ಕೆಜಿಎಫ್ 2 ದಾಖಲೆ ಮುರಿಯಿತೇ ಆದಿಪುರುಷ್: ಕರ್ನಾಟಕದಲ್ಲಿ ಆದ ಕಲೆಕ್ಷನ್ ಎಷ್ಟು?

|

Updated on: Jun 17, 2023 | 4:43 PM

Adipurush: ಭಾರಿ ನಿರೀಕ್ಷೆ ಹುಟ್ಟಿಸಿದ್ದ ಆದಿಪುರುಷ್ ಸಿನಿಮಾ ನಿನ್ನೆ (ಜೂನ್ 16) ರಂದು ಬಿಡುಗಡೆ ಆಗಿದ್ದು, ಮೊದಲ ದಿನದ ಕಲೆಕ್ಷನ್ ಲೆಕ್ಕಾಚಾರ ಹೊರಬಿದ್ದಿದೆ. ಹಲವರ ಊಹೆಯಂತೆ ಕಲೆಕ್ಷನ್​ನಲ್ಲಿ ಕೆಜಿಎಫ್ 2 ದಾಖಲೆಯನ್ನು ಮುರಿಯಿತೇ ಆದಿಪುರುಷ್?

ಕೆಜಿಎಫ್ 2 ದಾಖಲೆ ಮುರಿಯಿತೇ ಆದಿಪುರುಷ್: ಕರ್ನಾಟಕದಲ್ಲಿ ಆದ ಕಲೆಕ್ಷನ್ ಎಷ್ಟು?
ಆದಿಪುರುಷ್-ಕೆಜಿಎಫ್ 2
Follow us on

ದೇಶದಾದ್ಯಂತ ಬಹುನಿರೀಕ್ಷೆ ಹುಟ್ಟಿಸಿದ್ದ ಪ್ರಭಾಸ್ (Prabhas) ನಟನೆಯ ಆದಿಪುರುಷ್ (Adipurush) ಸಿನಿಮಾ ನಿನ್ನೆ (ಜೂನ್ 16) ಬಿಡುಗಡೆ ಆಗಿದೆ. ರಾಮಾಯಣದ ಕತೆ ಹೊಂದಿರುವ ಈ ಸಿನಿಮಾ ಭಾರತದ ಈವರೆಗಿನ ಅತಿ ದೊಡ್ಡ ಬಜೆಟ್​ನ ಸಿನಿಮಾ ಎನ್ನಲಾಗಿದ್ದು, ಬಜೆಟ್​ಗೆ ತಕ್ಕಂತೆ ಭಾರಿ ಮೊತ್ತದ ಕಲೆಕ್ಷನ್ ಸಹ ಮಾಡಲಿದೆ ಎಂದು ಅಂದಾಜಿಸಲಾಗಿತ್ತು. ಈ ಸಿನಿಮಾ ಈ ಹಿಂದಿನ ದಾಖಲೆಗಳನ್ನು ಅಳಿಸಿ ಮೊದಲ ದಿನದ ಕಲೆಕ್ಷನ್​ನಲ್ಲಿ ದಾಖಲೆ ಬರೆಯಲಿದೆ ಎನ್ನಲಾಗುತ್ತು. ಅದು ಸಾಧ್ಯವಾಗಿದೆಯೇ ಕನ್ನಡದ ಕೆಜಿಎಫ್ 2 (KGF 2) ದಾಖಲೆಯನ್ನು ಆದಿಪುರುಷ್ ಮುರಿದಿದೆಯೇ?

ಆದಿಪುರುಷ್ ಸಿನಿಮಾ ಮೊದಲ ದಿನ ಭಾರತದಲ್ಲಿ ಸುಮಾರು 85 ರಿಂದ 90 ಕೋಟಿ ಗಳಿಕೆ ಮಾಡಿದೆ. ಅದರಲ್ಲಿ ಉತ್ತರ ಭಾರತದ ವಿವಿಧ ರಾಜ್ಯಗಳಿಂದ 40.50 ಕೋಟಿ ಗಳಿಕೆ ಆಗಿದ್ದರೆ ಎರಡು ತೆಲುಗು ರಾಜ್ಯಗಳಿಂದ 40 ಕೋಟಿಗೆ ಸಮೀಪವೇ ಕಲೆಕ್ಷನ್ ಆಗಿದೆ. ಕೇರಳ, ತಮಿಳುನಾಡು ಎರಡೂ ಸೇರಿ ಕೇವಲ ಎರಡು ಕೋಟಿ ಗಳಿಕೆ ಆಗಿದ್ದರೆ ಕರ್ನಾಟಕದಲ್ಲಿ ಬರೋಬ್ಬರಿ 6.50 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಭಾರತದಲ್ಲಿ ಮೊದಲ ದಿನ ಉತ್ತಮ ಮೊತ್ತವನ್ನೇ ಆದಿಪುರುಷ್ ಸಿನಿಮಾ ಗಳಿಸಿದೆ. ವಿಶ್ವಮಟ್ಟದಲ್ಲಿ ಆದಿಪುರುಷ್ ಮೊದಲ ದಿನದ ಕಲೆಕ್ಷನ್ 135 ಕೋಟಿ ಎನ್ನಲಾಗುತ್ತಿದೆ.

ಮೊದಲ ದಿನ ಉತ್ತಮ ಕಲೆಕ್ಷನ್ ಮಾಡಿದ್ದರೂ ಸಹ ಆದಿಪುರುಷ್ ಸಿನಿಮಾ ಕೆಜಿಎಫ್ 2 ದಾಖಲೆ ಮುರಿಯಲಾಗಿಲ್ಲ ಮಾತ್ರವಲ್ಲ ಮೊದಲ ದಿನ ಅತಿ ಹೆಚ್ಚು ಹಣ ಗಳಿಸಿದ ಸಿನಿಮಾಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆಯಲಷ್ಟೆ ಶಕ್ತವಾಗಿದೆ. ಬಾಹುಬಲಿ 2, ಕೆಜಿಎಫ್ 2, ಆರ್​ಆರ್​ಆರ್ ಸಿನಿಮಾಗಳ ನಂತರದ ಸ್ಥಾನದಲ್ಲಿ ಪ್ರಭಾಸ್​ರ ಆದಿಪುರುಷ್ ಸಿನಿಮಾ ಇದೆ. ಆದಿಪುರುಷ್ ಸಿನಿಮಾದ ಬಳಿಕದ ಸ್ಥಾನ ಪ್ರಭಾಸ್​ರ ಸಾಹೋ ಸಿನಿಮಾಕ್ಕೆ ಧಕ್ಕಿದೆ.

ಕೆಜಿಎಫ್ 2 ಸಿನಿಮಾ ಮೊದಲ ದಿನವೇ ದಾಖಲೆಯ 134 ಕೋಟಿ ರೂಪಾಯಿಗಳನ್ನು ಭಾರತದಲ್ಲ ಗಳಿಸಿತ್ತು. ಭಾರಿ ಕಲೆಕ್ಷನ್ ಮಾಡಿದ ಕೆಜಿಎಫ್ 2 ಮೊದಲ ದಿನ ಅತಿ ಹೆಚ್ಚು ಹಣ ಗಳಿಕೆ ಮಾಡಿದ ಸಿನಿಮಾಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ಬಾಹುಬಲಿ 2 ಸಿನಿಮಾ ಇದೆ. ರಾಜಮೌಳಿಯ ಬಾಹುಬಲಿ 2 ಸಿನಿಮಾ ಮೊದಲ ದಿನವೇ 152 ಕೋಟಿ ರೂಪಾಯಿ ಗಳಿಸಿತ್ತು.

ಮೊದಲ ದಿನದ ಗಳಿಕೆಯ ದಾಖಲೆಗಳನ್ನು ಮುರಿಯಲು ವಿಫಲವಾಗಿರುವ ಆದಿಪುರುಷ್ ಸಿನಿಮಾ ಒಟ್ಟಾರೆ ಗಳಿಕೆ ದಾಖಲೆಯ ಸನಿಹಕ್ಕೆ ಬರುವುದು ಸಹ ಕಷ್ಟಕರವಾಗಿದೆ. ಸಿನಿಮಾ ಬಿಡುಗಡೆ ದಿನವೇ ಸಿನಿಮಾದ ಬಗ್ಗೆ ಭರಪೂರ ಋಣಾತ್ಮಕ ಕಮೆಂಟ್​ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಮೊದಲ ವೀಕೆಂಡ್ ಬಳಿಕ ಆದಿಪುರುಷ್ ಸಿನಿಮಾದ ಕಲೆಕ್ಷನ್ ಧಾರುಣವಾಗಿ ಕುಸಿಯಲಿದೆ ಎಂದು ಕೆಲವು ಟ್ರೇಡ್ ವಿಶ್ಲೇಷಕರು ವಿಶ್ಲೇಷಿಸಿದ್ದಾರೆ.

ಓಂ ರಾವತ್ ನಿರ್ದೇಶನದ ಈ ಸಿನಿಮಾಕ್ಕೆ 500 ಕೋಟಿ ಬಂಡವಾಳ ಹೂಡಲಾಗಿದೆ ಎನ್ನಲಾಗುತ್ತಿದೆ. ಸಿನಿಮಾವನ್ನು ನಿರ್ಮಾಣ ಮಾಡಿರುವುದು ಟಿ-ಸೀರೀಸ್​ನ ಭೂಷಣ್ ಕುಮಾರ್. ಸಿನಿಮಾದಲ್ಲಿ ಪ್ರಭಾಸ್ ಜೊತೆಗೆ ಕೃತಿ ಸೆನನ್, ಸೈಫ್ ಅಲಿ ಖಾನ್, ದೇವದತ್ತ ನಾಗರೆ, ಸನ್ನಿ ಸಿಂಗ್ ಅವರುಗಳು ನಟಿಸಿದ್ದಾರೆ. ಅಜಯ್-ಅತುಲ್ ಸಂಗೀತ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ