‘ಪ್ರಾಜೆಕ್ಟ್ ಕೆ’: ದೀಪಿಕಾ ಪಡುಕೋಣೆ ಲುಕ್ ಬಿಡುಗಡೆ

|

Updated on: Jul 18, 2023 | 10:52 PM

Project K: ಭಾರತದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ಪ್ರಭಾಸ್​ರ 'ಪ್ರಾಜೆಕ್ಟ್ ಕೆ' ಸಿನಿಮಾದಿಂದ ದೀಪಿಕಾ ಪಡುಕೋಣೆಯ ಫಸ್ಟ್ ಲುಕ್ ರಿಲೀಸ್ ಆಗಿದೆ.

ಪ್ರಾಜೆಕ್ಟ್ ಕೆ: ದೀಪಿಕಾ ಪಡುಕೋಣೆ ಲುಕ್ ಬಿಡುಗಡೆ
ದೀಪಿಕಾ ಪಡುಕೋಣೆ
Follow us on

ಆದಿಪುರುಷ್‘ (Adipurush) ಸಿನಿಮಾ ನಿರೀಕ್ಷೆಗಳನ್ನೆಲ್ಲ ಹುಸಿ ಮಾಡಿದ ಬೆನ್ನಲ್ಲೆ ಇದೀಗ ಎಲ್ಲ ನಿರೀಕ್ಷೆಗಳು ಪ್ರಭಾಸ್​ರ ಹೊಸ ಸಿನಿಮಾ ‘ಸಲಾರ್‘ (Salaar) ಹಾಗೂ ‘ಪ್ರಾಜೆಕ್ಟ್ ಕೆ‘ (Project K) ಕಡೆಗೆ ತಿರುಗಿವೆ. ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಸಿನಿಮಾ ಪಕ್ಕಾ ಕಮರ್ಶಿಯಲ್, ಮಾಸ್ ಎಲಿವೇಷನ್ ಸಿನಿಮಾ ಆಗಿದ್ದು ಆ ಸಿನಿಮಾದ ಬಗ್ಗೆ ಪ್ರೇಕ್ಷಕರಿಗೆ ಒಂದು ತೆರನಾದ ನಿರೀಕ್ಷೆ ಇದೆ. ಆದರೆ ಅಸಲಿಗೆ ಬಹಳ ಕುತೂಹಲ ಕೆರಳಿಸಿರುವುದು ಪ್ರಭಾಸ್​ರ ‘ಪ್ರಾಜೆಕ್ಟ್ ಕೆ’ ಸಿನಿಮಾ. ಈ ಸಿನಿಮಾ ಭವಿಷ್ಯ ಹಾಗೂ ಭೂತಕಾಲದ ಕತೆಯನ್ನು ಹೊಂದಿದೆ ಎನ್ನಲಾಗುತ್ತಿದ್ದು, ಮಹಾನ್ ಘಟಾನು-ಘಟಿ ನಟರು ಈ ಸಿನಿಮಾಕ್ಕಾಗಿ ಒಂದಾಗಿದ್ದಾರೆ.

ಇದೀಗ ಸಿನಿಮಾದ ನಾಯಕಿ ದೀಪಿಕಾ ಪಡುಕೋಣೆಯ ಲುಕ್ ಅನ್ನು ‘ಪ್ರಾಜೆಕ್ಟ್ ಕೆ’ ಚಿತ್ರತಂಡ ಬಿಡುಗಡೆ ಮಾಡಿದೆ. ಸಿನಿಮಾಕ್ಕೆ ಬಂಡವಾಳ ಹೂಡಿರುವ ವೈಜಯಂತಿ ಮೂವೀಸ್​ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ದೀಪಿಕಾ ಪಡುಕೋಣೆಯ ಮೊದಲ ಲುಕ್​ ಅನ್ನು ಹಂಚಿಕೊಂಡಿದ್ದಾರೆ. ಕದರಿದ ಕೂದಲು ಬಿಟ್ಟು, ಯಾವುದೋ ಗುರಿಯೆಡಗೆ ತದೇಕಚಿತ್ತದಿಂದ ನೋಡುತ್ತಿರುವ ದೀಪಿಕಾರ ಲುಕ್ ಪಾತ್ರದ ಬಗ್ಗೆ ಕುತೂಹಲ ಮೂಡಿಸುತ್ತಿದೆ. ದೀಪಿಕಾ ಕೊರಳಿಗೆ ಸುತ್ತುಕೊಂಡಿರುವ ಉಡುಗೆಯೂ ಭಿನ್ನವಾಗಿದ್ದು, ಹಾಲಿವುಡ್​ನ ‘ಡ್ಯೂನ್’ ಸಿನಿಮಾದ ಪಾತ್ರಗಳನ್ನು ನೆನಪಿಸುವಂತಿದೆ.

ದೀಪಿಕಾರ ಲುಕ್ ಹಂಚಿಕೊಂಡಿರುವ ವೈಜಯಂತಿ ಮೂವೀಸ್, ”ಅತ್ಯುತ್ತಮ ಭವಿಷ್ಯಕ್ಕಾಗಿ ಭರವಸೆಯ ಬೆಳಕು” ಎಂದು ಕ್ಯಾಪ್ಷನ್ ನೀಡಿದೆ. ಮತ್ತೊಂದು ಪೋಸ್ಟ್​ನಲ್ಲಿ, ”ಹೊಸ ಪ್ರಪಂಚದ ಭರವಸೆಯನ್ನು ಆಕೆ ತನ್ನ ಕಣ್ಣುಗಳಲ್ಲಿ ತುಂಬಿಕೊಂಡಿದ್ದಾಳೆ” ಎಂದು ಬರೆದಿದ್ದಾರೆ. ‘ಪ್ರಾಜೆಕ್ಟ್ ಕೆ’ ಎಂದರೇನು? ಸಿನಿಮಾದ ಹೆಸರೇನು? ಸಿನಿಮಾದ ಟೀಸರ್ ಇನ್ನಿತರೆಗಳು ಜುಲೈ 21ರಂದು ಬಹಿರಂಗಗೊಳ್ಳಲಿವೆ. ಈಗಾಗಲೇ ‘ಪ್ರಾಜೆಕ್ಟ್ ಕೆ’ ಚಿತ್ರತಂಡ ಅಮೆರಿಕಕ್ಕೆ ತೆರಳಿದ್ದು ಅಲ್ಲಿಯೇ ಸಿನಿಮಾದ ಹೆಸರು, ಟೀಸರ್ ಅಥವಾ ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡಲಿದೆ.

ಇದನ್ನೂ ಓದಿ:ವಿಶೇಷ ದಿನಕ್ಕೂ ಮುನ್ನ ‘ಪ್ರಾಜೆಕ್ಟ್​ ಕೆ’ ಚಿತ್ರದಲ್ಲಿನ ದೀಪಿಕಾ ಪಡುಕೋಣೆ ಲುಕ್ ರಿವೀಲ್

‘ಪ್ರಾಜೆಕ್ಟ್ ಕೆ’ ಭಾರಿ ಬಜೆಟ್​ನ ಸಿನಿಮಾ ಆಗಿದ್ದು, ಸಿನಿಮಾದಲ್ಲಿ ದೀಪಿಕಾ ಪಡುಕೋಣೆ, ದಿಶಾ ಪಟಾನಿ ನಾಯಕಿಯರಾಗಿ ನಟಿಸಿದ್ದಾರೆ. ಅಮಿತಾಬ್ ಬಚ್ಚನ್ ಸಹ ಈ ಸಿನಿಮಾದಲ್ಲಿ ನಟಿಸಿದ್ದು, ವಿಲನ್ ಆಗಿ ಸ್ಟಾರ್ ನಟ ಕಮಲ್ ಹಾಸನ್ ನಟಿಸಿದ್ದಾರೆ. ಈ ಸಿನಿಮಾವು ಭವಿಷ್ಯ ಕಾಲ ಹಾಗೂ ಭೂತಕಾಲಗಳ ಕತೆಯನ್ನು ಒಳಗೊಂಡಿದೆ. ಭೂತಕಾಲದ ಜನ ಭವಿಷ್ಯತ್ ಕಾಲದ ಜನರೊಟ್ಟಿಗೆ ಮಾಡುವ ಸಂಘರ್ಷದ ಕತೆಯನ್ನು ‘ಪ್ರಾಜೆಕ್ಟ್ ಕೆ’ ಒಳಗೊಂಡಿದೆ. ಸಿನಿಮಾಕ್ಕೆ ಕತೆಯನ್ನು ಹಿರಿಯ ನಿರ್ದೇಶಕ ಸಿಂಗೀತಂ ಶ್ರೀನಿವಾಸ್ ಹಾಗೂ ನಾಗ್ ಅಶ್ವಿನ್ ರಚಿಸಿದ್ದಾರೆ. ಸಿನಿಮಾವನ್ನು ನಾಗ್ ಅಶ್ವಿನ್ ನಿರ್ದೇಶನ ಮಾಡಿದ್ದು, ವೈಜಯಂತಿ ಮೂವೀಸ್ ನಿರ್ಮಾಣ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:51 pm, Tue, 18 July 23