
ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ‘ಆರ್ಆರ್ಆರ್’ (RRR) ಮಾರ್ಚ್ 25ರಂದು ವಿಶ್ವಾದ್ಯಂತ ರಿಲೀಸ್ ಆಗಲಿದೆ. ಮೂಲ ತೆಲುಗಿನ ಈ ಚಿತ್ರ ಹಲವು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಆದರೆ ಕರ್ನಾಟಕದಲ್ಲಿ ಕನ್ನಡ ಅವತರಣಿಕೆಗೆ (RRR Kannada Version) ಶೋಗಳನ್ನು ನೀಡಿಲ್ಲ ಎನ್ನುವುದು ಚಿತ್ರಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ಕಳೆದೆರಡು ದಿನಗಳಿಂದ ಚಿತ್ರತಂಡದ ವಿರುದ್ಧ ಕನ್ನಡಿಗರು ಅಸಮಾಧಾನ ಹೊರಹಾಕುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ‘ಬಾಯ್ಕಾಟ್ ಆರ್ಆರ್ಆರ್ ಇನ್ ಕರ್ನಾಟಕ’ ಟ್ರೆಂಡ್ ಆಗಿದ್ದು, ಚಿತ್ರವನ್ನು ಬಾಯ್ಕಾಟ್ ಮಾಡಲಾಗುವುದು ಎಂದು ಕನ್ನಡ ಪ್ರೇಮಿಗಳು ಎಚ್ಚರಿಸಿದ್ದಾರೆ. ಈ ನಡುವೆ ಚಿತ್ರತಂಡದಿಂದ ಈ ಕುರಿತು ಅಧಿಕೃತ ಸ್ಪಷ್ಟನೆ ಬಂದಿದೆ. ಕರ್ನಾಟಕದಲ್ಲಿ ‘ಆರ್ಆರ್ಆರ್’ ಚಿತ್ರದ ವಿತರಣೆಯ ಹಕ್ಕನ್ನು ಹೊಂದಿರುವ ‘ಕೆವಿಎನ್ ಪ್ರೊಡಕ್ಷನ್ಸ್’ ಈ ಕುರಿತು ಟ್ವಿಟರ್ನಲ್ಲಿ ಮಾಹಿತಿ ನೀಡಿದೆ. ಅದರ ಪ್ರಕಾರ ‘ಆರ್ಆರ್ಆರ್’ ಚಿತ್ರದ ಕನ್ನಡ ಅವತರಣಿಕೆಯನ್ನು ಪ್ರದರ್ಶಿಸಲು ಪ್ರದರ್ಶಕರು ಹಿಂದೆ ಸರಿಯುತ್ತಿದ್ದಾರೆ. ಅವರ ಮನವೊಲಿಸುವ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಲಾಗಿದೆ. ಈ ಬಗ್ಗೆ ನಾಳೆಯೊಳಗೆ (ಗುರುವಾರ) ಸಂಪೂರ್ಣ ಮಾಹಿತಿ ನೀಡುವುದಾಗಿ ತಿಳಿಸಲಾಗಿದೆ.
ಕನ್ನಡ ಅವತರಣಿಕೆ ರಿಲೀಸ್ ಬಗ್ಗೆ ‘ಕೆವಿಎನ್ ಪ್ರೊಡಕ್ಷನ್ಸ್’ ಹೇಳಿಕೆಯ ಪೂರ್ಣ ವಿವರ:
ಕನ್ನಡ ಆವೃತ್ತಿ ರಿಲೀಸ್ ಬಗ್ಗೆ ವಿಶೇಷ ಮನವಿಯನ್ನು ‘ಕೆವಿಎನ್ ಪ್ರೊಡಕ್ಷನ್ಸ್’ ಮಾಡಿದ್ದು ಈ ಮೂಲಕ ಗೊಂದಲಗಳಿಗೆ ತಾತ್ಕಾಲಿಕವಾಗಿ ತೆರೆ ಎಳೆಯುವ ಪ್ರಯತ್ನವನ್ನು ಮಾಡಲಾಗಿದೆ. ಟ್ವೀಟ್ನಲ್ಲಿ ಹೇಳಿದ ಮಾಹಿತಿ ಇಲ್ಲಿದೆ. ‘‘ಆರ್ಆರ್ಆರ್ನ ನಾಯಕ ನಟರಾದ ರಾಮ್ ಚರಣ್ ಹಾಗೂ ಜ್ಯೂ.ಎನ್ಟಿಆರ್ ಕನ್ನಡ ಕಲಿಯಲು ವಿಶೇಷ ಪ್ರಯತ್ನ ಮಾಡಿ ಮೊದಲ ಬಾರಿಗೆ ತಮ್ಮದೇ ಧ್ವನಿಯಲ್ಲಿ ಡಬ್ ಮಾಡಿದ್ದಾರೆ. ನೀವು ಕನ್ನಡ ಭಾಷೆಯಲ್ಲಿ ಈ ಮಹೋನ್ನತ ದೃಶ್ಯ ಕಾವ್ಯವನ್ನು ನೋಡಲು ಇಷ್ಟಪಡುತ್ತೀರಿ ಎಂದು ಭಾವಿಸಿದ್ದೇವೆ’’
‘‘ಆದ್ದರಿಂದ ಆರ್ಆರ್ಆರ್ ಸಿನಿಮಾದ ಕನ್ನಡ ಅವತರಣಿಕೆ ಪ್ರದರ್ಶಿಸಲು ಹಿಂದೇಟು ಹಾಕುತ್ತಿರುವ (ಪ್ರದರ್ಶಕರ) ಥಿಯೇಟರ್ ಮಾಲಿಕರ ಮನವೊಲಿಸುವ ಕಾರ್ಯ ನಡೆಯುತ್ತಿದೆ. ಕನ್ನಡ ಅವತರಣಿಕೆಯನ್ನು ಹೆಚ್ಚಿನ ಸ್ಕ್ರೀನ್ಗಳಲ್ಲಿ ಬಿಡುಗಡೆ ಮಾಡಲು ಎಲ್ಲಾ ಪ್ರಯತ್ನಗಳನ್ನು ಸತತವಾಗಿ ಮಾಡುತ್ತಿದ್ದೇವೆ. ಈ ಬಗ್ಗೆ ನಾಳೆಯೊಳಗೆ ಪೂರ್ಣ ಮಾಹಿತಿ ನೀಡಲಿದ್ದೇವೆ’’ ಎಂದು ಕೆವಿಎನ್ ಪ್ರೊಡಕ್ಷನ್ ಬರೆದಿದೆ.
ಇದರೊಂದಿಗೆ ‘ಆರ್ಆರ್ಆರ್ ಕನ್ನಡ ಆವೃತ್ತಿಯನ್ನು ವೀಕ್ಷಿಸುವ ಮೂಲಕ ಹಾಗೂ ರಾಜ್ಯಾದ್ಯಂತ ಹೆಚ್ಚಿನ ಪರದೆಗಳಲ್ಲಿ ಕನ್ನಡದ ಆವೃತ್ತಿಯನ್ನೇ ಬಿಡುಗಡೆ ಮಾಡೋದಕ್ಕೆ ಬೆಂಬಲ ನೀಡಬೇಕು’ ಎಂದು ನಿರ್ಮಾಣ ಸಂಸ್ಥೆ ಕೋರಿಕೊಂಡಿದೆ.
ಕೆವಿಎನ್ ಪ್ರೊಡಕ್ಷನ್ಸ್ ಟ್ವೀಟ್ ಇಲ್ಲಿದೆ:
‘ಆರ್ಆರ್ಆರ್’ ಚಿತ್ರವು ಮಾರ್ಚ್ 25ರಂದು ತೆರೆಕಾಣುತ್ತಿದೆ. ರಾಮ್ ಚರಣ್ ಹಾಗೂ ಜ್ಯೂ.ಎನ್ಟಿಆರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆಲಿಯಾ ಭಟ್ ಹಾಗೂ ಅಜಯ್ ದೇವಗನ್ ಕೂಡ ಬಣ್ಣಹಚ್ಚಿದ್ದು, ಈಗಾಗಲೇ ಟ್ರೇಲರ್, ಹಾಡುಗಳು ಮನಗೆದ್ದಿವೆ. ಆದರೆ ಬೇರೆಲ್ಲಾ ರಾಜ್ಯಗಳಲ್ಲಿ ಆಯಾ ಭಾಷೆಗಳಲ್ಲಿ ರಿಲೀಸ್ ಆಗುತ್ತಿರುವ ಚಿತ್ರವು ರಾಜ್ಯದಲ್ಲಿ ಕನ್ನಡ ಶೋ ಇಲ್ಲದಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ವಿತರಕರ ಕಡೆಯಿಂದ ಸ್ಪಷ್ಟನೆ ಸಿಕ್ಕಿದ್ದು, ಚಿತ್ರತಂಡ ಸಮಸ್ಯೆ ಬಗೆಹರಿಸಲಿದೆ ಎಂಬ ವಿಶ್ವಾಸದಲ್ಲಿ ಕನ್ನಡಿಗರಿದ್ದಾರೆ.
ಇದನ್ನೂ ಓದಿ:
Samantha: ಮಾಜಿ ಪತಿಯನ್ನು ಅನ್ಫಾಲೋ ಮಾಡಿದ ಸಮಂತಾ; ಫ್ಯಾನ್ಸ್ ಗಮನಿಸಿದ್ರು ಮತ್ತೊಂದು ಅಚ್ಚರಿಯ ವಿಚಾರ
Published On - 6:02 pm, Wed, 23 March 22