
ಏಪ್ರಿಲ್ ತಿಂಗಳಲ್ಲಿ ನಡೆದ ಪಹಲ್ಗಾಮ್ ದಾಳಿ, ಅದಕ್ಕೆ ಪ್ರತ್ಯುತ್ತರವಾಗಿ ಭಾರತದ ಆಪರೇಷನ್ ಸಿಂಧೂರ ದಾಳಿಯಿಂದಾಗಿ ಭಾರತ ಮತ್ತು ಪಾಕಿಸ್ತಾನದ ಸಂಬಂಧ ತೀರ ಹದಗೆಟ್ಟಿದೆ. ಭಾರತ ಮತ್ತು ಪಾಕಿಸ್ತಾನದ ಗಡಿಯಲ್ಲಿ ಈಗಲೂ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಈ ನಡುವೆ ಭಾರತದ ಸಿನಿಮಾ ಒಂದು ಪಾಕಿಸ್ತಾನದಲ್ಲಿ ದಾಖಲೆ ಬರೆದಿದೆ. ಭಾರತದಲ್ಲಿ ವಿವಾದ ಮತ್ತು ಚರ್ಚೆಗೆ ಕಾರಣವಾಗಿದ್ದ ಈ ಸಿನಿಮಾ ಪಾಕಿಸ್ತಾನದಲ್ಲಿ ಬಿಡುಗಡೆ ಆಗಿ ದಾಖಲೆ ಬರೆದಿದೆ.
ಖ್ಯಾತ ನಟ, ಗಾಯಕ ದಿಲ್ಜೀತ್ ದುಸ್ಸಾಂಜ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಪಂಜಾಬಿ ಸಿನಿಮಾ ‘ಸರ್ದಾರ್ ಜೀ 3’ ಸಿನಿಮಾ ಕಳೆದ ತಿಂಗಳು 27ರಂದು ಬಿಡುಗಡೆ ಆಗಿತ್ತು. ಈ ಸಿನಿಮಾನಲ್ಲಿ ಪಾಕಿಸ್ತಾನದ ನಟಿ ಹಾನಿಯಾ ಅಮೀರ್ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾ ಭಾರತದ ಜೊತೆಗೆ ಪಾಕಿಸ್ತಾನದಲ್ಲಿಯೂ ಬಿಡುಗಡೆ ಆಗಿದ್ದು, ಭರ್ಜರಿ ಕಲೆಕ್ಷನ್ ಮಾಡಿದೆ. ಮಾತ್ರವಲ್ಲದೆ, ಪಾಕಿಸ್ತಾನದಲ್ಲಿ ದೊಡ್ಡ ಮೊತ್ತ ಹಣ ಗಳಿಸಿದ ಭಾರತೀಯ ಸಿನಿಮಾ ಎಂಬ ದಾಖಲೆಯನ್ನು ತನ್ನ ಹೆಸರಿಗೆ ಮಾಡಿಕೊಂಡಿದೆ.
‘ಸರ್ದಾರ್ ಜೀ 3’ ಸಿನಿಮಾ ಹಾರರ್ ಕಾಮಿಡಿ ಸಿನಿಮಾ ಆಗಿದ್ದು, ಸಿನಿಮಾನಲ್ಲಿ ನೀರು ಭಾಜ್ವಾ, ಹಾನಿಯಾ ಆಮಿರ್, ಜಾಸ್ಮಿನ್ ಬಾಜ್ವಾ, ಸಪ್ಮಾ ಪಡ್ಡಿ ನಾಯಕಿಯರಾಗಿ ನಟಿಸಿದ್ದಾರೆ. ಗುಲ್ಷನ್ ಗ್ರೋವರ್ ಈ ಸಿನಿಮಾದ ವಿಲನ್. ಇದೊಂದು ಪಂಜಾಬಿ ಸಿನಿಮಾ ಆಗಿದ್ದು, ಸಿನಿಮಾಕ್ಕೆ ಮಿಕ್ಸ್ ಸಿಂಗ್ ಸಂಗೀತ ನೀಡಿದ್ದಾರೆ. ಪಾಕಿಸ್ತಾನದಲ್ಲಿ ಉರ್ದು ಜೊತೆಗೆ ಪಂಜಾಬಿ ಭಾಷೆಯನ್ನೂ ಸಹ ಹೆಚ್ಚಾಗಿ ಮಾತನಾಡಲಾಗುತ್ತದೆ. ಇದೇ ಕಾರಣಕ್ಕೆ ಪಾಕಿಸ್ತಾನದಲ್ಲಿ ಪಂಜಾಬಿ ಸಿನಿಮಾಗಳು ಭರ್ಜರಿ ಪ್ರದರ್ಶನ ಕಾಣುತ್ತವೆ.
ಇದನ್ನೂ ಓದಿ:ಬರೋಬ್ಬರಿ 18.30 ಶತಕೋಟಿ: ಪಾಕಿಸ್ತಾನ್ ಆಟಗಾರರ ವೇತನ ಹೆಚ್ಚಳ
‘ಸರ್ದಾರ್ ಜೀ 3’ ಸಿನಿಮಾ ಪಾಕಿಸ್ತಾನದ ಬಾಕ್ಸ್ ಆಫೀಸ್ನಲ್ಲಿ 40.50 ಕೋಟಿ ಪಾಕಿಸ್ತಾನಿ ರೂಪಾಯಿ ಗಳಿಕೆ ಮಾಡಿದೆ. ಅಂದರೆ ಭಾರತದ ರೂಪಾಯಿ ಲೆಕ್ಕಾಚಾರದಲ್ಲಿ 12.21 ಕೋಟಿ ರೂಪಾಯಿ ಹಣವನ್ನು ಈ ಸಿನಿಮಾ ಪಾಕಿಸ್ತಾನದಲ್ಲಿ ಗಳಿಕೆ ಮಾಡಿದೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಈ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ. ಇತರೆ ಭಾಗಗಳಲ್ಲಿ ತುಸು ಕಡಿಮೆ ಪ್ರದರ್ಶನ ಕಂಡಿದೆ. ಈ ಸಿನಿಮಾ ಭಾರತದಲ್ಲಿ ಪಂಜಾಬ್, ಹರಿಯಾಣ ಇನ್ನಿತರೆ ಪಂಜಾಬಿ ಪ್ರಭಾವ ಹೆಚ್ಚಿರುವ ಪ್ರದೇಶಗಳಲ್ಲಿ ಹಾಗೂ ಕೆನಡಾನಲ್ಲಿ ಬಿಡುಗಡೆ ಆಗಿದ್ದು, ಬಿಡುಗಡೆ ಆದಲೆಲ್ಲ ಒಳ್ಳೆಯ ಪ್ರದರ್ಶನ ಕಂಡಿದೆ.
‘ಸರ್ದಾರ್ ಜೀ 3’ ಸಿನಿಮಾಕ್ಕೆ ಮೊದಲ ಪಂಜಾಬಿ ಸಿನಿಮಾ ‘ಜಾಟ್ 3’ ಪಾಕಿಸ್ತಾನದಲ್ಲಿ ಅತಿ ಹೆಚ್ಚು ಹಣ ಗಳಿಸಿದ ಭಾರತದ ಸಿನಿಮಾ ಎನಿಸಿಕೊಂಡಿತ್ತು. ಇದೀಗ ಆ ದಾಖಲೆಯನ್ನು ಮತ್ತೊಂದು ಪಂಜಾಬಿ ಸಿನಿಮಾ ಮುರಿದಿದೆ. ಭಾರತದ ಹಲವಾರು ಸಿನಿಮಾಗಳು ಪಾಕಿಸ್ತಾನದಲ್ಲಿ ಬಿಡುಗಡೆ ಆಗಿ ಉತ್ತಮ ಪ್ರದರ್ಶನ ಕಂಡಿದ್ದಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುವುದರ ಜೊತೆಗೆ ಭಾರತದ ಸಿನಿಮಾಗಳ ಅಕ್ರಮ ಸಿಡಿ ಮಾರಾಟದ ದೊಡ್ಡ ದಂದೆಯೇ ಪಾಕಿಸ್ತಾನದಲ್ಲಿ ನಡೆಯುತ್ತದೆ. ದಕ್ಷಿಣ ಭಾರತದ ಹಲವಾರು ಸಿನಿಮಾಗಳ ಲಕ್ಷಾಂತರ ಸಿಡಿಗಳು ಪಾಕಿಸ್ತಾನದಲ್ಲಿ ಮಾರಾಟ ಆಗಿದ್ದುಂಟು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ