Prabhas: ಆಂಧ್ರ, ತೆಲಂಗಾಣದಲ್ಲಿ ‘ಸಲಾರ್’ ಚಿತ್ರಕ್ಕೆ 200 ಕೋಟಿ ರೂ. ಬಿಸ್ನೆಸ್ ಮಾತುಕತೆ? ಹೆಚ್ಚಿತು ನಿರೀಕ್ಷೆ
Salaar Movie: ‘ಸಲಾರ್’ ಸಿನಿಮಾ ಎಷ್ಟು ಬಿಸ್ನೆಸ್ ಮಾಡಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ಪ್ರಭಾಸ್ ಅವರ ಅಭಿಮಾನಿಗಳಂತೂ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ನಟ ಪ್ರಭಾಸ್ (Prabhas) ಅವರು ಬ್ಯಾಕ್ ಟು ಬ್ಯಾಕ್ ಸೋಲು ಕಂಡಿದ್ದಾರೆ ಎಂಬುದು ನಿಜ. ಹಾಗಂತ ಅವರ ಬಗ್ಗೆ ಅಭಿಮಾನಿಗಳಿಗೆ ಇರುವ ಕ್ರೇಜ್ ಕಡಿಮೆ ಆಗಿಲ್ಲ. ಅದಕ್ಕೆ ಕಾರಣ ಹಲವು. ‘ಆದಿಪುರುಷ್’ ಸೋಲಿನ ಬಳಿಕ ಸಿನಿಪ್ರಿಯರು ‘ಸಲಾರ್’ (Salaar Movie) ಸಿನಿಮಾವನ್ನು ಎದುರು ನೋಡುತ್ತಿದ್ದಾರೆ. ಈ ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ದೇಶನ ಮಾಡಿರುವುದರಿಂದ ಕುತೂಹಲ ಜಾಸ್ತಿ ಇದೆ. ಅಲ್ಲದೇ ‘ಹೊಂಬಾಳೆ ಫಿಲ್ಮ್ಸ್’ (Hombale Films) ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ. ಈಗಾಗಲೇ ಬಿಡುಗಡೆ ಆಗಿರುವ ಟೀಸರ್ ನೋಡಿ ಜನರು ವಾವ್ ಎಂದಿದ್ದಾರೆ. ಅಚ್ಚರಿ ಏನೆಂದರೆ, ಆಂಧ್ರ ಮತ್ತು ತೆಲಂಗಾಣದಲ್ಲಿ ಈ ಸಿನಿಮಾದ ವಿತರಣೆ ಹಕ್ಕುಗಳನ್ನು 200 ಕೋಟಿ ರೂಪಾಯಿಗೆ ಮಾರಲು ನಿರ್ಮಾಣ ಸಂಸ್ಥೆ ಆಲೋಚಿಸಿದೆ ಎಂಬ ಮಾತು ಕೇಳಿಬಂದಿದೆ.
ಪ್ರಭಾಸ್ ನಟನೆಯ ಸಿನಿಮಾಗಳ ಮೇಲೆ ವಿತರಕರಿಗೆ ಅನುಮಾನ ಶುರುವಾಗಿದೆ. ‘ಸಾಹೋ’, ‘ರಾಧೆ ಶ್ಯಾಮ್’ ಹಾಗೂ ‘ಆದಿಪುರುಷ್’ ಸೋತಿದ್ದರಿಂದ ಅವರ ಮುಂಬರುವ ಸಿನಿಮಾಗಳ ವಿತರಣೆ ಹಕ್ಕನ್ನು ಕೊಂಡುಕೊಳ್ಳಲು ಕೆಲವರು ಹಿಂದೇಟು ಹಾಕುತ್ತಿದ್ದಾರೆ ಎಂಬ ಸುದ್ದಿ ಟಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ. ‘ಸಲಾರ್’ ಚಿತ್ರಕ್ಕೆ 200 ಕೋಟಿ ರೂಪಾಯಿ ಹೆಚ್ಚಾಯಿತು ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಯಾರೂ ಕೂಡ ಅಧಿಕೃತ ಹೇಳಿಕೆ ನೀಡಿಲ್ಲ.
ಇದನ್ನೂ ಓದಿ: Salaar: ‘ಸಲಾರ್ ಸಿನಿಮಾ 2 ಸಾವಿರ ಕೋಟಿ ರೂ. ಕಲೆಕ್ಷನ್ ಮಾಡಲಿದೆ’: ಭವಿಷ್ಯ ನುಡಿದ ಹಾಸ್ಯ ನಟ
ಒಂದು ವೇಳೆ 200 ಕೋಟಿ ರೂಪಾಯಿಗೆ ಯಾವುದೇ ವಿತರಕರು ‘ಸಲಾರ್’ ಸಿನಿಮಾದ ವಿತರಣೆ ಹಕ್ಕುಗಳನ್ನು ಖರೀದಿಸಲು ಒಪ್ಪಿಕೊಳ್ಳದಿದ್ದರೆ ‘ಹೊಂಬಾಳೆ ಫಿಲ್ಮ್ಸ್’ ಮೂಲಕವೇ ನೇರವಾಗಿ ರಿಲೀಸ್ ಮಾಡುವ ಸಾಧ್ಯತೆ ಇರುತ್ತದೆ. ಪ್ರೇಕ್ಷಕರ ಕೃಪೆಯಿಂದ ಸಿನಿಮಾ ಭರ್ಜರಿಯಾಗಿ ಪ್ರದರ್ಶನ ಕಂಡರೆ ಹೊಂಬಾಳೆಗೆ ಸಿಕ್ಕಾಪಟ್ಟೆ ಕಮಾಯಿ ಆಗಲಿದೆ. ಹಾಗಾಗಿ ಈ ಸಿನಿಮಾ ಎಷ್ಟು ಬಿಸ್ನೆಸ್ ಮಾಡಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ಪ್ರಭಾಸ್ ಅವರ ಅಭಿಮಾನಿಗಳಂತೂ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
‘ಸಲಾರ್’ ಸಿನಿಮಾದಲ್ಲಿ ಪ್ರಭಾಸ್ ಅವರಿಗೆ ಜೋಡಿಯಾಗಿ ಶ್ರುತಿ ಹಾಸನ್ ನಟಿಸಿದ್ದಾರೆ. ಮತ್ತೊಂದು ಪ್ರಮುಖ ಪಾತ್ರದಲ್ಲಿ ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ ಅಭಿನಯಿಸಿದ್ದಾರೆ. ಜಗಪತಿ ಬಾಬು, ಸಪ್ತಗಿರಿ ಮುಂತಾದವರು ಕೂಡ ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. ಎರಡು ಪಾರ್ಟ್ಗಳಲ್ಲಿ ‘ಸಲಾರ್’ ಸಿನಿಮಾ ಮೂಡಿಬರುತ್ತಿದೆ. ಸೆಪ್ಟೆಂಬರ್ 28ರಂದು ಮೊದಲ ಪಾರ್ಟ್ ಬಿಡುಗಡೆ ಆಗಲಿದೆ. ಇದಲ್ಲದೇ, ಪ್ರಭಾಸ್ ನಟನೆಯ ‘ಪ್ರಾಜೆಕ್ಟ್ ಕೆ’ ಚಿತ್ರ ಕೂಡ ಹೈಪ್ ಸೃಷ್ಟಿ ಮಾಡಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.