
ಬಹುನಿರೀಕ್ಷಿತ ‘ಲಿಯೋ’ ಸಿನಿಮಾದ ಬಿಡುಗಡೆಗೆ ಇನ್ನು ಕೆಲವೇ ದಿನಗಳ ಬಾಕಿ ಇವೆ. ಈ ಹೊತ್ತಿನಲ್ಲಿ ಸಿನಿಮಾದ ಬಗ್ಗೆ ಅನೇಕ ಅಂತೆ-ಕಂತೆಗಳು ಹರಿದಾಡುತ್ತಿವೆ. ಈ ಸಿನಿಮಾಗೆ ಲೋಕೇಶ್ ಕನಗರಾಜ್ ನಿರ್ದೇಶನ ಮಾಡಿದ್ದಾರೆ. ದಳಪತಿ ವಿಜಯ್ (Thalapathy Vijay) ಅವರು ಹೀರೋ ಆಗಿ ನಟಿಸಿದ್ದಾರೆ. ತಮಿಳಿನಲ್ಲಿ ಲೋಕೇಶ್ ಕನಗರಾಜ್ (Lokesh Kanagaraj) ಅವರು ತಮ್ಮದೇ ಸಿನಿಮ್ಯಾಟಿಕ್ ಯೂನಿವರ್ಸ್ ಸೃಷ್ಟಿ ಮಾಡಿದ್ದಾರೆ. ಅಂದರೆ, ಒಂದು ಸಿನಿಮಾದಲ್ಲಿ ಇನ್ನೊಂದು ಸಿನಿಮಾದ ಪಾತ್ರಗಳು ಲಿಂಕ್ ಹೊಂದಿರುತ್ತವೆ. ಈಗ ಈ ಸಿನಿಮ್ಯಾಟಿಕ್ ಯೂನಿವರ್ಸ್ಗೆ ರಾಮ್ ಚರಣ್ (Ram Charan) ಕೂಡ ಸೇರ್ಪಡೆ ಆಗಿರಬಹುದು ಎಂಬ ಗುಮಾನಿ ಮೂಡಿದೆ. ಅದಕ್ಕೆ ಕಾರಣವೂ ಇದೆ.
‘ಲಿಯೋ’ ಸಿನಿಮಾ ಅಕ್ಟೋಬರ್ 19ರಂದು ಬಿಡುಗಡೆ ಆಗಲಿದೆ. ಈಗಾಗಲೇ ಕೆಲವು ಕಡೆಗಳಲ್ಲಿ ಟಿಕೆಟ್ ಬುಕಿಂಗ್ ಶುರುವಾಗಿದೆ. ಅಮೆರಿಕದ ಟಿಕೆಟ್ ಬುಕಿಂಗ್ ವೆಬ್ಸೈಟ್ನಲ್ಲಿ ರಾಮ್ ಚರಣ್ ಹೆಸರು ಕಾಣಿಸಿಕೊಂಡಿದೆ. ಪಾತ್ರವರ್ಗದ ಪಟ್ಟಿಯಲ್ಲಿ ಅವರ ಹೆಸರನ್ನು ಸೇರಿಸಲಾಗಿದೆ. ಹಾಗಾಗಿ ಈ ಸಿನಿಮಾದಲ್ಲಿ ದಳಪತಿ ವಿಜಯ್ ಜೊತೆ ರಾಮ್ ಚರಣ್ ಕೂಡ ನಟಿಸಿರಬಹುದು ಎಂದು ಅನೇಕರು ಊಹಿಸುತ್ತಿದ್ದಾರೆ. ಆದರೆ ಚಿತ್ರತಂಡದವರು ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಿಟ್ಟುಕೊಟ್ಟಿಲ್ಲ.
ಬಹಳ ಅದ್ದೂರಿಯಾಗಿ ಮೂಡಿಬಂದಿರುವ ‘ಲಿಯೋ’ ಸಿನಿಮಾದ ಟ್ರೇಲರ್ನಲ್ಲಿ ಕೆಲವು ಅಂಶಗಳು ಹೈಲೈಟ್ ಆಗಿವೆ. ಇದು ತಮಿಳಿನ ಸಿನಿಮಾ. ಹಾಗಿದ್ದರೂ ಕೂಡ ಇದರ ಟ್ರೇಲರ್ನಲ್ಲಿ ತೆಲಂಗಾಣದ ರಿಜಿಸ್ಟ್ರೇಷನ್ ನಂಬರ್ ಇರುವ ಕಾರು ಕಾಣಿಸಿದೆ. ಈ ಕಾರು ರಾಮ್ ಚರಣ್ ಅವರ ಪಾತ್ರಕ್ಕೆ ಸಂಬಂಧಿಸಿದ್ದು ಎಂಬುದು ಕೆಲವರ ಊಹೆ. ಆದರೆ ಅದು ನಿಜವೋ ಅಲ್ಲವೋ ಎಂಬುದು ಸಿನಿಮಾ ರಿಲೀಸ್ ಆದ ನಂತರವೇ ಗೊತ್ತಾಗಬೇಕಿದೆ.
Leo Movie: ‘ಲಿಯೋ’ ಚಿತ್ರದಲ್ಲಿ ಕಮಲ್ ಹಾಸನ್ ಇದ್ದಾರಾ? ಮುಚ್ಚಿಟ್ಟ ವಿಷಯದ ಬಗ್ಗೆ ಮಾತಾಡಿದ ನಿರ್ದೇಶಕ
ಅಮೆರಿಕದ ಸಿನಿಮಾ ಟಿಕೆಟ್ ಬುಕಿಂಗ್ ವೆಬ್ಸೈಟ್ನವರು ‘ಲಿಯೋ’ ಪಾತ್ರವರ್ಗಕ್ಕೆ ರಾಮ್ ಚರಣ್ ಹೆಸರನ್ನು ಸೇರಿಸಿದ್ದು ಮತ್ತು ಟ್ರೇಲರ್ನಲ್ಲಿ ತೆಲಂಗಾಣದ ಕಾರು ಕಾಣಿಸಿದ್ದನ್ನೇ ಎರಡು ಪ್ರಮುಖ ಸಾಕ್ಷಿಯಾಗಿ ಇಟ್ಟುಕೊಂಡು ನೆಟ್ಟಿಗರು ಈ ವಾದ ಮುಂದಿಡುತ್ತಿದ್ದಾರೆ. ಅಲ್ಲದೇ, ಈ ಸಿನಿಮಾದಲ್ಲಿ ಕಮಲ್ ಹಾಸನ್ ಕೂಡ ನಟಿಸಿದ್ದಾರೆ ಎಂಬ ಗುಸುಗುಸು ಕೇಳಿಬಂದಿತ್ತು. ಆ ಬಗ್ಗೆ ಪ್ರಶ್ನಿಸಿದ್ದಕ್ಕೆ ನಿರ್ದೇಶಕ ಲೋಕೇಶ್ ಕನಗರಾಜ್ ಅವರು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಉತ್ತರಿಸಿದ್ದರು. ಹಾಗಾಗಿ ಪ್ರೇಕ್ಷಕರ ಅನುಮಾನ ಇನ್ನಷ್ಟು ಹೆಚ್ಚಾಗಿದೆ. ಸಿನಿಮಾದಲ್ಲಿನ ಕೆಲವೊಂದು ವಿಚಾರವನ್ನು ಗುಟ್ಟಾಗಿ ಇಡಲಾಗಿದ್ದು, ಅವುಗಳನ್ನು ಜನರು ಚಿತ್ರಮಂದಿರದಲ್ಲೇ ನೋಡಿ ಎಂಜಾಯ್ ಮಾಡಲಿ ಎಂದು ನಿರ್ದೇಶಕರು ಬಯಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.