ತೆಲುಗಿನ ಜನಪ್ರಿಯ ಸಿನಿಮಾ ಕುಟುಂಬವಾದ ದಗ್ಗುಬಾಟಿ ಕುಟುಂಬದ ಪ್ರಮುಖ ನಟ, ನಿರ್ಮಾಪಕರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ. ನಟರಾದಾ ರಾಣಾ ದಗ್ಗುಬಾಟಿ, ವೆಂಕಟೇಶ್, ಅಭಿರಾಮ್ ದಗ್ಗುಬಾಟಿ ಹಾಗೂ ಅವರ ಸಹೋದರ ನಿರ್ಮಾಪಕ ಸುರೇಶ್ ಬಾಬು ವಿರುದ್ಧ ಕಳ್ಳತನ, ಗೂಂಡಾ ವರ್ತನೆ ಮತ್ತು ಅಕ್ರಮವಾಗಿ ಕಟ್ಟಡ ನೆಲಸಮ ಮಾಡಿದ ಆರೋಪ ಹೊರಿಸಲಾಗಿದೆ. ಈ ನಾಲ್ವರ ವಿರುದ್ಧ ಫಿಲಂ ನಗರ್ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಕೇಸು ದಾಖಲಿಸಲಾಗಿದೆ. ಅಕ್ರಮವಾಗಿ ಬೇರೊಂದು ಪ್ರಾಪರ್ಟಿಗೆ ನುಗ್ಗಿದ್ದಲ್ಲದೆ ಅದನ್ನು ನೆಲಸಮಗೊಳಿಸಿದ ಆರೋಪವನ್ನು ಅವರುಗಳ ಮೇಲೆ ಹೊರಿಸಲಾಗಿದೆ. ನಂದ ಕುಮಾರ್ ಎಂಬುವರು ಇವರುಗಳ ಮೇಲೆ ದೂರು ನೀಡಿದ್ದಾರೆ.
ಫಿಲಂ ನಗರ್ನಲ್ಲಿರುವ ಡೆಕ್ಕನ್ ಕಿಚ್ಚನ್ ಹೆಸರಿನ ಹೋಟೆಲ್ ಅನ್ನು ರಾಣಾ, ವೆಂಕಟೇಶ್, ಸುರೇಶ್ ಬಾಬು ಮತ್ತು ಅಭಿರಾಮ್ ಅವರುಗಳು ಅಕ್ರಮವಾಗಿ ನೆಲಸಮ ಮಾಡಿದ್ದಾರೆ ಎಂದು ಹೋಟೆಲ್ನ ಮಾಲೀಕ ನಂದ ಕುಮಾರ್ ಆರೋಪ ಮಾಡಿದ್ದಾರೆ. ಅಸಲಿಗೆ ಹೋಟೆಲ್ ನಿರ್ಮಿಸಲಾಗಿರುವ ಸ್ಥಳ ದಗ್ಗುಬಾಟಿ ಕುಟುಂಬಕ್ಕೆ ಸೇರಿದ್ದೇ ಆಗಿದೆ. ಆ ಸ್ಥಳವನ್ನು ನಂದ ಕುಮಾರ್ ಅವರಿಗೆ ಲೀಸ್ಗೆ ಕೆಲ ವರ್ಷಗಳ ಹಿಂದೆ ನೀಡಲಾಗಿತ್ತು. ಅಲ್ಲಿ ನಂದ ಕುಮಾರ್ ಡೆಕ್ಕನ್ ಕಿಚನ್ ಹೆಸರಿನ ಹೋಟೆಲ್ ನಿರ್ಮಾಣ ಮಾಡಿದ್ದರು. ಆದರೆ ಲೀಸ್ ವಿಚಾರದಲ್ಲಿ ನಂದ ಕುಮಾರ್ ಹಾಗೂ ದಗ್ಗುಬಾಟಿ ಕುಟುಂಬದ ನಡುವೆ ವಿವಾದ ಭುಗಿಲೆದ್ದಿದೆ.
ಇದನ್ನೂ ಓದಿ: ಡ್ರಗ್ಸ್ ವಿರುದ್ಧ ಸಮರ ಸಾರಿದ ಟಾಲಿವುಡ್ ನಟ ಪ್ರಭಾಸ್
2022 ರಲ್ಲಿ ಸ್ಥಳದ ವಿಚಾರವಾಗಿ ನಂದ ಕುಮಾರ್ ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ದರು. ಆಗ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ನವರು ಹೋಟೆಲ್ನ ಒಂದು ಭಾಗವನ್ನು ಒಡೆದಿದ್ದರು. ಅದಾದ ಬಳಿಕ ದಗ್ಗುಬಾಟಿ ಕುಟುಂಬ ಹಾಗೂ ನಂದ ಕುಮಾರ್ ನಡುವೆ ವಿವಾದಗಳು ಇನ್ನಷ್ಟು ಹೆಚ್ಚಾಗಿದ್ದು, ಇತ್ತೀಚೆಗಷ್ಟೆ ಹೋಟೆಲ್ ಅನ್ನು ದಗ್ಗುಬಾಟಿ ಕುಟುಂಬದ ಆದೇಶದಂತೆ ಸಂಪೂರ್ಣವಾಗಿ ನೆಲಸಮಗೊಳಿಸಲಾಗಿದೆ. ದಗ್ಗುಬಾಟಿ ಕುಟುಂಬದ ಸದಸ್ಯರು ಅಕ್ರಮವಾಗಿ ತನ್ನ ಕಟ್ಟಡವನ್ನು ನೆಲಸಮ ಮಾಡಿದ್ದಾರೆ ಎಂದು ನಂದ ಕುಮಾರ್ ಆರೋಪ ಮಾಡಿದ್ದಾರೆ ಅಲ್ಲದೆ, ಆರೋಪಿಗಳು ಸಿಟಿ ಸಿವಿಲ್ ಕೋರ್ಟ್ನ ಆದೇಶವನ್ನು ಉಲ್ಲಂಘಿಸಿದ್ದಾರೆ ಎಂದಿದ್ದಾರೆ.
ದಗ್ಗುಬಾಟಿ ಕುಟುಂಬದ ವಿರುದ್ಧ ದೂರು ನೀಡಿರುವ ನಂದ ಕುಮಾರ್ ಮೇಲೆ ಈಗಾಗಲೇ ಕೆಲವು ಪ್ರಕರಣಗಳು ಇವೆ. ಈ ಹಿಂದೆ ಆಂಧ್ರ-ತೆಲಂಗಾಣದಲ್ಲಿ ಭಾರಿ ಸುದ್ದಿಯಾಗಿದ್ದ ಎಂಎಲ್ಎ ಖರೀದಿ ಪ್ರಕರಣದಲ್ಲಿ ನಂದ ಕುಮಾರ್ ಹೆಸರು ಪ್ರಮುಖವಾಗಿ ಕೇಳಿ ಬಂದಿತ್ತು. ಮಾತ್ರವಲ್ಲದೆ, ನಂದ ಕುಮಾರ್ ವಿರುದ್ಧ ರಿಯಲ್ ಎಸ್ಟೇಟ್ಗೆ ಸಂಬಂಧಿಸಿದಂತೆ ಇನ್ನೂ ಕೆಲವು ಕೇಸುಗಳು ಬಾಕಿ ಇವೆಯಂತೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ