಕಾರಿಗಳಿಗೆ ಪ್ರಿಯಾಂಕಾ ಪ್ರಶ್ನೆ ಮಾಡಿದ್ದಾರೆ.
ಪ್ರಿಯಾಂಕಾ ಅವರ ಈ ಟ್ವೀಟ್ಗೆ ಹಲವರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಬೇರೆ ಸೆಲೆಬ್ರಿಟಿಗಳು ಹಾಯಾಗಿ ಕಾಲ ಕಳೆಯುತ್ತಿರುವಾಗ ಪ್ರಿಯಾಂಕಾ ಅವರು ಭಾರತದ ಪರವಾಗಿ ನಿಂತು ಮಾತನಾಡುತ್ತಿರುವುದು ಪ್ರಶಂಸೆಗೆ ಪಾತ್ರವಾಗುತ್ತಿದೆ. ಸ್ವದೇಶದ ಬಗ್ಗೆ ಅವರು ಹೊಂದಿರುವ ಕಾಳಜಿಗೆ ಇಲ್ಲಿನ ಅವರ ಅಭಿಮಾನಿಗಳು ಭೇಷ್ ಎನ್ನುತ್ತಿದ್ದಾರೆ.
ಆದರೆ ಕೆಲವರು ಅಪಸ್ವರ ಕೂಡ ಎತ್ತಿದ್ದಾರೆ. ‘ನೀವು ಈ ಮಾತನ್ನು ಇನ್ನೂ ಬೇಗ ಹೇಳಬೇಕಿತ್ತು. ಈಗಾಗಲೇ ಪರಿಸ್ಥಿತಿ ಕೈ ಮೀರಿದೆ’ ಎಂದು ಟೀಕಿಸಿದ್ದಾರೆ. ಸದ್ಯ ಪ್ರಿಯಾಂಕಾ ಚೋಪ್ರಾ ಬಾಲಿವುಡ್ನಿಂದಲೂ ಅಂತರ ಕಾಯ್ದುಕೊಂಡಿದ್ದಾರೆ. ಹಿಂದಿಗಿಂತಲೂ ಹೆಚ್ಚಾಗಿ ಹಾಲಿವುಡ್ ಸಿನಿಮಾಗಳ ಕಡೆಗೆ ಗಮನ ಹರಿಸಿದ್ದಾರೆ.
ಇದನ್ನೂ ಓದಿ: ಎಲ್ಲೇ ಇದ್ದರೂ ಭಾರತೀಯ ಸಂಸ್ಕೃತಿ ಮರೆಯದ ಪ್ರಿಯಾಂಕಾ ಚೋಪ್ರಾ! ಲಂಡನ್ನಲ್ಲಿ ದೇಸಿ ಗರ್ಲ್ ಹೋಳಿ
ಬಾಲ್ಯದಲ್ಲಿ ಪ್ರಿಯಾಂಕಾ ಚೋಪ್ರಾ ಪಾಲಿಸುತ್ತಿದ್ದ ಧರ್ಮ ಯಾವುದು? ಸಂದರ್ಶನದಲ್ಲಿ ಸತ್ಯ ಬಾಯ್ಬಿಟ್ಟ ನಟಿ
Published On - 8:59 am, Tue, 27 April 21