‘ಕೆಡಿ’ ಹಾಡಿಗಿಂತಲೂ ಅಶ್ಲೀಲ ಸಾಹಿತ್ಯ: ‘ವಾಲ್ಯೂಮ್ 1’ ಡಿಲೀಟ್ ಮಾಡುವಂತೆ ಕೋರ್ಟ್ ಆದೇಶ

ಸಿಕ್ಕಾಪಟ್ಟೆ ಅಶ್ಲೀಲ ಸಾಹಿತ್ಯ ಹೊಂದಿದ್ದ ‘ವಾಲ್ಯೂಮ್ 1’ ಹಾಡನ್ನು ಡಿಲೀಟ್ ಮಾಡುವಂತೆ ಕೋರ್ಟ್ ಆದೇಶ ನೀಡಿದೆ. ಸಂಗೀತದ ಹೆಸರಿನಲ್ಲಿ ಅಶ್ಲೀಲತೆ ಹರಡುವುದರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗಿದೆ. ಬಾದ್​ಶಾ ಮತ್ತು ಹನಿ ಸಿಂಗ್ ಅವರಿಗೆ ದೆಹಲಿ ಹೈಕೋರ್ಟ್ ಛೀಮಾರಿ ಹಾಕಿದೆ.

‘ಕೆಡಿ’ ಹಾಡಿಗಿಂತಲೂ ಅಶ್ಲೀಲ ಸಾಹಿತ್ಯ: ‘ವಾಲ್ಯೂಮ್ 1’ ಡಿಲೀಟ್ ಮಾಡುವಂತೆ ಕೋರ್ಟ್ ಆದೇಶ
Honey Singh, Badshah

Updated on: Apr 02, 2026 | 7:43 PM

ಖ್ಯಾತ ಗಾಯಕರಾದ ಹನಿ ಸಿಂಗ್ ಮತ್ತು ಬಾದ್‌ಶಾ ಅವರು 2006-07ರಲ್ಲಿ ಜೊತೆಯಾಗಿ ಸಿದ್ಧಪಡಿಸಿದ್ದ ‘ವಾಲ್ಯೂಮ್ 1’ (Volume 1) ವಿವಾದಾತ್ಮಕ ಹಾಡನ್ನು ಎಲ್ಲಾ ಸಾಮಾಜಿಕ ಜಾಲತಾಣಗಳಿಂದ ತಕ್ಷಣವೇ ತೆಗೆದುಹಾಕುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ. ಈ ಹಾಡು ಅಶ್ಲೀಲತೆಯಿಂದ ಕೂಡಿದ್ದು, ಮಹಿಳೆಯರನ್ನು ಅವಹೇಳನಕಾರಿಯಾಗಿ ಚಿತ್ರಿಸಿದೆ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ. ಇತ್ತೀಚಿನ ದಿನಗಳಲ್ಲಿ ಗಾಯಕ ಬಾದ್​ಶಾ (Badshah) ಅವರಿಗೆ ಎದುರಾದ ಎರಡನೇ ಕಾನೂನಿನ ಸಂಕಷ್ಟ ಇದಾಗಿದೆ.

ಈ ಹಾಡಿನ ಸಾಹಿತ್ಯವು ಕೇವಲ ಆಕ್ಷೇಪಾರ್ಹ ಮಾತ್ರವಲ್ಲ, ಬದಲಿಗೆ ಮಹಿಳೆಯರನ್ನು ಲೈಂಗಿಕ ವಸ್ತುವಿನಂತೆ ಬಿಂಬಿಸುವ ಮತ್ತು ಅವರನ್ನು ಅಪಹಾಸ್ಯ ಮಾಡುವಂತಿದೆ ಎಂದು ಕೋರ್ಟ್ ಹೇಳಿದೆ. ಈ ಕುರಿತು ಮಾತನಾಡಿದ ನ್ಯಾಯಾಧೀಶರು, ‘ಈ ಹಾಡು ಕಲಾತ್ಮಕ ಮೌಲ್ಯಗಳನ್ನು ಗಾಳಿಗೆ ತೂರಿದೆ. ಇದನ್ನು ಕಲಾತ್ಮಕ ಸ್ವಾತಂತ್ರ್ಯ ಅಥವಾ ವಾಕ್ ಸ್ವಾತಂತ್ರ್ಯದ ಹೆಸರಿನಲ್ಲಿ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇಂತಹ ಅಶ್ಲೀಲ ವಿಷಯಗಳು ಅಪ್ರಾಪ್ತರಿಗೆ ಸುಲಭವಾಗಿ ಲಭ್ಯವಿರುವುದು ಸಮಾಜಕ್ಕೆ ಮಾರಕ ಎಂದು ನ್ಯಾಯಾಲಯ ಕಳವಳ ವ್ಯಕ್ತಪಡಿಸಿದೆ. ಹಾಡಿನ ಲಿಂಕ್‌ಗಳನ್ನು ಕೂಡಲೇ ತೆಗೆದುಹಾಕುವಂತೆ ಸ್ಪಾಟಿಫೈ ಮತ್ತು ಹನಿ ಸಿಂಗ್ ಸೇರಿದಂತೆ ಸಂಬಂಧಪಟ್ಟವರಿಗೆ ನ್ಯಾಯಾಲಯ ಸೂಚಿಸಿದೆ. ‘ಯಾವುದೇ ಸುಸಂಸ್ಕೃತ ಸಮಾಜವು ಇಂತಹ ವಿಷಯಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಅವಕಾಶ ನೀಡುವುದಿಲ್ಲ’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕಳೆದ ತಿಂಗಳಷ್ಟೇ ಬಾದ್‌ಶಾ ಅವರ ಮತ್ತೊಂದು ಹಾಡು ‘ಟಟೀರಿ’ ಕೂಡ ವಿವಾದಕ್ಕೆ ಸಿಲುಕಿತ್ತು. ಈ ಹಾಡಿನ ಸಾಹಿತ್ಯ ಮತ್ತು ದೃಶ್ಯಗಳು ಅತಿರೇಕದ ಅಶ್ಲೀಲತೆಯಿಂದ ಕೂಡಿವೆ ಎಂದು ಜನರು ಕಿಡಿಕಾರಿದ್ದರು. ವ್ಯಾಪಕ ಟೀಕೆಗಳು ವ್ಯಕ್ತವಾದ ನಂತರ ಬಾದ್‌ಶಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮೆಯಾಚಿಸಿ, ಯಾರ ಭಾವನೆಗಳಿಗೂ ಧಕ್ಕೆ ತರುವ ಉದ್ದೇಶ ತಮಗಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಇದನ್ನೂ ಓದಿ: ಅಸಭ್ಯ ಸಾಹಿತ್ಯಕ್ಕೆ ವಿರೋಧ: ಕ್ಷಮೆ ಕೇಳಿ ರಾತ್ರೋರಾತ್ರಿ ಸಾಂಗ್ ಡಿಲೀಟ್ ಮಾಡಿದ ಬಾದ್​ಶಾ

ಇತ್ತೀಚೆಗೆ ‘ಕೆಡಿ’ ಸಿನಿಮಾದ ‘ಸರ್ಸೆ ನಿನ್ನ ಸೆರಗ’ ಹಾಡು ಕೂಡ ಇದೇ ರೀತಿ ಅಶ್ಲೀಲ ಸಾಹಿತ್ಯದಿಂದ ಕೂಡಿತ್ತು. ಜೋಗಿ ಪ್ರೇಮ್ ಬರೆದ ಆ ಹಾಡಿಗೆ ದೇಶಾದ್ಯಂತ ವಿರೋಧ ವ್ಯಕ್ತವಾಗಿತ್ತು. ನಟಿ ನೋರಾ ಫತೇಹಿ ಮತ್ತು ಸಂಜಯ್ ದತ್ ಅವರು ಆ ಹಾಡಿನಲ್ಲಿ ಡ್ಯಾನ್ಸ್ ಮಾಡಿದ್ದರು. ಭಾರಿ ಟೀಕೆ ಎದುರಾದ ಬಳಿಕ ಹಾಡನ್ನು ಡಿಲೀಟ್ ಮಾಡಲಾಯಿತು. ಆ ಹಾಡಿಗಿಂತಲೂ ಹೆಚ್ಚು ಅಶ್ಲೀಲವಾದ ಸಾಹಿತ್ಯ ‘ವಾಲ್ಯೂಮ್ 1’ ಹಾಡಿನಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us