ಕ್ರಿಕೆಟರ್ ಎಂ.ಎಸ್. ಧೋನಿ (MS Dhoni) ಅವರು ಸಿನಿಮಾ ನಿರ್ಮಾಣಕ್ಕೆ ಇಳಿಯಲಿದ್ದಾರೆ ಎನ್ನುವ ಸುದ್ದಿ ಖಚಿತವಾಗಿತ್ತು. ಆದರೆ, ಈ ಸಿನಿಮಾ ಯಾವುದು? ಇದನ್ನು ನಿರ್ದೇಶನ ಮಾಡೋದು ಯಾರು ಎನ್ನುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿರಲಿಲ್ಲ. ಈಗ ಈ ವಿಚಾರದಲ್ಲಿ ಧೋನಿ ಎಂಟರ್ಟೇನ್ಮೆಂಟ್ ಕಡೆಯಿಂದ ಘೋಷಣೆ ಆಗಿದೆ. ಅವರ ಮೊದಲ ಚಿತ್ರಕ್ಕೆ ‘ಲೆಟ್ಸ್ ಗೆಟ್ ಮ್ಯಾರೀಡ್’ (Lets Get Married) ಎಂದು ಶೀರ್ಷಿಕೆ ಇಡಲಾಗಿದೆ.
ಧೋನಿಗೂ ತಮಿಳುನಾಡಿಗೂ ಉತ್ತಮ ನಂಟಿದೆ. ಇದಕ್ಕೆ ಕಾರಣ ಐಪಿಎಲ್. ಧೋನಿ ಅವರು ಈ ಮೊದಲಿನಿಂದಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಹೀಗಾಗಿ, ತಮಿಳುನಾಡಿನಲ್ಲಿ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಈ ಕಾರಣಕ್ಕೆ ಮೊದಲ ಚಿತ್ರವನ್ನು ತಮಿಳಿನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ.
ಧೋನಿ ಎಂಟರ್ಟೇನ್ಮೆಂಟ್ ನಿರ್ಮಾಣದ ಮೊದಲ ಚಿತ್ರದ ಟೈಟಲ್ ರಿಲೀಸ್ ಮಾಡಲಾಗಿದೆ. ಕಾಡಿನ ಮಧ್ಯೆ ಇರುವ ರಸ್ತೆಯಲ್ಲಿ ವ್ಯಾನ್ ಒಂದು ಸಾಗುವ ರೀತಿಯಲ್ಲಿ ಗ್ರಾಫಿಕ್ಸ್ ಮಾಡಲಾಗಿದೆ. ‘ಎಲ್ಜಿಎಂ’ ಎಂಬುದು ಸಿನಿಮಾ ಟೈಟಲ್ನ ಶಾರ್ಟ್ಫಾರ್ಮ್. ರಮೇಶ್ ತಮಿಳ್ಮಣಿ ಅವರು ಚಿತ್ರವನ್ನು ನಿರ್ದೇಶನ ಮಾಡಿದರೆ, ಸಾಕ್ಷಿ ಸಿಂಗ್ ಧೋನಿ ಅವರು ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
ತಮಿಳು ಸಿನಿಮಾ ಮಾತ್ರವಲ್ಲದೆ ಇನ್ನೂ ಹಲವು ನಿರ್ದೇಶಕರ ಜತೆ ಧೋನಿ ಮಾತುಕತೆಯಲ್ಲಿ ಇದ್ದಾರೆ. ಧೋನಿಗೆ ಈ ಮೊದಲಿನಿಂದಲೂ ಸಿನಿಮಾ ಬಗ್ಗೆ ಆಸಕ್ತಿ ಇದೆ. ಕ್ರಿಕೆಟ್ನಿಂದ ನಿವೃತ್ತಿ ಪಡೆದ ಬಳಿಕ ಅವರು ಈ ಬಗ್ಗೆ ಗಮನಹರಿಸುತ್ತಿದ್ದಾರೆ. ಮೂಲಗಳ ಪ್ರಕಾರ ವೆಬ್ ಸೀರಿಸ್ಗಳನ್ನು ನಿರ್ಮಾಣ ಮಾಡುವತ್ತವೂ ಧೋನಿ ಗಮನ ಹರಿಸುತ್ತಿದ್ದಾರೆ ಎನ್ನಲಾಗಿದೆ.
‘ಧೋನಿ ಪತ್ನಿ ಸಾಕ್ಷಿ ಅವರು ಒಂದು ಕಥೆಯ ಪರಿಕಲ್ಪನೆಯನ್ನು ಹೇಳಿದ್ದರು. ಇದು ಧೋನಿಗೆ ಇಷ್ಟವಾಗಿದೆ. ಇದೇ ವಿಚಾರದ ಮೇಲೆ ಸಿನಿಮಾ ಮಾಡಲು ಅವರು ನಿರ್ಧರಿಸಿದ್ದಾರೆ. ಫ್ಯಾಮಿಲಿ ಎಂಟರ್ಟೇನ್ಮೆಂಟ್ ಮಾದರಿಯಲ್ಲಿ ಈ ಸಿನಿಮಾ ಮೂಡಿ ಬರಲಿದೆ’ ಎಂದು ರಮೇಶ್ ಹೇಳಿರುವುದಾಗಿ ಕೆಲ ಮಾಧ್ಯಮಗಳು ವರದಿ ಮಾಡಿದ್ದವು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:27 pm, Fri, 27 January 23